ಮಂಗಳವಾರ, ಸೆಪ್ಟೆಂಬರ್ 24, 2019
28 °C
ಹಣಕಾಸು ಪರಿಸ್ಥಿತಿ ಸುಧಾರಣೆಗೆ ನೆರವು

ಸರ್ಕಾರಿ ಸ್ವಾಮ್ಯದ 3 ಸಾಮಾನ್ಯ ವಿಮೆ ಸಂಸ್ಥೆಗಳಿಗೆ ₹ 12 ಸಾವಿರ ಕೋಟಿ ನೆರವು

Published:
Updated:

ನವದೆಹಲಿ: ಸರ್ಕಾರಿ ಸ್ವಾಮ್ಯದ ಮೂರು ಸಾಮಾನ್ಯ ವಿಮೆ ಸಂಸ್ಥೆಗಳಿಗೆ ₹ 12 ಸಾವಿರ ಕೋಟಿಗಳ ನೆರವು ನೀಡಲು ನಿರ್ಧರಿಸಲಾಗಿದೆ.

ವಿಮೆ ಸಂಸ್ಥೆಗಳ ಹಣಕಾಸು ಪರಿಸ್ಥಿತಿ ಬಲಪಡಿಸಿ, ವಿಮೆ ನಿಯಂತ್ರಣ ನಿಯಮಗಳನ್ನು ಪಾಲಿಸುವುದಕ್ಕೆ ಈ ಪುನರ್ಧನದ ಕೊಡುಗೆ ನೀಡಲಾಗುತ್ತಿದೆ. ನ್ಯಾಷನಲ್‌ ಇನ್ಶುರೆನ್ಸ್‌, ಒರಿಯೆಂಟಲ್‌ ಇನ್ಶುರನ್ಸ್‌ ಮತ್ತು ಯುನೈಟೆಡ್‌ ಇಂಡಿಯಾ ಇನ್ಶುರನ್ಸ್‌ಗಳಿಗೆ ಒಟ್ಟಾರೆ ₹ 12 ಸಾವಿರ ಕೋಟಿ ಮೊತ್ತದ ಬಂಡವಾಳ ನೆರವು ನೀಡುವುದಕ್ಕೆ ಹಣಕಾಸು ಸೇವೆಗಳ ಇಲಾಖೆಯು ಸಮ್ಮತಿ ನೀಡಿದೆ.

ಈ ಮೂರೂ ವಿಮೆ ಕಂಪನಿಗಳನ್ನು ವಿಲೀನಗೊಳಿಸಿ ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡುವ ಬಗ್ಗೆ ಕೇಂದ್ರ ಸರ್ಕಾರದ ಹಿಂದಿನ ವರ್ಷದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಷೇರು ವಿಕ್ರಯದ ಕಾರ್ಯತಂತ್ರದ ಭಾಗವಾಗಿ ವಿಲೀನ ನಿರ್ಧಾರ ಕೈಗೊಳ್ಳಲಾಗಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 1.05 ಲಕ್ಷ ಕೋಟಿ ಮೊತ್ತದ ಷೇರು ವಿಕ್ರಯ ಗುರಿ ನಿಗದಿಪಡಿಸಲಾಗಿದೆ.

ಬಂಡವಾಳ ಪುನರ್ಧನ ಜಾರಿಗೆ ಬಂದ ನಂತರ ವಿಲೀನ ನಿರ್ಧಾರ ಕೈಗೊಳ್ಳಲಾಗುವುದು. ವಿಲೀನ ನಂತರ ಅಸ್ತಿತ್ವಕ್ಕೆ ಬರುವ ಕಂಪನಿಯು ದೇಶದ ಅತಿದೊಡ್ಡ ಸಾಮಾನ್ಯ ವಿಮೆ ಕಂಪನಿಯಾಗಿರಲಿದೆ.

ಚಾಲನೆ ಸಿಗದ ವಿಲೀನ ಪ್ರಕ್ರಿಯೆ: ಹಲವಾರು ಕಾರಣಗಳಿಂದ ಈ ವಿಮೆ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ.

ವಿಲೀನ ಪ್ರಕ್ರಿಯೆಗೆ, ಅಲ್ಪಾವಧಿ ಮತ್ತು ದೀರ್ಘಾವಧಿಯ ಹಣಕಾಸು (ಸಾಲದ) ಹೊಣೆಗಾರಿಕೆಗಳನ್ನು ನಿರ್ವಹಿಸಲು ಕಂಪನಿಗಳ ಬಳಿ ಸಾಕಷ್ಟು ಪ್ರಮಾಣದಲ್ಲಿ ನಗದು ಇರುವುದು ಪ್ರಮುಖ ನಿಬಂಧನೆಯಾಗಿರುತ್ತದೆ. ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಕಂಪನಿಯ ಹೊಣೆಗಾರಿಕೆ ಮತ್ತು ನಗದು ಲಭ್ಯತೆಯ ಅನುಪಾತವು 1;5ರಷ್ಟು ಇರಬೇಕಾಗುತ್ತದೆ. ಎರಡು ಸಾಮಾನ್ಯ ವಿಮೆ ಕಂಪನಿಗಳಲ್ಲಿ ಈ ಅನುಪಾತ ಇಲ್ಲದಿರುವುದರಿಂದ ವಿಲೀನ ನಿರ್ಧಾರ ಮುಂದೂಡಲಾಗಿದೆ.

Post Comments (+)