ಜಿಡಿಪಿ: ರಫ್ತು ಕೊಡುಗೆ ಇಳಿಕೆ

ಸೋಮವಾರ, ಮೇ 27, 2019
23 °C
ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಕುಸಿದ ಪಾಲು

ಜಿಡಿಪಿ: ರಫ್ತು ಕೊಡುಗೆ ಇಳಿಕೆ

Published:
Updated:
Prajavani

ನವದೆಹಲಿ: ದೇಶದ ಆರ್ಥಿಕ ವೃದ್ಧಿ ದರಕ್ಕೆ (ಜಿಡಿಪಿ) ರಫ್ತು ವಲಯದ ಕೊಡುಗೆಯು ಕಳೆದ ಐದು ವರ್ಷಗಳಲ್ಲಿ ಕಡಿಮೆಯಾಗಿದೆ.

2018–19ರ ಹಣಕಾಸು ವರ್ಷದಲ್ಲಿ ರಫ್ತು ಪ್ರಮಾಣವು ದಾಖಲೆ ಮಟ್ಟಕ್ಕೆ ತಲುಪಿದೆ ಎಂದು ಕೇಂದ್ರ ಸರ್ಕಾರವು ಪ್ರತಿಪಾದಿಸಿದೆ. ಆದರೆ, ಶೇಕಡಾವಾರು ಪ್ರಮಾಣದಲ್ಲಿ ಜಿಡಿಪಿಗೆ ರಫ್ತು ಕೊಡುಗೆ ಪ್ರಮಾಣ ಕಡಿಮೆಯಾಗಿರುವುದನ್ನು  ಅಂಕಿ ಅಂಶಗಳು ದೃಢಪಡಿಸುತ್ತವೆ.

ಎನ್‌ಡಿಎ ಅಧಿಕಾರಕ್ಕೆ ಬಂದ ನಂತರದ ಐದು ವರ್ಷಗಳಲ್ಲಿ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ರಫ್ತು ವಲಯದ ಕೊಡುಗೆಯು ಶೇ 15 ರಿಂದ ಶೇ 11ಕ್ಕೆ ಇಳಿದಿದೆ.

2018–19ರ ಹಣಕಾಸು ವರ್ಷ ಹೊರತುಪಡಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಜಿಡಿಪಿಯಲ್ಲಿನ ರಫ್ತು ಪಾಲು ಯುಪಿಎ ಸರ್ಕಾರದ ಅವಧಿಯಲ್ಲಿನ (2013–14ರ) ಮಟ್ಟಕ್ಕೆ ಯಾವತ್ತೂ ತಲುಪಿಲ್ಲ.

2018–19ರಲ್ಲಷ್ಟೇ ಸರಕುಗಳ ಸಾಗರೋತ್ತರ ಸಾಗಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ
₹ 23.17 ಲಕ್ಷ ಕೋಟಿಗೆ ತಲುಪಿದೆ.

2016ರಲ್ಲಿನ ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಬೆನ್ನಲ್ಲೇ ರಫ್ತು ವಹಿವಾಟು ₹ 18.34 ಲಕ್ಷ ಕೋಟಿಗೆ ಕುಸಿದಿತ್ತು. ಇದು 15 ವರ್ಷಗಳಲ್ಲಿನ ಕನಿಷ್ಠ ಮೊತ್ತವಾಗಿತ್ತು. ‘ಜಿಡಿಪಿ’ಯಲ್ಲಿನ ರಫ್ತಿನ ಪಾಲು ಶೇ 10.40ರಷ್ಟಾಗಿತ್ತು.

ಐದು ವರ್ಷಗಳಲ್ಲಿ, ಐರೋಪ್ಯ ಒಕ್ಕೂಟ, ಉತ್ತರ ಅಮೆರಿಕ, ಆಸಿಯಾನ್‌ ದೇಶಗಳು, ಚೀನಾ ಮತ್ತು ಪೂರ್ವ ಏಷ್ಯಾದ ದೇಶಗಳ ಜತೆಗಿನ ರಫ್ತು ವಹಿವಾಟು ಗಮನಾರ್ಹವಾಗಿ ಕುಸಿತ ಕಂಡಿದೆ.

ಅಂಕಿಅಂಶಗಳ ಪ್ರಕಾರ, ಚೀನಾಕ್ಕೆ ರಫ್ತು ಮಾಡಿದ ಪ್ರಮಾಣವೂ ಕುಸಿದಿದೆ. ಆದರೆ, ಚೀನಾದ ಆಮದು ಪ್ರಮಾಣ ಶೇ 11ರಷ್ಟು ಏರಿಕೆಯಾಗಿದೆ.

ಫಲ ನೀಡದ ಭಾರತದಲ್ಲಿಯೇ ತಯಾರಿಸಿ: ‘ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಭಾರತದಲ್ಲಿಯೇ ತಯಾರಿಸಿ’ ಕಾರ್ಯಕ್ರಮವು ದೇಶಿ ರಫ್ತು ವಹಿವಾಟು ಹೆಚ್ಚಿಸಲು ಹೆಚ್ಚಿನ ಕೊಡುಗೆಯನ್ನೇನೂ ನೀಡಿಲ್ಲ. ಇದಕ್ಕೆಲ್ಲ ನೋಟು ರದ್ದತಿ ಮತ್ತು ಜಿಎಸ್‌ಟಿ ಕಾರಣ’ ಎಂದು ಮೋರ್ಗನ್‌ ಸ್ಟ್ಯಾನ್ಲಿಯ ರುಚಿರ್‌ ಶರ್ಮಾ ಹೇಳಿದ್ದಾರೆ.

‘ನೋಟು ರದ್ದತಿ ನಿರ್ಧಾರವು ದೇಶಿ ತಯಾರಕರಿಗೆ ಭಾರಿ ಸಂಕಷ್ಟ ತಂದೊಡ್ಡಿತ್ತು. ಸರಕುಗಳ ತಯಾರಿಕೆ ಕುಸಿದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಜಿಎಸ್‌ಟಿ ಜಾರಿಗೆ ಬಂದ ನಂತರ ರಫ್ತುದಾರರಿಗೆ ಸಕಾಲದಲ್ಲಿ ಮರುಪಾವತಿಯೂ ಆಗಿರಲಿಲ್ಲ. ಇದರಿಂದಲೂ ರಫ್ತು ವಹಿವಾಟು ಕುಸಿದಿದೆ’ ಎಂದು ಮಾಜಿ ಮುಖ್ಯ ಸಾಂಖ್ಯಿಕತಜ್ಞ ಪ್ರಣವ್‌ ಸೇನ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !