ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಜಿ ಬೆಳ್ಳುಳ್ಳಿಗೆ ₹400 ಧಾರಣೆ: ಫೆಬ್ರುವರಿ ಎರಡನೇ ವಾರಕ್ಕೆ ದರ ಇಳಿಕೆ?

Published 29 ಜನವರಿ 2024, 15:51 IST
Last Updated 29 ಜನವರಿ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧೆಡೆ ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆ.ಜಿಗೆ ₹450 ಇದ್ದರೆ, ಹೈಬ್ರೀಡ್‌ ಬೆಳ್ಳುಳ್ಳಿ ಧಾರಣೆಯು ₹400 ದಾಟಿದೆ.

ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ‘ಎ’ ದರ್ಜೆಯ ಹೈಬ್ರೀಡ್‌ ಬೆಳ್ಳುಳ್ಳಿಯ ಸಗಟು ಧಾರಣೆ ಒಂದು ಕೆ.ಜಿಗೆ ₹330 ಇದೆ. ಕಳೆದ ಒಂದೂವರೆ ತಿಂಗಳಿನಿಂದಲೂ ಬೆಲೆ ಇಳಿಕೆಯಾಗಿಲ್ಲ. ಇದರಿಂದ ಗ್ರಾಹಕರು ತತ್ತರಿಸುವಂತಾಗಿದೆ.

ದೇಶದ ಒಟ್ಟು ಬೆಳ್ಳುಳ್ಳಿ ಉತ್ಪಾದನೆಯ ಪೈಕಿ ಮಧ್ಯಪ್ರದೇಶದ ‍ಪಾಲು ಶೇ 70ರಷ್ಟಿದೆ. ಉಳಿದಂತೆ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿಯೂ ಅತಿಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಮೂರು ರಾಜ್ಯಗಳಿಂದಲೇ ಕರ್ನಾಟಕಕ್ಕೆ ಬೆಳ್ಳುಳ್ಳಿ ಪೂರೈಕೆಯಾಗುತ್ತದೆ.

ಚೀನಾದಲ್ಲಿ ಉತ್ಪಾದನೆ ಕುಸಿತ: 

ಪ್ರತಿವರ್ಷ ಚೀನಾದಿಂದ ಬಾಂಗ್ಲಾದೇಶ, ಮಲೇಷ್ಯಾ, ವಿಯೆಟ್ನಾಂ ಹಾಗೂ ಶ್ರೀಲಂಕಾಕ್ಕೆ ಬೆಳ್ಳುಳ್ಳಿ ರಫ್ತಾಗುತ್ತದೆ. ಆದರೆ, ಈ ಬಾರಿ ಚೀನಾದಲ್ಲಿ ಉತ್ಪಾದನೆ ಕುಸಿದಿದೆ. ಹಾಗಾಗಿ, ಮಧ್ಯಪ್ರದೇಶದಿಂದ ಈ ನಾಲ್ಕು ದೇಶಗಳಿಗೆ ಬೆಳ್ಳುಳ್ಳಿ ರಫ್ತು ಆಗಿದೆ. ಇದೇ ದೇಶೀಯ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

‘ಸದ್ಯ ಮಧ್ಯಪ್ರದೇಶದಲ್ಲಿ ಬೆಳ್ಳುಳ್ಳಿ ಕೊಯ್ಲು ಆರಂಭವಾಗಿದೆ. ಪ್ರತಿದಿನ ಬೆಂಗಳೂರಿನ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಗೆ 3 ಸಾವಿರ ಚೀಲ ಆವಕವಾಗುತ್ತಿದೆ. ಫೆಬ್ರುವರಿ ಎರಡನೇ ವಾರದ ವೇಳೆಗೆ ಆವಕ ಹೆಚ್ಚಳವಾಗಲಿದೆ. ಆಗ ಒಂದು ಕೆ.ಜಿ ಸಗಟು ದರ ₹150ರಿಂದ ₹200ಕ್ಕೆ ಇಳಿಯಲಿದೆ’ ಎಂದು ಬೆಂಗಳೂರಿನ ಗುಜರಾತ್‌ ಟ್ರೇಡರ್ಸ್‌ನ ವರ್ತಕ ಜುಬೇರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಹೊಸ ಸರಕು ಪೂರೈಕೆಯಾಗುತ್ತಿದೆ. ಇದರಿಂದ ಸಗಟು ದರದಲ್ಲಿ ಸೋಮವಾರ ಕೆ.ಜಿ ₹20 ಕಡಿಮೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT