ಮೋಸದ ಮಾರಾಟಕ್ಕೆ ಸಿಲುಕದಿರಿ...

7

ಮೋಸದ ಮಾರಾಟಕ್ಕೆ ಸಿಲುಕದಿರಿ...

Published:
Updated:

ಮೋಸ ಹೋಗುವವರು ಇರೋ ತನಕ ಮೋಸ ಮಾಡುವವರೂ ಇದ್ದೇ ಇರ್ತಾರೆ ಎನ್ನುವ ಮಾತಿದೆ. ಅನಾರೋಗ್ಯಕರ ಪೈಪೋಟಿಯ ಕಾರಣ ಮೋಸದ ಮಾರಾಟದ ಭೂತ ಈಗ ಬ್ಯಾಂಕಿಂಗ್, ಇನ್ಶೂರೆನ್ಸ್, ಮ್ಯೂಚುವಲ್ ಫಂಡ್ ಸೇರಿ ಹಣಕಾಸಿನ ಹಲವು ವಲಯಗಳಲ್ಲಿ ವ್ಯಾಪಕವಾಗಿದೆ. ಹಣಕಾಸು ಉತ್ಪನ್ನಗಳ ಬಗ್ಗೆ ಗ್ರಾಹಕ ವಲಯದಲ್ಲಿರುವ ಸೀಮಿತ ಜ್ಞಾನ, ಮೋಸದ ಮಾರಾಟಕ್ಕೆ ವರದಾನವಾಗಿಬಿಟ್ಟಿದೆ. ಆಯಾ ಕಂಪನಿ ಪ್ರತಿನಿಧಿಗಳು ಬಣ್ಣದ ಮಾತುಗಳನ್ನಾಡಿ ಗ್ರಾಹಕರನ್ನು ಮೋಸದ ಬಲೆಗೆ ಬೀಳಿಸುತ್ತಿದ್ದಾರೆ. ಇದನ್ನು ತಡೆಯಲು ಇರುವ ಒಂದೇ ಒಂದು ಮಾರ್ಗವೆಂದರೆ ಹಣಕಾಸು ಉತ್ಪನ್ನಗಳ ಬಗ್ಗೆ ನಿಮ್ಮ ಜ್ಞಾನ ವೃದ್ಧಿಸಿಕೊಳ್ಳುವುದು.

ಟರ್ಮ್ ಇನ್ಶೂರೆನ್ಸ್ ಕೇಳಿದವರಿಗೆ ಎಂಡೋಮೆಂಟ್: ವ್ಯಕ್ತಿಯೊಬ್ಬರು ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿಸಲು ಇನ್ಶೂರೆನ್ಸ್ ಕಂಪನಿಯೊಂದರ ಪ್ರತಿನಿಧಿ ಬಳಿ ಹೋಗುತ್ತಾರೆ. ಆದರೆ, ಆ ಪ್ರತಿನಿಧಿ ಟರ್ಮ್ ಇನ್ಶೂರೆನ್ಸ್‌ನಿಂದ ಯಾವುದೇ ಉಪಯೋಗವಿಲ್ಲ. ನೀವು ಎಂಡೋಮೆಂಟ್ ಪಾಲಿಸಿ ತೆಗೆದುಕೊಂಡರೆ ಕಟ್ಟಿದ ಹಣ ವಾಪಸ್ ಬರುತ್ತದೆ ಎಂದು ಗ್ರಾಹಕನ ಮನವೊಲಿಸುತ್ತಾನೆ. ಗ್ರಾಹಕ ಕೂಡ ಮರು ಚಿಂತನೆ ಮಾಡದೆ ಏಜೆಂಟ್ ಹೇಳಿದ ಹಾಗೆ ಎಂಡೋಮೆಂಟ್ ಪಾಲಿಸಿ ಖರೀದಿಸುತ್ತಾನೆ. ಗ್ರಾಹಕನಿಗೆ ಇಲ್ಲಿ ತನಗೆ ಮೋಸ ಆಗಿದೆ ಎನ್ನುವುದು ಅರಿವಿಗೆ ಬರುವುದೇ ಇಲ್ಲ.

ಟರ್ಮ್ ಲೈಫ್ ಇನ್ಶೂರೆನ್ಸ್ ಕಡಿಮೆ ಪ್ರೀಮಿಯಂ ದರಕ್ಕೆ ಹೆಚ್ಚಿನ ಕವರೇಜ್ ನೀಡುತ್ತದೆ. ಆದರೆ, ಎಂಡೋಮೆಂಟ್ ಪಾಲಿಸಿಯಲ್ಲಿ ಪ್ರೀಮಿಯಂ ಹೆಚ್ಚು, ಕವರೇಜ್ ಹಾಗೂ ರಿಟರ್ನ್ಸ್ ಕೂಡ ಕಡಿಮೆ. ಈ ಅಂಶವನ್ನು ಮರೆಮಾಚಿ ಗ್ರಾಹಕನಿಗೆ ವಂಚಿಸಲಾಗುತ್ತದೆ.

ಇಎಲ್‌ಎಸ್ಎಸ್ ಕೇಳಿದವರಿಗೆ ಯುಲಿಪ್ : ಇತ್ತೀಚೆಗೆ ವ್ಯಕ್ತಿಯೊಬ್ಬರು ತೆರಿಗೆ ಉಳಿತಾಯಕ್ಕಾಗಿ ಒಂದೇ ಬಾರಿಗೆ ₹ 1.5 ಲಕ್ಷವನ್ನು 3 ವರ್ಷಗಳ ‘ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಂ’ನಲ್ಲಿ (ಇಎಲ್‌ಎಸ್ ಎಸ್) ಹೂಡಲು ನಿರ್ಧರಿಸಿ ಬ್ಯಾಂಕ್‌ಗೆ ಹಣ ಪಾವತಿಸಿದರು. ಆದರೆ, ಒಂದು ವರ್ಷದ ಬಳಿಕ ಅವರ ಅಕೌಂಟ್‌ನಲ್ಲಿ ಮತ್ತೆ 1.5 ಲಕ್ಷ ರೂ.ಗಳನ್ನು ಬ್ಯಾಂಕ್ ಮುರಿದುಕೊಂಡಿತು. ಯಾಕೆ ಹೀಗಾಯ್ತು ಎಂದು ಹುಡುಕುತ್ತಾ ಹೋದಾಗ ಬ್ಯಾಂಕ್ ನ ಏಜೆಂಟ್ ಅವರಿಗೆ ಇಎಲ್‌ಎಸ್ಎಸ್ ಬದಲು ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ (ಯುಲಿಪ್) ಮಾರಾಟ ಮಾಡಿದ್ದು ತಿಳಿಯಿತು. ಅಷ್ಟೊತ್ತಿಗೆ ಮೋಸ ಮಾಡಿದ್ದ ಆ ಬ್ಯಾಂಕ್‌ನ ಏಜೆಂಟ್ ವರ್ಗಾವಣೆಯಾಗಿದ್ದರು.

ಕ್ರೆಡಿಟ್ ಕಾರ್ಡ್‌ಗೆ ಇನ್ಶೂರೆನ್ಸ್ ಕಡ್ಡಾಯವೇ?: ವ್ಯಕ್ತಿಯೊಬ್ಬರು ಕ್ರೆಡಿಟ್ ಕಾರ್ಡ್ ನೀಡುವಂತೆ ಬ್ಯಾಂಕ್ ಮೊರೆ ಹೋಗುತ್ತಾರೆ. ಆದರೆ ಬ್ಯಾಂಕ್ ಪ್ರತಿನಿಧಿ ಇನ್ಶೂರೆನ್ಸ್ ತೆಗೆದುಕೊಂಡರಷ್ಟೇ ಕ್ರೆಡಿಟ್ ಕಾರ್ಡ್ ನೀಡಬಹುದು ಎಂದು ಹೇಳುತ್ತಾನೆ. ಗ್ರಾಹಕ ವಿಧಿಯಿಲ್ಲದೆ ಸಮ್ಮತಿಸುತ್ತಾನೆ. ವಾಸ್ತವದಲ್ಲಿ ಕ್ರೆಡಿಟ್ ಕಾರ್ಡ್‌ಗೆ ಇನ್ಶೂರೆನ್ಸ್ ಕಡ್ಡಾಯ ಎಂಬ ನಿಯಮ ಇಲ್ಲ. ಆದರೆ ಏಜೆಂಟ್‌ರು ಗ್ರಾಹಕರ ಮಾಹಿತಿ ಕೊರತೆ ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದಾರೆ.

ಹೀಗೆಲ್ಲಾ ಮೋಸ ಆಗುತ್ತೆ: ಬ್ಯಾಂಕ್ ಲಾಕರ್ ಪಡೆಯಲು ಫಿಕ್ಸೆಡ್ ಡೆಪಾಸಿಟ್ ಮಾಡಿಸಬೇಕು ಎಂಬ ನಿಯಮವಿಲ್ಲ.
ಹೆಲ್ತ್ ಇನ್ಶೂರೆನ್ಸ್‌ನಲ್ಲಿ ವೇಯ್ಟಿಂಗ್ ಪೀರಿಯಡ್ ಇಲ್ಲದೆ ಎಲ್ಲ ರೋಗಗಳಿಗೂ ಚಿಕಿತ್ಸೆ ಇದೆ ಎಂದರೆ ನಂಬಬೇಡಿ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಮಾತ್ರ ಹಿರಿಯ ನಾಗರಿಕರ ಉಳಿತಾಯ ಯೋಜನೆ ಇದೆ ಎನ್ನುವುದು ಸುಳ್ಳು. ಖಾಸಗಿ ಬ್ಯಾಂಕ್‌ಗಳಲ್ಲೂ ಇದು ಲಭ್ಯ.

ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದರೆ ಸರಿಯಾದ ಸೇವೆ ಸಿಗುವುದಿಲ್ಲ ಎಂದು ಏಜೆಂಟ್‌ರು ಹೇಳುತ್ತಾರೆ. ಇದು ಸುಳ್ಳು

(ಮೋಸದ ಮಾರಾಟದಿಂದ ರಕ್ಷಣೆ ಹೇಗೆ? –ಮುಂದಿನ ವಾರ)

(ಲೇಖಕ: ಇಂಡಿಯನ್ ಮನಿಡಾಟ್ ಕಾಂ ಉಪಾಧ್ಯಕ್ಷ)

ಬರಹ ಇಷ್ಟವಾಯಿತೆ?

 • 15

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !