ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕತೆ ರಕ್ಷಣೆಗೆ ಸಂಘಟಿತ ಪ್ರಯತ್ನ

ಹಣಕಾಸು ಮಾರುಕಟ್ಟೆ ಮೇಲೆ ಕೋವಿಡ್‌ ಪರಿಣಾಮ
Last Updated 3 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಲಂಡನ್‌: ಮಾರಣಾಂತಿಕ ‘ಕೋವಿಡ್‌–19’ ವೈರಸ್‌ ಜಾಗತಿಕ ಆರ್ಥಿಕತೆಗೆ ಒಡ್ಡಿರುವ ಭೀತಿ ನಿವಾರಿಸಿ, ಆರ್ಥಿಕ ಪರಿಣಾಮಗಳಿಗೆ ಕಡಿವಾಣ ವಿಧಿಸಲು ವಿಶ್ವ ಸಮುದಾಯದ ಸಂಘಟಿತ ಪ್ರಯತ್ನಕ್ಕೆ ಚಾಲನೆ ದೊರೆತಿದೆ.

ಹಣಕಾಸು ಮಾರುಕಟ್ಟೆಗೆ ನಗದು ನೆರವು, ಬಡ್ಡಿ ದರ ಕಡಿತದಂತಹ ಉತ್ತೇಜನಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಮೆರಿಕ, ಜಪಾನ್‌ ಮತ್ತು ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ಗಳು ಪ್ರಕಟಿಸಿವೆ. ‘ಜಿ–7’ ದೇಶಗಳ ಹಣಕಾಸು ಸಚಿವರು ಪರಿಸ್ಥಿತಿ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಂಗಳವಾರ ಚರ್ಚೆ ನಡೆಸಿದ್ದಾರೆ.

ಕೇಂದ್ರೀಯ ಬ್ಯಾಂಕ್‌ಗಳು ಮತ್ತು ‘ಜಿ–7’ ದೇಶಗಳು ಕೋವಿಡ್‌ ವಿರುದ್ಧ ಸಂಘಟಿತ ರೂಪದಲ್ಲಿ ಕಾರ್ಯಪ್ರವೃತ್ತವಾಗಿರುವುದು ವಹಿವಾಟುದಾರರಲ್ಲಿ ಉತ್ಸಾಹ ಮೂಡಿಸಿದೆ. ಷೇರುಪೇಟೆಗಳಲ್ಲಿ ಒಂದು ವಾರದ ನಂತರ ಖರೀದಿ ಉತ್ಸಾಹ ಮರಳಿದೆ. ಯುರೋಪ್‌ನ ಹಣಕಾಸು ಮಾರುಕಟ್ಟೆಯಲ್ಲಿ ಷೇರು ಬೆಲೆಗಳು ಏರಿಕೆ ಕಂಡಿವೆ. ಇನ್ನೊಂದೆಡೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಏರಿಕೆ ದಾಖಲಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಸೇರಿದಂತೆ ವಿವಿಧ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸು ಮಾರುಕಟ್ಟೆಯಲ್ಲಿ ಕಂಡು ಬಂದಿರುವ ತಲ್ಲಣ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ. ‘ಜಿ–7’ ದೇಶಗಳ ಹಣಕಾಸು ಸಚಿವರ ನಡುವಣ ಮಾತುಕತೆ ಜಾಗತಿಕ ಷೇರುಪೇಟೆಯಲ್ಲಿ ಉತ್ಸಾಹ ಮೂಡಿಸಿದೆ.

ಹಿಂದಿನ ವಾರ ಜಾಗತಿಕ ಷೇರುಪೇಟೆಗಳ ಒಟ್ಟು ಬಂಡವಾಳ ಮೌಲ್ಯವು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಶೇ 12ರಷ್ಟು ಕುಸಿತ ಕಂಡಿತ್ತು. ಜಾಗತಿಕ ಸಮುದಾಯವು ಈಗ ಒತ್ತಾಸೆಯಾಗಿ ನಿಂತಿರುವುದರಿಂದ ಷೇರುಪೇಟೆಗಳಲ್ಲಿ ಖರೀದಿ ಆಸಕ್ತಿ ಕಂಡು ಬಂದಿದೆ. ಕಚ್ಚಾ ತೈಲ ಬೆಲೆಯು ಶೇ 3.5ರಷ್ಟು ಹೆಚ್ಚಳಗೊಂಡಿದೆ.

ಅಗತ್ಯ ಕ್ರಮ: ಆರ್‌ಬಿಐ
ಮುಂಬೈ
: ಮಾರಣಾಂತಿಕ ಕೋವಿಡ್‌–19 ವೈರಸ್‌ ಹಾವಳಿಯು ದೇಶಿ ಆರ್ಥಿಕತೆ ಮೇಲೆ ಬೀರುತ್ತಿರುವ ಪ್ರತಿಕೂಲ ಪರಿಣಾಮಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ಹಣಕಾಸು ಮಾರುಕಟ್ಟೆಯು ಸುಸೂತ್ರವಾಗಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧವಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ ತಿಳಿಸಿದೆ.

ಹೆಚ್ಚೆಚ್ಚು ದೇಶಗಳಿಗೆ ಕೋವಿಡ್‌ ವೈರಸ್‌ ಹಬ್ಬುತ್ತಿರುವಾಗ ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ತೀವ್ರ ಸ್ವರೂಪದ ಏರಿಳಿತಗಳು ಕಂಡು ಬರುತ್ತಿವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾರುಕಟ್ಟೆಯು ಸುಸ್ಥಿರ ರೀತಿಯಲ್ಲಿ ಕಾರ್ಯನಿರ್ವಹಿಸಲು, ಪೇಟೆಯಲ್ಲಿನ ವಹಿವಾಟುದಾರರ ವಿಶ್ವಾಸ ರಕ್ಷಿಸಲು ಮತ್ತು ಹಣಕಾಸು ಸ್ಥಿರತೆ ಕಾಯ್ದುಕೊಳ್ಳಲು ಬದ್ಧವಾಗಿರುವುದಾಗಿ ತಿಳಿಸಿದೆ.

‘ಏಪ್ರಿಲ್‌ನಲ್ಲಿನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಂದರ್ಭದಲ್ಲಿ ದೇಶಿ ಆರ್ಥಿಕತೆ ಮೇಲಿನ ಪರಿಣಾಮದ ಮೌಲ್ಯಮಾಪನ ಮಾಡಲಾಗುವುದು. ಪರಿಸ್ಥಿತಿ ಎದುರಿಸಲು ಕೇಂದ್ರೀಯ ಬ್ಯಾಂಕ್‌ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ’ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.

7 ದಿನಗಳ ಕುಸಿತಕ್ಕೆ ತಡೆ
ಜಾಗತಿಕ ಷೇರುಪೇಟೆಗಳಲ್ಲಿನ ಚೇತರಿಕೆಯು ಮುಂಬೈ ಷೇರುಪೇಟೆಯ ಮಂಗಳವಾರದ ವಹಿವಾಟಿನಲ್ಲಿ ಪ್ರತಿಫಲಿಸಿತು.

ಸತತ ಏಳು ದಿನಗಳ ಕಾಲ ಕುಸಿಯುತ್ತಲೇ ಸಾಗಿದ್ದ ಸಂವೇದಿ ಸೂಚ್ಯಂಕವು ಮಂಗಳವಾರ 480 ಅಂಶಗಳ ಹೆಚ್ಚಳ ದಾಖಲಿಸಿತು.

ಫೆಡರಲ್‌ ರಿಸರ್ವ್‌ ಬಡ್ಡಿ ಕಡಿತ
ವಾಷಿಂಗ್ಟನ್‌
: ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಆಗಿರುವ ಫೆಡರಲ್‌ ರಿಸರ್ವ್‌, ತನ್ನ ಬಡ್ಡಿ ದರವನ್ನು ಶೇ 0.50ರಷ್ಟು ತುರ್ತಾಗಿ ಕಡಿತಗೊಳಿಸಿದೆ. ಈ ನಿರ್ಧಾರದಿಂದಾಗಿ ಬಡ್ಡಿ ದರಗಳು ಈಗ ಶೇ 1ರಿಂದಶೇ 1.25ರ ವ್ಯಾಪ್ತಿಯಲ್ಲಿ ಇರಲಿವೆ.

ಷೇರುಪೇಟೆ: ವಹಿವಾಟು ಚೇತರಿಕೆ (%)
ಬಿಎಸ್‌ಇ:1.26
ನಿಫ್ಟಿ: 1.53
ಸಿಡ್ನಿ: 0.7
ಸೋಲ್‌: 0.6
ಫ್ರ್ಯಾಂಕ್‌ಫರ್ಟ್‌: 3.0
ನಾಸ್ದಾಕ್‌: 4.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT