ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರದಿಂದ ಎಫ್‌ಎಂಸಿಜಿ ಮಾರಾಟಕ್ಕೆ ಪೆಟ್ಟು

Last Updated 4 ಮಾರ್ಚ್ 2022, 16:16 IST
ಅಕ್ಷರ ಗಾತ್ರ

ಬೆಂಗಳೂರು: ಹಣದುಬ್ಬರ ಏರಿಕೆ ಆಗುತ್ತಿರುವ ಕಾರಣ ಗ್ರಾಹಕರು ತೀರಾ ಅಗತ್ಯವಲ್ಲದ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ವಸ್ತುಗಳ (ಎಫ್‌ಎಂಸಿಜಿ) ತಯಾರಕರಲ್ಲಿ ತಮ್ಮ ಉತ್ಪನ್ನಗಳ ಮಾರಾಟದಲ್ಲಿ ಬೆಳವಣಿಗೆ ಕಾಣಬಹುದೇ ಎಂಬ ಆತಂಕ ಸೃಷ್ಟಿಯಾಗಿದೆ.

ಫೆಬ್ರುವರಿ ತಿಂಗಳಿನಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಶೇಕಡ 92ರಷ್ಟು ಕುಟುಂಬಗಳು ಅಗತ್ಯವಲ್ಲದ ಉತ್ಪನ್ನಗಳ ಮೇಲೆ ಕಡಿಮೆ ಖರ್ಚು ಮಾಡಿವೆ ಎಂದು ‘ಆ್ಯಕ್ಸಿಸ್‌ ಮೈ ಇಂಡಿಯಾ’ ನಡೆಸಿದ ಗ್ರಾಹಕರ ಸಮೀಕ್ಷೆಯು ಹೇಳಿದೆ. ‘ಸದ್ಯದ ಸಂದರ್ಭದಲ್ಲಿ ಹಣದುಬ್ಬರ ಹೆಚ್ಚಿರುವ ಕಾರಣದಿಂದಾಗಿ, ಮಾರಾಟದ ಪ್ರಮಾಣವು ಹೆಚ್ಚಳ ಕಾಣುವ ಸಾಧ್ಯತೆ ಕ್ಷೀಣ’ ಎಂದು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪಾಲುದಾರ ನಮಿತ್ ಪುರಿ ಹೇಳಿದ್ದಾರೆ.

ಎಫ್‌ಎಂಸಿಜಿ ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ಪದಾರ್ಥಗಳ ಬೆಲೆಯು ಹೆಚ್ಚಾಗಿರುವುದನ್ನು ನಿಭಾಯಿಸಲು ಕಂಪನಿಗಳು ಈಚಿನ ತ್ರೈಮಾಸಿಕಗಳಲ್ಲಿ ಬೆಲೆ ಹೆಚ್ಚಳ ಹಾಗೂ ಉತ್ಪನ್ನಗಳ ತೂಕವನ್ನು ಕಡಿಮೆ ಮಾಡುವ ತಂತ್ರದ ಮೊರೆ ಹೋಗಿದ್ದಾರೆ.

ಆರ್ಥಿಕ ಹಿಂಜರಿತ ಇದ್ದರೂ ಎಫ್‌ಎಂಸಿಜಿ ಉತ್ಪನ್ನಗಳ ಮಾರಾಟದ ಪ್ರಮಾಣದಲ್ಲಿ ಕುಸಿತ ಆಗುತ್ತಿರಲಿಲ್ಲ. ಆದರೆ, ಈಗ ಇದು ಕಳವಳ ಮೂಡಿಸುತ್ತ ಇದೆ ಎಂದು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಐಟಿಸಿ ವಿತರಕರೊಬ್ಬರು ಹೇಳಿದರು.

ಮುಂದಿನ ದಿನಗಳಲ್ಲಿ ಬೇಡಿಕೆಯು ಹೆಚ್ಚಳ ಕಾಣಲಿದೆ ಎಂಬ ವಿಶ್ವಾಸ ಇದೆ. ಆದರೆ, ಮತ್ತೆ ಕೋವಿಡ್ ಅಲೆಗಳು ಬರದಿದ್ದರೆ ಸಾಕು ಎಂದು ಅವರು ಹೇಳಿದರು. ಈ ಕುರಿತು ಐಟಿಸಿ ಕಂಪನಿ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT