ನವದೆಹಲಿ: ದೇಶೀಯ ಪ್ರಯಾಣಿಕ ವಾಹನಗಳ ಸಗಟು ಮಾರಾಟವು ಜುಲೈ ತಿಂಗಳಲ್ಲಿ ಶೇ 2.5ರಷ್ಟು ಇಳಿಕೆಯಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಬುಧವಾರ ತಿಳಿಸಿದೆ.
ಕಳೆದ ವರ್ಷದ ಜುಲೈನಲ್ಲಿ 3.50 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದವು. ಈ ಜುಲೈನಲ್ಲಿ 3.41 ಲಕ್ಷ ಲಕ್ಷ ಮಾರಾಟವಾಗಿವೆ ಹಣದುಬ್ಬರ ಏರಿಕೆ ಹಾಗೂ ಕೆಲವು ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ, ಮಾರಾಟದ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಿದೆ.
ಯುಟಿಲಿಟಿ ವಾಹನಗಳ ಮಾರಾಟದಲ್ಲಿ ಶೇ 4.1ರಷ್ಟು ಏರಿಕೆಯಾಗಿದ್ದು, 1.88 ಲಕ್ಷ ವಾಹನಗಳು ಮಾರಾಟವಾಗಿವೆ.
14.41 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಜುಲೈನಲ್ಲಿನ ಮಾರಾಟಕ್ಕೆ ಹೋಲಿಸಿದರೆ ಶೇ 12.5ರಷ್ಟು ಏರಿಕೆಯಾಗಿದೆ. ತ್ರಿಚಕ್ರ ವಾಹನಗಳು ಮಾರಾಟದಲ್ಲಿ ಶೇ 5.1ರಷ್ಟು ಹೆಚ್ಚಳವಾಗಿದ್ದು, ಒಟ್ಟು 59,073 ವಾಹನಗಳು ಮಾರಾಟವಾಗಿವೆ.
‘ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆಯಾಗಿದೆ. ಆದರೆ, ಕೆಲವು ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ’ ಎಂದು ಎಸ್‌ಐಎಎಂ ಅಧ್ಯಕ್ಷ ವಿನೋದ್ ಅರ್ಗವಾಲ್ ಹೇಳಿದ್ದಾರೆ.
ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದೆ. ಹಬ್ಬದ ಋತುವಿನಲ್ಲಿ ವಾಹನಗಳ ಮಾರಾಟವು ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಬಜೆಟ್‌ನಲ್ಲಿ ಮೂಲಸೌಕರ್ಯ ಮತ್ತು ಗ್ರಾಮೀಣ ವಲಯದ ಬೆಳವಣಿಗೆಗೆ ಆರ್ಥಿಕ ನೆರವು ಘೋಷಿಸಿರುವುದು ವರದಾನವಾಗಲಿದೆ ಎಂದು ಹೇಳಿದ್ದಾರೆ.