ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದೇಶಿ ವ್ಯಾಪಾರ ಏರುಪೇರು

Last Updated 11 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಈ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ದೇಶದ ವಿದೇಶಿ ವ್ಯಾಪಾರದಲ್ಲಿ ಭಾರಿ ಪ್ರಮಾಣದಲ್ಲಿ ಏರುಪೇರಾಗಿದೆ. ಸರಕುಗಳ ಆಮದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದರೆ, ರಫ್ತು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಪರಿಣಾಮವಾಗಿ ದೇಶದ ವಿದೇಶಿ ವ್ಯಾಪಾರ ಕೊರತೆಯು ಐದೇ ತಿಂಗಳಲ್ಲಿ ಶೇ 45ರಷ್ಟು ಏರಿಕೆ ದಾಖಲಿಸಿದೆ.

ಯಾವುದೇ ದೇಶದ ಆರ್ಥಿಕತೆಯ ಸ್ಥಿತಿಯನ್ನು ಆಯಾ ದೇಶದ ಆಮದು ಮತ್ತು ರಫ್ತು ಸೂಚಿಸುತ್ತದೆ. ರಫ್ತು ಮತ್ತು ಆಮದು ಮೊತ್ತದಲ್ಲಿನ ಏರಿಕೆಯು ದೇಶದ ಆರ್ಥಿಕತೆಯು ಪ್ರಗತಿ ಸಾಧಿಸುತ್ತಿರುವುದನ್ನು ಸೂಚಿಸುತ್ತದೆ. ಎರಡೂ ಸ್ವರೂಪದ ವ್ಯಾಪಾರವು ಇಳಿಕೆಯಾದರೆ, ಆರ್ಥಿಕತೆಯ ಪ್ರಗತಿ ಕುಂಠಿತವಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ಆಮದು ಏರಿಕೆಯಾಗಿ, ರಫ್ತು ಇಳಿಕೆಯಾದರೆ ಅದನ್ನು ಪ್ರತಿಕೂಲ ವ್ಯಾಪಾರ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಹೀಗಾದಾಗ ದೇಶದ ವ್ಯಾಪಾರ ಕೊರತೆ ಏರಿಕೆಯಾಗುತ್ತದೆ. ಈ ಪರಿಸ್ಥಿತಿಯು ದೇಶದ ಆರ್ಥಿಕತೆಯು ವಿಷಮ ಸ್ಥಿತಿಯಲ್ಲಿ ಇರುವುದನ್ನು ಸೂಚಿಸುತ್ತದೆ. ಭಾರತದ ಆರ್ಥಿಕತೆಯೂ ಈ ಸ್ಥಿತಿಯನ್ನು ತಲುಪಿದೆ ಎಂಬುದನ್ನು ಈ ದತ್ತಾಂಶಗಳು ಸೂಚಿಸುತ್ತವೆ

Caption
Caption

ಹಿಗ್ಗಿದ ವ್ಯಾಪಾರ ಕೊರತೆ

ದೇಶದ ವಿದೇಶಿ ವ್ಯಾಪಾರ ಕೊರತೆ ಈ ಆರ್ಥಿಕ ವರ್ಷದ ಮೊದಲ ಐದು ತಿಂಗಳಲ್ಲಿ ಭಾರಿ ಏರಿಕೆಯಾಗಿದೆ. ರಫ್ತಾದ ಸರಕಿನ ಮೌಲ್ಯ ಮತ್ತು ಆಮದಾದ ಸರಕಿನ ಮೌಲ್ಯದ ನಡುವಣ ವ್ಯತ್ಯಾಸವನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ. ರಫ್ತಾದ ಸರಕಿನ ಮೌಲ್ಯಕ್ಕಿಂತ ಆಮದಾದ ಸರಕಿನ ಮೌಲ್ಯವು ಕಡಿಮೆ ಇದ್ದರೆ, ಅದನ್ನು ಅನುಕೂಲಕರ ವ್ಯಾಪಾರ ಕೊರತೆ ಎಂದು ಕರೆಯಲಾಗುತ್ತದೆ.

ಆದರೆ, ರಫ್ತಾದ ಸರಕಿನ ಮೌಲ್ಯಕ್ಕಿಂತ ಆಮದಾದ ಸರಕಿನ ಮೌಲ್ಯವು ಅಧಿಕವಾಗಿದ್ದರೆ, ಅದನ್ನು ಪ್ರತಿಕೂಲ ವ್ಯಾಪಾರ ಕೊರತೆ ಎಂದು ಪರಿಗಣಿಸಲಾಗುತ್ತದೆ. ಭಾರತದ ವಿದೇಶಿ ವ್ಯಾಪಾರದಲ್ಲಿ ಇಂತಹ ಸ್ಥಿತಿ ಇದೆ. ಆದರೆ, ಇಂತಹ ಪ್ರತಿಕೂಲ ವ್ಯಾಪಾರದ ಕೊರತೆ ಹೆಚ್ಚಾಗುತ್ತಲೇ ಇದೆ. ಇದು ಆರ್ಥಿಕತೆಯು ಕುಂಠಿತ ಪ್ರಗತಿ ದಾಖಲಿಸುತ್ತಿರುವುದನ್ನು ಸೂಚಿಸುತ್ತದೆ. ಆಮದು ಮೌಲ್ಯ ಹೆಚ್ಚಾಗುತ್ತಿರುವುದು ಮತ್ತು ರಫ್ತಿನ ಮೌಲ್ಯ ಸತತ ಇಳಿಕೆಯಾಗುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆಮದಿನ ಮೇಲಿನ ಅವಲಂಬನೆಯನ್ನು ತಗ್ಗಿಸಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತದಲ್ಲೇ ತಯಾರಿಸಿ, ವೋಕಲ್ ಫಾರ್ ಲೋಕಲ್‌, ಆತ್ಮನಿರ್ಭರ ಭಾರತದಂತಹ ಅಭಿಯಾನಗಳನ್ನು ಸರ್ಕಾರ ಜಾರಿಗೆ ತಂದಿದೆ. ಆದರೆ, ಈ ಅಭಿಯಾನಗಳು ದೇಶದ ವಿದೇಶಿ ವ್ಯಾಪಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿಲ್ಲ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ.

ಸೇವಾ ವಲಯದಲ್ಲೂ ಕುಂಠಿತ ಪ್ರಗತಿ

Caption
Caption

2022-23ನೇ ಆರ್ಥಿಕ ವರ್ಷ ಆರಂಭವಾದ ಬಳಿಕ ದೇಶದ ಸೇವಾ ವಲಯದ ರಫ್ತು ಮೌಲ್ಯ ಇಳಿಮುಖವಾಗಿದೆ ಎಂದು ವಾಣಿಜ್ಯ ಸಚಿವಾಲಯದ ದತ್ತಾಂಶಗಳು ಹೇಳುತ್ತವೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ದತ್ತಾಂಶಗಳು ಲಭ್ಯವಿದ್ದು, ಈ ಐದೂ ತಿಂಗಳ ರಫ್ತು ಮೌಲ್ಯವನ್ನು ಗಮನಿಸಿದರೆ, ಇಳಿಮುಖ ಪ್ರವೃತ್ತಿ ಕಂಡುಬಂದಿದೆ.

ಏಪ್ರಿಲ್ ತಿಂಗಳಲ್ಲಿ₹1.73 ಲಕ್ಷ ಕೋಟಿ ಮೌಲ್ಯದ ಸೇವೆಗಳನ್ನು ರಫ್ತು ಮಾಡಲಾಗಿತ್ತು. ಈ ಪ್ರಮಾಣವುಮೇ ತಿಂಗಳಲ್ಲಿ ₹1.83 ಲಕ್ಷ ಕೋಟಿಗೆ ಹಾಗೂಜೂನ್ ತಿಂಗಳಲ್ಲಿ ₹1.99 ಲಕ್ಷ ಕೋಟಿಗೆ ಏರಿಕೆಯಾಯಿತು. ಆದರೆ, ಜುಲೈನಲ್ಲಿ ₹1.85 ಲಕ್ಷ ಕೋಟಿಗೆ ಕುಸಿತಕಂಡಿತು. ಆಗಸ್ಟ್‌ನಲ್ಲಿ ₹1.86 ಲಕ್ಷ ಕೋಟಿ ದಾಖಲಿಸಿತು. ಜೂನ್ ತಿಂಗಳಿಗೆ ಹೋಲಿಸಿದರೆ, ಆಗಸ್ಟ್‌ನಲ್ಲಿ ಸುಮಾರು ₹11 ಸಾವಿರ ಕೋಟಿ ರೂಪಾಯಿ ಮೌಲ್ಯದ ರಫ್ತು ಖೋತಾ ಆಗಿದೆ.

ಸೇವಾ ವಲಯದ ರಫ್ತು ಮೌಲ್ಯ ಲೆಕ್ಕಾಚಾರದಲ್ಲಿ ಅಮೆರಿಕದ ಡಾಲರ್ ಮುಖ್ಯ ಪಾತ್ರವಹಿಸುತ್ತದೆ. ಏಪ್ರಿಲ್ ತಿಂಗಳಿನಲ್ಲಿ ಅಮೆರಿಕದ ಒಂದು ಡಾಲರ್‌ ಎದುರು ಭಾರತದ ಕರೆನ್ಸಿ ಸರಾಸರಿ 76 ರೂಪಾಯಿ ಮೌಲ್ಯ ಹೊಂದಿತ್ತು. ಆಗಸ್ಟ್ ವೇಳೆಗೆ ಕರೆನ್ಸಿ ಮೌಲ್ಯವು ಸರಾಸರಿ80 ರೂಪಾಯಿಗೆ ಕುಸಿಯಿತು. ಈ ಕಾರಣದಿಂದ, ಭಾರತಕ್ಕೆ ಹೆಚ್ಚು ಡಾಲರ್ ಸಿಗುತ್ತಿದೆ. ಸೇವಾ ವಲಯದ ರಫ್ತು ಮೌಲ್ಯ ಇಳಿಮುಖವಾಗಿದ್ದರೂ ಸಹ ರೂಪಾಯಿ ಮೌಲ್ಯ ಕುಸಿದಿರುವ ಕಾರಣಕ್ಕೆ, ಅದು ಗಮನಾರ್ಹ ಮಟ್ಟದಲ್ಲಿದೆ. ಉದಾಹರಣೆಗೆ, ರೂಪಾಯಿ ಮೌಲ್ಯವು ಏಪ್ರಿಲ್‌ನಲ್ಲಿ ಇದ್ದಷ್ಟೇ (₹76) ಇದ್ದಿದ್ದರೆ, ಆಗಸ್ಟ್ ತಿಂಗಳ ಸೇವಾ ವಲಯದ ರಫ್ತು ಮೌಲ್ಯ ₹1.78 ಲಕ್ಷ ಕೋಟಿಗಷ್ಟೇ ಸೀಮಿತವಾಗಿರುತ್ತಿತ್ತು. ರೂಪಾಯಿ ಮೌಲ್ಯ ಕುಸಿದಿರುವುದರಿಂದ, ರಫ್ತು ಮಾಡಲಾದ ಸೇವೆಗಳ ಮೌಲ್ಯವು ಆಗಸ್ಟ್‌ನಲ್ಲಿ ₹1.86 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ, ಸುಮಾರು ಎಂಟು ಸಾವಿರ ಕೋಟಿ ರೂಪಾಯಿ ಹೆಚ್ಚುವರಿಯಾಗಿ ಲಭಿಸಲು ರೂಪಾಯಿ ಮೌಲ್ಯ ಕುಸಿತ ಕಾರಣವಾಗಿದೆ.

Caption
Caption

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT