ವಿದೇಶಿ ಬಂಡವಾಳ ಹೊರಹರಿವು 10 ವರ್ಷಗಳಲ್ಲಿಯೇ ಗರಿಷ್ಠ

7

ವಿದೇಶಿ ಬಂಡವಾಳ ಹೊರಹರಿವು 10 ವರ್ಷಗಳಲ್ಲಿಯೇ ಗರಿಷ್ಠ

Published:
Updated:

ನವದೆಹಲಿ : ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2018ರ ಮೊದಲಾರ್ಧದಲ್ಲಿ ದೇಶದ ಬಂಡವಾಳ ಮಾರುಕಟ್ಟೆಯಿಂದ ₹ 48 ಸಾವಿರ ಕೋಟಿ ಹಿಂದಕ್ಕೆ ಪಡೆದಿದ್ದಾರೆ.

10  ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಹೂಡಿಕೆದಾರರು ಗರಿಷ್ಠ ಪ್ರಮಾಣದಲ್ಲಿ ಬಂಡವಾಳ ಹಿಂದಕ್ಕೆ ಪಡೆದಂತಾಗಿದೆ. 2008ರ ಜನವರಿ–ಜೂನ್‌ ಅವಧಿಯಲ್ಲಿ ₹ 24,758 ಕೋಟಿ ಹಿಂದಕ್ಕೆ ಪಡೆದಿದ್ದರು.

ಕಚ್ಚಾ ತೈಲ ದರ ಏರಿಕೆ ಮತ್ತು ಜಾಗತಿಕ ವಾಣಿಜ್ಯ ಸಮರದ ಕಾರಣಗಳಿಂದಾಗಿ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಾಗುತ್ತಿದೆ.

‘ಕಚ್ಚಾ ತೈಲ ದರ ಏರಿಕೆಯಿಂದ ಚಾಲ್ತಿ ಖಾತೆ ಕೊರತೆ ಹೆಚ್ಚಾಗುತ್ತಿದೆ. ಇದು ರೂಪಾಯಿ ದರದ ಮೇಲೆ ಒತ್ತಡ ತರುತ್ತಿದೆ. ಚಿಲ್ಲರೆ ಹಣದುಬ್ಬರ ಏರಿಕೆಯಾಗುತ್ತಿರುವುದೂ ಈ ಒತ್ತಡವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಕಡಿಮೆ ವಿನಿಮಯ ದರ ಮತ್ತು ಗರಿಷ್ಠ ಬಡ್ಡಿದರದಿಂದಾಗಿ ವಿದೇಶಿ ಹೂಡಿಕೆದಾರರಿಗೆ ಡಾಲರ್‌ ಗಳಿಕೆ ತಗ್ಗುತ್ತಿದೆ. ಹೀಗಾಗಿ ಪೇಟೆಯಿಂದ ಬಂಡವಾಳ ಹಿಂದಕ್ಕೆ ಪಡೆಯುತ್ತಿದ್ದಾರೆ’ ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ರಿಟೇಲ್‌ ಬ್ರೋಕಿಂಗ್‌ ಮುಖ್ಯಸ್ಥ ರಾಜೀವ್‌ ಶ್ರೀವಾಸ್ತವ ಹೇಳಿದ್ದಾರೆ.

ಅಮೆರಿಕದ ಫೆಡರಲ್‌ ರಿಸರ್ವ್ ಬಡ್ಡಿದರದಲ್ಲಿ ಏರಿಕೆ ಮಾಡಿದೆ. ಇದರಿಂದ ಹೂಡಿಕೆದಾರರಿಗೆ ಸುಲಭವಾಗಿ ಸಾಲ ಸಿಗದೇ ಹೂಡಿಕೆ ಪ್ರಮಾಣ ತಗ್ಗುತ್ತಿದೆ ಎಂದೂ ತಿಳಿಸಿದ್ದಾರೆ.

‘ಈ ವರ್ಷ ವಿದೇಶಿ ಹೂಡಿಕೆಗೆ ಪ್ರತಿಕೂಲ ವಾತಾವರಣ ನಿರ್ಮಾಣವಾಗಿದೆ. ವಿನಿಮಯ ವಹಹಿವಾಟು ನಿಧಿಗಳಲ್ಲಿಯೂ ಬಂಡವಾಳ ಹೂಡಿಕೆ ಆಗುತ್ತಿಲ್ಲ. ಇನ್ನೂ ಹಲವು ಅಂಶಗಳು ಹೂಡಿಕೆ ತಗ್ಗುವಂತೆ ಮಾಡಿವೆ’ ಎಂದು ಮಾರ್ನಿಂಗ್‌ಸ್ಟಾರ್‌ ಇಂಡಿಯಾದ ಹಿರಿಯ ವಿಶ್ಲೇಷಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

’ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಿಸುವ ಪ್ರವೃತ್ತಿ ಮುಂದುವರಿಸಿದಲ್ಲಿ ಕರೆನ್ಸಿ ಮೌಲ್ಯ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಬಡ್ಡಿದರ ಏರಿಕೆಯು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ದೃಷ್ಟಿಯಿಂದ ಶುಭಸೂಚಕವಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !