ಸೋಮವಾರ, ಮಾರ್ಚ್ 30, 2020
19 °C

ಭಾರತದಲ್ಲಿ ಫ್ಯೂಜಿಫಿಲ್ಮ್‌ ಕ್ಯಾಮೆರಾ ಕಣ್ಣು

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಫ್ಯೂಜಿಫಿಲ್ಮ್‌ ಇಂಡಿಯಾ ಕಂಪನಿಯು ಭಾರತದಲ್ಲಿ ಮಿರರ್‌ಲೆಸ್‌ ಮಾರುಕಟ್ಟೆಯಲ್ಲಿ ಉತ್ತಮ ಪ್ರಗತಿ ಸಾಧಿಸುವ ವಿಶ್ವಾಸದೊಂದಿಗೆ ಹೆಜ್ಜೆ ಇಟ್ಟಿದೆ.

ಫ್ಯೂಜಿಫಿಲ್ಮ್‌ ಹೆಸರು ಕೇಳಿದಾಕ್ಷಣ ಫಿಲ್ಮ್ ಕ್ಯಾಮೆರಾ ಕಂಪನಿ ಎನ್ನುವ ಭಾವನೆ ಬರುವುದು ಸಹಜ. ಆದರೆ, ಅದರಾಚೆಗೂ ಫೋಟೊ ಇಮೇಜಿಂಗ್‌ ಮೆಡಿಕಲ್‌ ಪ್ರಾಡಕ್ಟ್ಸ್‌, ಗ್ರಾಫಿಕ್‌ ಆರ್ಟ್ಸ್‌, ಮೋಷನ್‌ ಪಿಕ್ಟರ್ಸ್‌, ರೆಕಾರ್ಡಿಂಗ್ ಮೀಡಿಯಾ ಮತ್ತು ಇಂಡಸ್ಟ್ರಿಯಲ್‌ ಪ್ರಾಡಕ್ಟ್‌ಗಳಿಗೆ ಸಂಬಂಧಿಸಿದ ಸೇವೆಗಳನ್ನೂ ಈ ಕಂಪನಿ ಒದಗಿಸುತ್ತಿದೆ. 

1934ರಲ್ಲಿ ಟೋಕಿಯೊದಲ್ಲಿ ಫಿಲ್ಮ್‌ ರೋಲ್‌ ತಯಾರಿಕೆ ಆರಂಭಿಸಿದ ಫ್ಯೂಜಿ ಫೋಟೊ ಫಿಲ್ಮ್‌ ಕಾರ್ಪೊರೇಷನ್‌ ಲಿಮಿಟೆಡ್‌, ಬದಲಾದ ಕಾಲಕ್ಕೆ ಅನುಗುಣವಾಗಿ ವಹಿವಾಟಿನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಬಂದಿದೆ. ಫ್ಯೂಜಿಫಿಲ್ಮ್‌ ಹೋಲ್ಡಿಂಗ್ಸ್‌ ಕಾರ್ಪೊರೇಷನ್‌ ಹೆಸರಿನಲ್ಲಿ ಜಾಗತಿಕವಾಗಿ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದೆ. 2007ರಲ್ಲಿ ಭಾರತದಲ್ಲಿ ಫ್ಯೂಜಿಫಿಲ್ಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸ್ಥಾಪಿಸಲಾಯಿತು. 

‘ಭಾರತವನ್ನೂ ಒಳಗೊಂಡು ಜಾಗತಿಕ ಮಾರುಕಟ್ಟೆಯಲ್ಲಿ ಈಗ ಡಿಎಸ್‌ಎಲ್‌ಆರ್‌ ಕ್ಯಾಮೆರಾಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಮಿರರ್‌ಲೆಸ್‌ ಕ್ಯಾಮೆರಾ ಬಳಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ನಾವು ಮಿರರ್‌ಲೆಸ್‌ ಕ್ಯಾಮೆರಾದ ಬಗ್ಗೆ ಮಾತ್ರವೇ ಗಮನ ಕೇಂದ್ರೀಕರಿಸಿದ್ದೇವೆ’ ಎಂದು ಫ್ಯೂಜಿಫಿಲ್ಮ್‌ ಇಂಡಿಯಾದ ಜನರಲ್‌ ಮ್ಯಾನೇಜರ್ ಅರುಣ್‌ ಬಾಬು ಹೇಳುತ್ತಾರೆ.

‘ಕಳೆದ ಕೆಲವು ವರ್ಷಗಳಿಂದ ಡಿಜಿಟಲ್‌ ಕ್ಯಾಮೆರಾ ಮಾರುಕಟ್ಟೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಿವೆ. ಇದರಿಂದಾಗಿಯೇ ಭಾರವಾದ ಲೆನ್ಸ್‌ಗಳುಳ್ಳ ಡಿಎಸ್ಎಲ್‌ಆರ್‌ ಕ್ಯಾಮೆರಾಗಳಿಗೆ ಬದಲಾಗಿ ಹಗುರಾದ ಕಾಂಪ್ಯಾಕ್ಟ್‌ ಸರಣಿಯ ಮಿರರ್‌ಲೆಸ್‌ ಕ್ಯಾಮೆರಾಗಳು ಆಕರ್ಷಿಸುತ್ತಿವೆ. ಮಿರರ್‌ಲೆಸ್‌ ಕ್ಯಾಮೆರಾಗಳ ತೂಕವು ಡಿಎಸ್ಎಲ್‌ಆರ್‌ಗಿಂತಲೂ ಶೇ 50ರಷ್ಟು ಕಡಿಮೆ ಇದೆ. ಇದರಿಂದಾಗಿಯೇ ಮಿರರ್‌ಲೆಸ್‌ ಕ್ಯಾಮೆರಾಗಳು ಜನಪ್ರಿಯತೆ ಹೆಚ್ಚಾಗುತ್ತಿದೆ.

‘ಭಾರತದಲ್ಲಿ 2018ರ ಮಾರ್ಚ್‌ ಅಂತ್ಯಕ್ಕೆ ಮಿರರ್‌ಲೆಸ್‌ ಕ್ಯಾಮೆರಾದ ಮಾರುಕಟ್ಟೆ ಪಾಲು 20ರಷ್ಟಿದ್ದು, 2020ರ ವೇಳೆಗೆ ಶೇ 49ಕ್ಕೆ ಏರಿಕೆಯಾಗಲಿದೆ. ಫ್ಯೂಜಿಫಿಲ್ಮ್‌ ಕೂಡಾ ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಶೇ 15ರಷ್ಟು ಮಾರುಕಟ್ಟೆ ಪಾಲು ಹೊಂದುವ ನಿರೀಕ್ಷೆ ಇಟ್ಟುಕೊಂಡಿದೆ.

‘2018ರಲ್ಲಿ 6 ಕ್ಯಾಮೆರಾ ಬಿಡುಗಡೆ ಮಾಡಲಾಗಿದ್ದು, ಶೇ 290 ರಷ್ಟು ಮಾರಾಟ ಪ್ರಗತಿ ಸಾಧ್ಯವಾಗಿದೆ. 2019ರಲ್ಲಿ ಇಲ್ಲಿಯವರೆಗೆ ಒಟ್ಟಾರೆ ಮೂರು ಹೊಸ ಕ್ಯಾಮೆರಾ ಬಿಡುಗಡೆ ಮಾಡಲಾಗಿದೆ. ಈ ವರ್ಷವೂ ಮೂರಂಕಿ ಪ್ರಗತಿ ಸಾಧಿಸುವ ವಿಶ್ವಾಸವಿದೆ. ಅಮೆಚೂರ್, ವಿಡಿಯೊ ಕ್ಯಾಮೆರಾ, ಸಿನಿಮಾ, ಕಮರ್ಷಿಯಲ್, ಟ್ರಾವೆಲ್ ಹೀಗೆ ಯಾವುದೇ ಬಗೆಯ ಫೋಟೊಗ್ರಫಿಗೂ ಒಪ್ಪುವಂತಹ ಎಕ್ಸ್‌ ಮತ್ತು ಇಎಫ್‌ಎಕ್ಸ್‌ ಸರಣಿಗಳ ಕ್ಯಾಮೆರಾಗಳನ್ನು ನೀಡುತ್ತಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

‘ಭಾರತವು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಾಗಿದೆ. ಹೀಗಾಗಿ ಗ್ರಾಹಕರ ಬೇಡಿಕೆ ಮತ್ತು ನಿರೀಕ್ಷೆಗಳಿಗೆ ಅನುಗುಣವಾದ ಕ್ಯಾಮೆರಾವನ್ನು ನೀಡುತ್ತಿದ್ದೇವೆ. ಶ್ರಮವಿಲ್ಲದೆ ಕ್ಲಿಕ್‌ ಮತ್ತು ಷೇರ್‌ ಮಾಡಲು ಆಗುವಂತಹ ಸಾಧನಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ’ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಹರುಟೊ ಇವಾಟ.

ಎಕ್ಸ್‌–ಎ7: ಫ್ಯೂಜಿಫಿಲ್ಮ್‌ ಇಂಡಿಯಾ ಕಂಪನಿಯು ರಾಜ್ಯದ ಮಾರುಕಟ್ಟೆಗೆ ಹೊಸ ಮಿರರ್‌ಲೆಸ್‌ ಕ್ಯಾಮೆರಾ ಎಕ್ಸ್‌–ಎ7 ಬಿಡುಗಡೆ ಮಾಡಿದೆ.  ಐದು ಬಣ್ಣಗಳಲ್ಲಿ ಲಭ್ಯವಿದ್ದು, ಎಕ್ಸ್‌ಸಿ 15–45ಎಂಎಂ ಲೆನ್ಸ್‌ ಕಿಟ್‌ನೊಂದಿಗೆ ₹ 59,999 ನಿಗದಿ ಮಾಡಲಾಗಿದೆ.

‘ರೆಟ್ರೋ ಶೈಲಿಯ ವಿನ್ಯಾಸ ಹೊಂದಿರುವ ಕ್ಯಾಮೆರಾದ ತೂಕ 320ಗ್ರಾಂ ಇದೆ. 3.5 ಇಂಚು ಎಲ್‌ಸಿಡಿ, ವೇರಿ ಆ್ಯಂಗಲ್‌ ಮಾನಿಟರ್‌ ಹೊಂದಿದೆ. ನವೀನ ತಂತ್ರಜ್ಞಾನ ಮತ್ತು ವೈಶಿಷ್ಟ್ಯಗಳಿಂದಾಗಿ ನಮ್ಮ ಗ್ರಾಹಕರಿಗೆ ಇಷ್ಟವಾಗಲಿದೆ.

‘ಟಚ್‌ ಸ್ಕ್ರೀನ್‌ ಆಯ್ಕೆ ಇರುವುದರಿಂದ ಸ್ಮಾರ್ಟ್‌ ಮೆನುವಿನಲ್ಲಿ ಶೂಟಿಂಗ್‌ ಸೆಟ್ಟಿಂಗ್ಸ್‌ ಅನ್ನು ಸುಲಭವಾಗಿ ಹೊಂದಿಸಿಕೊಳ್ಳಬಹುದು. ಬ್ಲೂಟೂತ್‌ ಮೂಲಕ, ಫ್ಯೂಜಿಫಿಲ್ಮ್‌ ರಿಮೋಟ್‌ ಆ್ಯಪ್‌ ನೆರವಿನಿಂದ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗೆ ಫೋಟೊ, ವಿಡಿಯೊ ಸುಲಭವಾಗಿ ವರ್ಗಾಯಿಸಬಹುದು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೊಳ್ಳಬಹುದು. ಫೋಟೊ, ವಿಡಿಯೊ ಗಾತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಕೇಬಲ್‌ ನೆರವಿನಿಂದ ಮೊಬೈಲ್‌ಗೆ ವರ್ಗಾವಣೆಯು ಆರು ಪಟ್ಟು ವೇಗವಾಗಿರಲಿದೆ’ ಎಂದು ಮಾಹಿತಿ ನೀಡಿದರು.  

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಬೆಳವಣಿಗೆಯು ಕ್ಯಾಮೆರಾ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎನ್ನುವ ವಾದ ಇದೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ ಫೋಟೊ ತೆಗೆಯುವ ಹವ್ಯಾಸದಿಂದಾಗಿಯೇ ಕ್ಯಾಮೆರಾ ಬಳಕೆ ಬಗೆಗಿನ ಒಲವೂ ಹೆಚ್ಚಾಗುತ್ತಿದೆ  

- ಅರುಣ್‌ ಬಾಬು, ಫ್ಯೂಜಿಫಿಲ್ಮ್‌ ಇಂಡಿಯಾದ ಜನರಲ್‌ ಮ್ಯಾನೇಜರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)