ಬೆಂಗಳೂರು: ಫಾಕ್ಸ್‌ಕಾನ್ ಕಂಪನಿಯು ಮುಂದಿನ ವರ್ಷದೊಳಗೆ ಭಾರತದಲ್ಲಿ ತನ್ನ ಸಿಬ್ಬಂದಿ ಸಂಖ್ಯೆ ಮತ್ತು ಹೂಡಿಕೆಯನ್ನು ದುಪ್ಪಟ್ಟುಗೊಳಿಸಲು ಉದ್ದೇಶಿಸಿದೆ ಎಂದು ಭಾರತದಲ್ಲಿನ ಕಂಪನಿಯ ಪ್ರತಿನಿಧಿ ವಿ. ಲೀ ಅವರು ಭಾನುವಾರ ತಿಳಿಸಿದ್ದಾರೆ.
ತೈವಾನ್ ಮೂಲದ ಕಂಪನಿಯು ಚೀನಾದಿಂದ ಹೊರಬರುವ ಪ್ರಯತ್ನದ ಭಾಗವಾಗಿ ಭಾರತದಲ್ಲಿ ಬಹಳ ವೇಗವಾಗಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ದೇಶದ ದಕ್ಷಿಣ ಭಾಗದಲ್ಲಿ ತಯಾರಿಕಾ ಘಟಕ ಸ್ಥಾಪನೆಗಾಗಿ ಹೂಡಿಕೆ ಮಾಡುತ್ತಿದೆ.
ಕಂಪನಿಯು ತನ್ನ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿಕೊಳ್ಳಲು, ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಾಡಲು ಮತ್ತು ವಹಿವಾಟಿನ ಗಾತ್ರ ಹೆಚ್ಚಿಸಿಕೊಳ್ಳುವ ಯೋಜನೆ ಹೊಂದಿದೆ ಎಂದು ಲೀ ಅವರು ತಮ್ಮ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಈ ಕುರಿತು ಅವರು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಫಾಕ್ಸ್‌ಕಾನ್ ಕಂಪನಿಯು ಈಗಾಗಲೇ ತಮಿಳುನಾಡಿನಲ್ಲಿ ಐಫೋನ್ ತಯಾರಿಕಾ ಘಟಕವನ್ನು ಹೊಂದಿದ್ದು, 40 ಸಾವಿರಕ್ಕೂ ಅಧಿಕ ಸಿಬ್ಬಂದಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾರತದಲ್ಲಿ ಸಾಕಷ್ಟು ಅವಕಾಶಗಳು ಇರುವುದು ಕಾಣುತ್ತಿದೆ ಎಂದು ಕಂಪನಿ ಅಧ್ಯಕ್ಷ ಲಿ ಯಾಂಗ್ ವೇ ಅವರು ಕಳೆದ ತಿಂಗಳು ಹೇಳಿದ್ದರು. ಭಾರತದಲ್ಲಿ ಈಗಾ ಮಾಡಿರುವು ಹೂಡಿಕೆಯು ಆರಂಭವಷ್ಟೇ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.