ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಚೇತರಿಕೆಗೆ ಇನ್ನಷ್ಟು ಕ್ರಮಕ್ಕೆ ಸಿದ್ದ: ನಿರ್ಮಲಾ

Last Updated 21 ಜುಲೈ 2020, 20:24 IST
ಅಕ್ಷರ ಗಾತ್ರ

ನವದೆಹಲಿ: ಅರ್ಥ ವ್ಯವಸ್ಥೆ ಚೇತರಿಕೆಯ ಹಾದಿಗೆ ಮರಳಿರುವುದರ ಸೂಚನೆಗಳು ಕಾಣಿಸುತ್ತಿವೆ, ಅರ್ಥ ವ್ಯವಸ್ಥೆಯ ಚೇತರಿಕೆಗೆ ಭವಿಷ್ಯದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಕೋವಿಡ್–19 ಸಾಂಕ್ರಾಮಿಕದಿಂದಾಗಿ ಅರ್ಥ ವ್ಯವಸ್ಥೆಯ ಮೇಲೆ ಉಂಟಾಗಿರುವ ದುಷ್ಪರಿಣಾಮ ಎದುರಿಸಲು ಸರ್ಕಾರ ಘೋಷಿಸಿರುವ ₹ 20.97 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಕಾರಣದಿಂದಾಗಿ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳು (ಎಂಎಸ್‌ಎಂಇ) ಸೇರಿದಂತೆ ಬೇರೆ ಬೇರೆ ವಲಯಗಳಲ್ಲಿ ಒಳ್ಳೆಯ ಫಲಿತಾಂಶ ಗೋಚರವಾಗುತ್ತಿದೆ ಎಂದು ನಿರ್ಮಲಾ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಅನ್‌ಲಾಕ್‌ ಪ್ರಕ್ರಿಯೆ ಮುಗಿದ ನಂತರ ಭಾರತದ ಉದ್ದಿಮೆಗಳು ಸರ್ಕಾರದ ಜೊತೆಗೂಡಿ ಅರ್ಥವ್ಯವಸ್ಥೆಯು ವೇಗವಾಗಿ, ಸುಸ್ಥಿರ ರೀತಿಯಲ್ಲಿ ಚೇತರಿಸಿಕೊಳ್ಳುವಂತೆ ಮಾಡುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

‘ಆರ್ಥಿಕ ಚೇತರಿಕೆಯು ಕೃಷಿ ವಲಯದಿಂದ ಆಗುತ್ತಿರುವುದನ್ನು ನಾವು ಕಾಣಬಹುದು. ಟ್ರ್ಯಾಕ್ಟರ್‌ಗಳ ಮಾರಾಟ ಸೇರಿದಂತೆ ಗ್ರಾಮೀಣ ಅರ್ಥವ್ಯವಸ್ಥೆಗೆ ಸಂಬಂಧಿಸಿದ ಚಟುವಟಿಕೆಗಳು ಹೆಚ್ಚಾಗಿವೆ’ ಎಂದು ಅವರು ಹೇಳಿದರು. ‘ಆತ್ಮನಿರ್ಭರ ಭಾರತ’ವೆಂದರೆ ಆಮದು ಮತ್ತು ರಫ್ತಿಗೆ ಬಾಗಿಲು ಮುಚ್ಚುವುದು ಎಂದು ಅರ್ಥವಲ್ಲ ಎಂಬ ಸ್ಪಷ್ಟನೆಯನ್ನೂ ಅವರು ನೀಡಿದರು.

‘ಭಾರತವು ಬಲಿಷ್ಠವಾಗಿರಬೇಕು ಎಂದು ನಾವು ಬಯಸುತ್ತೇವೆ. ಆರ್ಥಿಕವಾಗಿ ಶಕ್ತಿಶಾಲಿ ಸ್ಥಾನದಿಂದ ಭಾರತವು ಮಾತನಾಡಬೇಕು ಎಂದು ನಾವು ಆಶಿಸುತ್ತೇವೆ’ ಎಂದರು. ಸ್ಪರ್ಧಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶದಿಂದ ಅರ್ಥವ್ಯವಸ್ಥೆಯ ಬಹುತೇಕ ಎಲ್ಲ ವಲಯಗಳಲ್ಲೂ ಖಾಸಗಿ ರಂಗದವರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ ನಿರ್ಮಲಾ, ‘ಯಾವುದೇ ಆರ್ಥಿಕ ಕ್ಷೇತ್ರವು ಸರ್ಕಾರಕ್ಕೆ ಮಾತ್ರವೇ ಮೀಸಲು ಆಗಿರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT