ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಲಾದಿಂದ ಚಾಲಕರಹಿತ ಕಾರು | ಆ. 8ಕ್ಕೆ ರೋಬೊ ಟ್ಯಾಕ್ಸಿ ಅನಾವರಣ: ಇಲಾನ್ ಮಸ್ಕ್‌

Published 6 ಏಪ್ರಿಲ್ 2024, 16:00 IST
Last Updated 6 ಏಪ್ರಿಲ್ 2024, 16:00 IST
ಅಕ್ಷರ ಗಾತ್ರ

ಸ್ಯಾನ್‌ಫ್ರಾನ್ಸಿಸ್ಕೊ: ಅಮೆರಿಕದ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ ಟೆಸ್ಲಾ ಅಭಿವೃದ್ಧಿಪಡಿಸಿರುವ ಚಾಲಕರಹಿತ ರೋಬೊ ಟ್ಯಾಕ್ಸಿಯು ಆಗಸ್ಟ್‌ 8ರಂದು ಅನಾವರಣಗೊಳ್ಳಲಿದೆ. 

ಟೆಸ್ಲಾ ಮುಖ್ಯಸ್ಥ ಇಲಾನ್‌ ಮಸ್ಕ್‌ ಅವರು ಶನಿವಾರ ಈ ಬಗ್ಗೆ ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಷೇರುಪೇಟೆಯಲ್ಲಿ ಕಂಪನಿಯ ಷೇರಿನ ಮೌಲ್ಯ ಶೇ 3ರಷ್ಟು ಏರಿಕೆಯಾಗಿದೆ.

ಸ್ವಯಂಚಾಲಿತ ರೋಬೊ ಟ್ಯಾಕ್ಸಿಯು ಉತ್ತಮ ಸಾಮರ್ಥ್ಯ ಹೊಂದಿದೆ ಎಂಬ ಮಸ್ಕ್‌ ಅವರ ಭರವಸೆಯ ಹೊರತಾಗಿಯೂ, ಈ ಕಾರಿನ ವೇಗಮಿತಿ ಮತ್ತು ಸುರಕ್ಷತೆ ಬಗ್ಗೆ ಅಲ್ಲಿನ ಸಾರ್ವಜನಿಕರಲ್ಲಿ ಕಳವಳ ವ್ಯಕ್ತವಾಗಿದೆ.

ಟೆಸ್ಲಾ ಕಾರಿನಲ್ಲಿ ಇರುವ ಸ್ವಯಂಚಾಲಿತ ವ್ಯವಸ್ಥೆಗೆ ‘ಆಟೊಪೈಲಟ್‌’ ಎಂದು ಕರೆಯಲಾಗುತ್ತದೆ. ಈ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಸಮೂಹ ಸಾರಿಗೆ ವ್ಯವಸ್ಥೆಯಾಗಿ ಜನಪ್ರಿಯಗೊಳಿಸುವುದು ಮಸ್ಕ್‌ ಅವರ ಯೋಜನೆ.  

ಅಗ್ಗದ ದರದ ಸಣ್ಣ ಕಾರುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಟೆಸ್ಲಾ ಮುಂದಾಗಿತ್ತು. ಮಸ್ಕ್‌ ಅವರ ದೀರ್ಘಕಾಲದ ಈ ಯೋಜನೆಯನ್ನು ಸದ್ಯ ಕಂಪನಿಯು ಕೈಬಿಟ್ಟಿದೆ ಎಂದು ಹೇಳಲಾಗಿದೆ. ಆದರೆ, ಮಸ್ಕ್‌ ಇದನ್ನು ನಿರಾಕರಿಸಿದ್ದಾರೆ.‌

ಗೂಗಲ್‌ ಕಂಪನಿಯ ಸ್ವಯಂಚಾಲಿತ ‘ವೇಮೊ’ ಕಾರುಗಳು ಈಗಾಗಲೇ ಅಮೆರಿಕದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಇವುಗಳ ವಿರುದ್ಧ ಟ್ಯಾಕ್ಸಿ ಚಾಲಕರಿಂದ ವಿರೋಧವೂ ವ್ಯಕ್ತವಾಗಿದೆ. ಅಡ್ಡಾದಿಡ್ಡಿಯಾಗಿ ಚಲಿಸಿದ ಕೆಲವು ಕಾರುಗಳು ಜನರ ಆಕ್ರೋಶಕ್ಕೆ ತುತ್ತಾಗಿ ಬೆಂಕಿಗಾಹುತಿಯಾಗಿವೆ. ಈ ನಡುವೆಯೇ ಜಿಎಂ ಮೋಟರ್ಸ್ ತನ್ನ ಒಡೆತನದ ಸ್ವಯಂಚಾಲಿತ ಕಾರು ‘ಕ್ರೂಸ್‌’ ಸೇವೆಯನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸ್ಥಗಿತಗೊಳಿಸಿದೆ.  

ಯೋಜನೆಗೆ ವಿಳಂಬ ಏಕೆ?

2019ರಲ್ಲಿ ಮಸ್ಕ್‌ ಅವರು ರೋಬೊ ಟ್ಯಾಕ್ಸಿ ಬಗ್ಗೆ ಪ್ರಕಟಿಸಿದ್ದರು. ಈ ಕಾರು ಖರೀದಿಸುವ ಮಾಲೀಕರು ಟ್ಯಾಕ್ಸಿ ಸೇವೆಗೂ ಇದನ್ನು ಬಳಸಬಹುದಾಗಿದೆ ಎಂದು ಹೇಳಿದ್ದರು. 2020ರಲ್ಲಿ ಅಮೆರಿಕದ ರಸ್ತೆಗಳಿಗೆ ಈ ಕಾರುಗಳು ಇಳಿಯಲಿವೆ ಎಂದು ಹೇಳಲಾಗಿತ್ತು. ಆದರೆ ಟೆಸ್ಲಾದ ಆಟೊಪೈಲಟ್‌ ತಂತ್ರಜ್ಞಾನಕ್ಕೆ ಸರ್ಕಾರದ ಪರವಾನಗಿ ಸಿಕ್ಕಿರಲಿಲ್ಲ.

ಕಾರಿನ ಸ್ವಯಂಚಾಲಿತ ಬೀಟಾ ಸಾಫ್ಟ್‌ವೇರ್‌ನಲ್ಲಿ ದೋಷವಿರುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತವು (ಎನ್‌ಎಚ್‌ಟಿಎಸ್‌ಎ) ಆಕ್ಷೇಪ ವ್ಯಕ್ತಪಡಿಸಿತ್ತು. ಕಾರಿನ ವೇಗದ ಮಿತಿಗೆ ಧಕ್ಕೆ ಅಥವಾ ಅಸುರಕ್ಷಿತ ಚಾಲನೆಗೆ ಈ ಸಾಫ್ಟ್‌ವೇರ್‌ ಕಾರಣವಾಗಲಿದೆ ಎಂದು ಹೇಳಿತ್ತು. ಹಾಗಾಗಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT