ಶುಕ್ರವಾರ, ಏಪ್ರಿಲ್ 23, 2021
27 °C

ಹಣಕಾಸಿನ ವಿಚಾರದಲ್ಲಿ ನೀವು ಸ್ಮಾರ್ಟ್‌ ಆಗಿದ್ದೀರಾ?

ಹೀನಾ ಮೆಹ್ತಾ Updated:

ಅಕ್ಷರ ಗಾತ್ರ : | |

ದೇಶದ ಒಟ್ಟಾರೆ ದುಡಿಯುವ ವರ್ಗದ ಶೇ 40ರಷ್ಟು ಕಾರ್ಮಿಕರು 1980ರ ದಶಕದ ನಂತರ ಜನಿಸಿದವರು. ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಈ ಸಮುದಾಯ ಒಳ್ಳೆಯ ಉದ್ಯೋಗ ಹಾಗೂ ಹೆಚ್ಚಿನ ವೇತನ ಗಳಿಸುತ್ತಿದೆ. ಆದರೂ, ಹೊಸ ಆರ್ಥಿಕ ಪರಿಸರದ ಲಾಭ ಮಾಡಿಕೊಳ್ಳುವ ಬದಲು ಈ ತಲೆಮಾರು ತಮ್ಮ ಆರ್ಥಿಕ ನಿರ್ವಹಣೆಗೆ ಹಳೆಯ ಪದ್ಧತಿಯನ್ನೇ ಹೆಚ್ಚಾಗಿ ಅನುಸರಿಸುತ್ತಿದೆ.

ನಾಳೆ ಎಂಬುದು ಇಲ್ಲವೇ ಇಲ್ಲ ಎಂಬಂತೆ ನಾವಿಂದು ಖರ್ಚು ಮಾಡುತ್ತಿರಬಹುದು. ಆದರೆ, ನಾಳೆ ಎಂಬುದು ತುಂಬ ದೂರ ಇಲ್ಲ ಎಂದು ಭಾವಿಸಿ ಉಳಿತಾಯವನ್ನೂ ಮಾಡುತ್ತೇವೆ ಅಲ್ಲವೇ. ಗೊಂದಲವಾಯಿತೇ. ಹಣಕಾಸು ನಿರ್ವಹಣೆಯ ವಿಚಾರದಲ್ಲಿ ನಮ್ಮ ಹೊಸ ತಲೆಮಾರು ಇಂತಹ ಅನೇಕ ವಿರೋಧಾಭಾಸಗಳಲ್ಲಿ ಬದುಕುತ್ತಿದೆ. ಆದರೆ ಹಣಕಾಸಿಗೆ ಸಂಬಂಧಿಸಿದ ಇಂಥ ಸಮಸ್ಯೆಗಳಿಗೆ ಪರಿಹಾರವು ಅತ್ಯಂತ ಸರಳವಾಗಿದೆ.

‘ಸಲಹೆ’ಗಳು ಬೇಕಾದಷ್ಟು ಸಿಗುತ್ತವೆ. ನೀವು ಚಿಕ್ಕ ವಯಸ್ಸಿನವರಾಗಿದ್ದರೆ ಹೆಚ್ಚು ಹೆಚ್ಚು ಸಲಹೆಗಳು ನಿಮ್ಮತ್ತ ಬರುತ್ತವೆ. ಆದರೆ, ನೀವು ಅವುಗಳನ್ನು ಪಾಲಿಸುವ ಸಾಧ್ಯತೆ ಕಡಿಮೆಯೇ. ನೀವು 22ರಿಂದ 35 ವರ್ಷದವರಾಗಿದ್ದರೆ ನಿಮಗೊಂದಿಷ್ಟು ಬುದ್ಧಿ ಮಾತುಗಳನ್ನು ಹೇಳಬೇಕಾಗಿದೆ. ಅದು ನಿಮಗೆ ಸಹಕಾರಿಯಾಗಬಹುದು.

ಸಂಪತ್ತನ್ನು ಸೃಷ್ಟಿಸುವುದು (ಹಣ ಸಂಪಾದನೆ) ಭಾರತೀಯ ಯುವ ಸಮುದಾಯದ ಮೊದಲ ಆದ್ಯತೆಯಾಗಿದೆ ಎಂದು ಸಮೀಕ್ಷೆಯೊಂದು ಹೇಳುತ್ತದೆ. ಮಹಿಳೆಯರು ಸಂಪತ್ತು ಸೃಷ್ಟಿಸಲು ಪುರುಷರು ಕೊಟ್ಟಿದ್ದಕ್ಕಿಂತ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ. ಹಿಂದಿನ ತಲೆಮಾರಿನವರು ಅನುಸರಿಸುತ್ತಿದ್ದ ಹಣಕಾಸು ಯೋಜನೆಗಳನ್ನೇ ಇವರು ಸಹ ಅನುಸರಿಸುತ್ತಿದ್ದರೂ, ಅವರಿಗೆ ಹೋಲಿಸಿದರೆ ಇಂದಿನ ಯುವ ತಲೆಮಾರು ಹೆಚ್ಚಿನ ಸಂಪಾದನೆ ಮಾಡಬಹುದಾದ ಸ್ಥಿತಿಯಲ್ಲಿದೆ.

ಹಿಂದಿನವರಿಗೆ ಹೋಲಿಸಿದರೆ ನಮ್ಮ ಜೀವನಶೈಲಿಯೂ ಭಿನ್ನವಾದುದು. ಅಲ್ಪಾವಧಿಯ ಗುರಿಗಳನ್ನು ಸಾಧಿಸಲು ನಾವು ಮದುವೆ, ಮಕ್ಕಳು ಮುಂತಾದ ವೈಯಕ್ತಿಕ ಅಗತ್ಯಗಳನ್ನು ಮುಂದೂಡುತ್ತಾ ಹೋಗುತ್ತೇವೆ. ಹೆಚ್ಚು ಸಂಪಾದಿಸಿ ಹೆಚ್ಚು ವೆಚ್ಚವನ್ನೂ ಮಾಡುತ್ತೇವೆ. ನಿಜ, ಆದರೆ ಆರ್ಥಿಕ ವಿಚಾರದಲ್ಲಿ ನಮ್ಮ ಹಿಂದಿನ ತಲೆಮಾರಿನವರು ಅಂದುಕೊಂಡಷ್ಟು ನಾವು ದುರ್ಬಲರಲ್ಲ. ನಮ್ಮ ಗಳಿಕೆಯಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವನ್ನೂ ಮಾಡಿರುತ್ತೇವೆ.

ಮುಂದೊಂದು ದಿನ ಸ್ವಂತ ಮನೆಯನ್ನು ಹೊಂದಬೇಕು ಎಂಬ ಬಹುದೊಡ್ಡ ಗುರಿಯನ್ನು ನಮ್ಮಲ್ಲಿ ಹೆಚ್ಚಿನವರು ಹೊಂದಿರುತ್ತಾರೆ. ಸರಿಯಾದ ಹಣಕಾಸು ಯೋಜನೆಗಳನ್ನು ರೂಪಿಸಿದರೆ ನಾವು ನಮ್ಮ ಪಾಲಕರು ಮಾಡಿರುವುದಕ್ಕಿಂತ ಉತ್ತಮ ಸಾಧನೆಯನ್ನು ಮಾಡಬಲ್ಲೆವು. ಆದರೆ, ಅಂತಹ ಹಣಕಾಸು ಯೋಜನೆಗಳನ್ನು ಆರಂಭಿಸುವುದು ಹೇಗೆ. ಇಲ್ಲಿವೆ ಕೆಲವು ಸಲಹೆಗಳು.

ಭವಿಷ್ಯದ ಸಿದ್ಧತೆ ಮಾಡಿಕೊಳ್ಳಿ

ನಮ್ಮ ಹಿರಿಯರು ಭವಿಷ್ಯದ ಮೇಲೆ ಹೆಚ್ಚು ಗಮನವನ್ನು ಕೆಂದ್ರೀಕರಿಸಿದ್ದರು. ಆದ್ದರಿಂದ ಸಣ್ಣ ವಯಸ್ಸಿನಲ್ಲೇ ಮನೆ– ಮಕ್ಕಳಿಗಾಗಿ ಉಳಿತಾಯವನ್ನು ಆರಂಭಿಸಿದ್ದರು. ಆದರೆ ನಾವು ಇಂದು ಮತ್ತು ಈಗಿನ ಬಗ್ಗೆ ಮಾತ್ರ ಚಿಂತೆ ಮಾಡುತ್ತೇವೆ. ಆದರೂ ಹೆರಿಗೆ ರಜೆ, ಮಕ್ಕಳ ಶಾಲಾ ಶುಲ್ಕ, ನಿವೃತ್ತಿ ನಂತರದ ಬದುಕು, ಆರೋಗ್ಯ ರಕ್ಷಣೆಯ ವೆಚ್ಚ... ಹೀಗೆ ಅನೇಕ ವಿಚಾರಗಳ ಬಗ್ಗೆ ಸ್ಪಷ್ಟ ಯೋಜನೆಗಳಿಲ್ಲ. ಈ ಎಲ್ಲ ಉದ್ದೇಶಗಳಿಗಾಗಿ ಒಂದಿಷ್ಟು ಹಣವನ್ನೇಕೆ ಪ್ರತ್ಯೇಕವಾಗಿ ತೆಗೆದಿಡಬಾರದು? ಹಣಕಾಸು ಯೋಜನೆ ರೂಪಿಸುವ ಸಂದರ್ಭ ಬಂದಾಗ ನೆನಪಿಟ್ಟುಕೊಳ್ಳಬೆಕಾದ ವಿಚಾರವೆಂದರೆ, ‘ಬೇಗನೆ ಆರಂಭಿಸಿದರೆ ಕಡಿಮೆ ಪಾವತಿಸುತ್ತೀರಿ’ ಎಂಬುದು. ಕಡಿಮೆ ಮಾವತಿಸಿದರೂ ಬಡ್ಡಿ ಮಾತ್ರ ಹೆಚ್ಚು ಲಭಿಸುತ್ತದೆ... ಎರಡೂ ಕಡೆಯಿಂದ ನಮಗೇ ಲಾಭವಾಗುತ್ತಿದೆ ಎಂಬುದನ್ನು ಮರೆಯಬಾರದು.

ಬಜೆಟ್‌ ಮಾಡಿಕೊಳ್ಳಿ

ಯುವ ಸಮುದಾಯಕ್ಕೆ ವೆಚ್ಚದ ಮೇಲೆ ನಿಯಂತ್ರಣ ಇರುವುದಿಲ್ಲ. ಅನೇಕ ಸಂದರ್ಭದಲ್ಲಿ ಜೀವನಶೈಲಿಯ ವೆಚ್ಚಗಳನ್ನು ಭರಿಸಲಾಗದೆ ಸಾಲ ಅಥವಾ ಕ್ರೆಡಿಟ್‌ ಕಾರ್ಡ್‌ಗಳಿಗೆ ಮೊರೆ ಹೋಗುತ್ತದೆ. ಖರೀದಿ, ಪ್ರವಾಸ, ಹೋಟೆಲ್‌ನಲ್ಲಿ ಊಟ ಮಾಡುವುದೇ ಮುಂತಾದ ವೆಚ್ಚಗಳ ಮೇಲೆ ಒಂದಿಷ್ಟು ನಿಯಂತ್ರಣ ಇಟ್ಟುಕೊಳ್ಳಿ. ಹಾಗೆಂದು ಎಲ್ಲವನ್ನೂ ಬಿಟ್ಟು ಬಿಡಬೇಕಾಗಿಲ್ಲ. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೂ ಸಾಕು. ಹೀಗೆ ಮಾಡಿ ತಿಂಗಳ ಬಜೆಟ್‌ ಅನ್ನು ರೂಪಿಸಿ ನೋಡಿ. ನೀವು ಸಣ್ಣಪುಟ್ಟ ವಿಚಾರಗಳಿಗಾಗಿ ಅದೆಷ್ಟು ಖರ್ಚು ಮಾಡುತ್ತಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ. ಅವುಗಳ ಮೇಲೆ ನಿಯಂತ್ರಣ ಸಾಧಿಸಿ. ಹೀಗೆ ಉಳಿಸಿದ ಹಣವನ್ನು ರಜಾಕಾಲದ ಪ್ರವಾಸಕ್ಕೆ ಬಳಸಿಕೊಳ್ಳಬಹುದು.

ಮ್ಯೂಚುವಲ್‌ ಫಂಡ್‌ ಆಯ್ದುಕೊಳ್ಳಿ

ಷೇರು ಪೇಟೆ ಭಾರಿ ಹಿಂಜರಿತ ಕಾಣುತ್ತಿದ್ದ ಸಮಯದಲ್ಲೇ ಇಂದಿನ ಬಹುತೇಕ ಯುವ ಜನಾಂಗ ತಮ್ಮ ವೃತ್ತಿ ಬದುಕನ್ನು ಆರಂಭಿಸಿದೆ. ಷೇರು ಪೇಟೆಯಲ್ಲಿ ಹಣ ತೊಡಗಿಸಬೇಕು ಎಂಬ ಆಸೆ ಎಲ್ಲರಲ್ಲೂ ಇದೆ. ವಿಶೇಷವಾಗಿ ಈ ವಯಸ್ಸಿನ ಸ್ತ್ರೀಯರಿಗಿಂತ ಪುರುಷರೇ ಹೆಚ್ಚಾಗಿ ಷೇರು ಪೇಟೆಯಲ್ಲಿ ಹೂಡಿಕೆ ಮಾಡುವ ಆಸಕ್ತಿ ತೋರುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಅದರಲ್ಲಿ ತಪ್ಪಿಲ್ಲ. ಆದರೆ ವಯಸ್ಸಾದ ನಂತರ ಹೂಡಿಕೆ ಆರಂಭಿಸುವ ಬದಲು ಸಣ್ಣ ವಯಸ್ಸಿನಲ್ಲೇ ಆರಂಭಿಸಬಹುದಲ್ಲ? ಅದರಲ್ಲೂ ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರು ಪೇಟೆಯಲ್ಲಿ ಹಣ ತೊಡಗಿಸಿದರೆ ಅಪಾಯದ ಪ್ರಮಾಣವೂ ಕಡಿಮೆ ಇರುತ್ತದೆ. ಮಾರುಕಟ್ಟೆಯ ಏರುಪೇರನ್ನು ಮ್ಯೂಚುವಲ್‌ಫಂಡ್‌ಗಳು ತಡೆಯುತ್ತವೆ.

ಆರೋಗ್ಯ ವಿಮೆ ಇರಲಿ

ಯುವಕರಿದ್ದಾಗ ‘ನಮಗೇನೂ ಅಗುವುದಿಲ್ಲ’ ಎಂಬ ಭಾವನೆ ಮೂಡುವುದು ಸಹಜವೇ. ಆದರೂ ಮುನ್ನೆಚ್ಚರಿಕೆಯಾಗಿ ಒಂದಷ್ಟು ಕ್ರಮಗಳನ್ನು ಕೈಗೊಳ್ಳುವುದರಲ್ಲಿ ತಪ್ಪೇನಿದೆ. ಹೆಚ್ಚಿನ ಯುವಕರು ತಮ್ಮ ಸಂಸ್ಥೆಯವರು ನೀಡುವ ಉಚಿತ ವಿಮಾ ಸೌಲಭ್ಯವನ್ನೇ ನೆಚ್ಚಿಕೊಂಡಿರುತ್ತಾರೆ. ನೀವಾಗಿಯೇ ಒಂದು ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರಿಂದ ಆಗುವ ಲಾಭ ಹೆಚ್ಚಿದೆ. ಸಣ್ಣ ವಯಸ್ಸಿನಲ್ಲೇ ಮಾಡುವ ಆರೋಗ್ಯ ವಿಮೆಯಿಂದ ಕಡಿಮೆ ಕಂತಿನಲ್ಲಿ ಹೆಚ್ಚಿನ ಲಾಭ ಮಾಡಿಕೊಳ್ಳಬಹುದು. ಜೊತೆಗೆ ಇದಕ್ಕೆ ತೆರಿಗೆ ರಿಯಾಯಿತಿಯೂ ಇದೆ. ಒಂದು ವೇಳೆ ಒತ್ತಡದ ಕೆಲಸದಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಬೇಕಾದ ಸಂದರ್ಭ ಬಂದರೆ ಅಥವಾ ವೃತ್ತಿಯಿಂದ ಒಂದಿಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕೆಂಬ ಭಾವನೆ ನಿಮಗೆ ಬಂದರೆ, ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಇಚ್ಛೆಯಂತೆ ಬದುಕಲು ಸಾಧ್ಯವಾಗುತ್ತದೆ.

ಸಣ್ಣ ವಯಸ್ಸಿನವರಿಗೆ ಇಂದು ಹೆಚ್ಚು ಅವಕಾಶಗಳು ಇವೆ. ಅವಕಾಶಗಳನ್ನು ಕಳೆದುಕೊಂಡು ಯಾವುದೋ ಕಾಲದಲ್ಲಿ ಪರಿತಪಿಸುವ ಬದಲು ಈಗಲೇ ಅವುಗಳನ್ನು ಬಳಸಿಕೊಂಡು ಭವಿಷ್ಯದ ಸಿದ್ಧತೆಗಳನ್ನು ಮಾಡಬಹುದು.

(ಲೇಖಕಿ: ಬೇಸಿಸ್ ಸಂಸ್ಥೆಯ ಸಿಇಒ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು