ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ರಫ್ತಿಗೆ ನಿಷೇಧ; ಬಾಸ್ಮತಿ–ಕುಚ್ಚಿಲಕ್ಕಿ ವಿದೇಶಕ್ಕೆ ರವಾನಿಸಲು ಅಡ್ಡಿಯಿಲ್ಲ

Published 20 ಜುಲೈ 2023, 19:30 IST
Last Updated 20 ಜುಲೈ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ. ಇದು ಗುರುವಾರದಿಂದಲೇ ಜಾರಿಗೆ ಬಂದಿದೆ. ದೇಶದಲ್ಲಿ ಅಕ್ಕಿಯ ಪೂರೈಕೆ ಹೆಚ್ಚಿಸುವ ಹಾಗೂ ಮುಂಬರುವ ಹಬ್ಬಗಳ ಸಂದರ್ಭದಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸುವ ಉದ್ದೇಶದಿಂದ ಕೇಂದ್ರವು ಈ ಕ್ರಮ ಕೈಗೊಂಡಿದೆ.

ಕುಚ್ಚಿಲಕ್ಕಿ ಹಾಗೂ ಬಾಸ್ಮತಿ ಅಕ್ಕಿ ರಫ್ತಿಗೆ ನಿರ್ಬಂಧ ಇಲ್ಲ ಎಂದು ಕೇಂದ್ರ ಆಹಾರ ಸಚಿವಾಲಯವು ಹೇಳಿದೆ. ಬಾಸ್ಮತಿ ಹೊರತುಪಡಿಸಿದ ಅಕ್ಕಿಯ ಪಾಲು ದೇಶದಿಂದ ರಫ್ತಾಗುವ ಅಕ್ಕಿಯಲ್ಲಿ ಶೇಕಡ 25ರಷ್ಟಿದೆ. ಭಾರತವು ಥೈಲ್ಯಾಂಡ್, ಇಟಲಿ, ಸ್ಪೇನ್, ಶ್ರೀಲಂಕಾ ಮತ್ತು ಅಮೆರಿಕಕ್ಕೆ ಈ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ರವಾನಿಸುತ್ತದೆ.

‘ದೇಶಿ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆಯು ಏರಿಕೆ ಕಾಣುತ್ತಿದೆ. ಒಂದು ವರ್ಷದಲ್ಲಿ ಅಕ್ಕಿ ಬೆಲೆ ಶೇಕಡ 11.5ರಷ್ಟು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ ಶೇ 3ರಷ್ಟು ಏರಿಕೆ ಕಂಡಿದೆ’ ಎಂದು ಸಚಿವಾಲಯದ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಬಾಸ್ಮತಿ ಹೊರತುಪಡಿಸಿದ ಅಕ್ಕಿಯ ರಫ್ತಿನ ಮೇಲೆ 2022ರ ಸೆಪ್ಟೆಂಬರ್‌ನಲ್ಲಿ ಶೇಕಡ 20ರಷ್ಟು ತೆರಿಗೆ ವಿಧಿಸಲಾಗಿತ್ತು. ಇದರ ಉದ್ದೇಶವು ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ ಮಾಡುವುದೇ ಆಗಿತ್ತು. ಹೀಗಿದ್ದರೂ, 2022–23ನೆಯ ಹಣಕಾಸು ವರ್ಷದ ಸೆಪ್ಟೆಂಬರ್–ಮಾರ್ಚ್ ಅವಧಿಯಲ್ಲಿ ಅಕ್ಕಿಯ ರಫ್ತು 42.12 ಲಕ್ಷ ಟನ್‌ಗೆ ಹೆಚ್ಚಾಯಿತು. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ 33.66 ಲಕ್ಷ ಟನ್ ಇತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 15.54 ಲಕ್ಷ ಟನ್ ಅಕ್ಕಿಯನ್ನು ರಫ್ತು ಮಾಡಲಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ರಫ್ತು 11.55 ಲಕ್ಷ ಟನ್ ಮಾತ್ರ ಆಗಿತ್ತು.

‘ಎಲ್‌–ನಿನೊ ಪರಿಣಾಮ, ಅಕ್ಕಿಯನ್ನು ಬೆಳೆಯುವ ದೇಶಗಳಲ್ಲಿನ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಕ್ಕಿಗೆ ಬೆಲೆ ಹೆಚ್ಚಾಗಿರುವುದು ರಫ್ತು ಜಾಸ್ತಿ ಆಗುತ್ತಿರುವುದಕ್ಕೆ ಕಾರಣ ಎನ್ನಬಹುದು’ ಎಂದು ಹೇಳಿಕೆಯು ತಿಳಿಸಿದೆ.

ಭಾರತದಿಂದ ರಫ್ತಾಗುವ ಅಕ್ಕಿಯಲ್ಲಿ ಹೆಚ್ಚಿನ ಪಾಲು ಇರುವುದು ಬಾಸ್ಮತಿ ಹಾಗೂ ಕುಚ್ಚಿಲಕ್ಕಿಯದ್ದು. ಈ ಬಗೆಯ ಅಕ್ಕಿ ರಫ್ತಿಗೆ ನಿರ್ಬಂಧ ಇಲ್ಲ. ಹೀಗಾಗಿ ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಆಕರ್ಷಕ ಬೆಲೆಯ ಪ್ರಯೋಜನ ದೊರೆಯಲಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT