ನವದೆಹಲಿ: 2023–24ರ ಹಣಕಾಸು ವರ್ಷಕ್ಕೆ ಸಂಬಂಧಿಸಿದ ಆಡಿಟ್ (ಲೆಕ್ಕಪರಿಶೋಧನೆ) ವರದಿ ಸಲ್ಲಿಸುವ ಗಡುವನ್ನು ಅಕ್ಟೋಬರ್ 7ರ ವರೆಗೆ ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಸೋಮವಾರ ತಿಳಿಸಿದೆ.
ವಿವಿಧ ಆಡಿಟ್ ವರದಿ ಸಲ್ಲಿಕೆಯಲ್ಲಿ ತೆರಿಗೆದಾರರು ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಗಡುವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದೆ. ಈ ಮೊದಲು ಆಡಿಟ್ ಸಲ್ಲಿಕೆಯ ಗಡುವು ಸೆಪ್ಟೆಂಬರ್ 30 ಆಗಿತ್ತು.
‘ಕೆಲ ದಿನಗಳಿಂದ ಹೆಚ್ಚಿನ ತೆರಿಗೆದಾರರು ಆಡಿಟ್ ಸಲ್ಲಿಸಲು ಮುಂದಾಗುತ್ತಿರುವುದರಿಂದ ಪೋರ್ಟಲ್ ಮೇಲೆ ಒತ್ತಡ ಹೆಚ್ಚಾಗಿದೆ. ಸರ್ಕಾರವು ಇದನ್ನು ನಿರ್ವಹಿಸಲು ಪೋರ್ಟಲ್ ಅನ್ನು ನವೀಕರಿಸಬೇಕಿದೆ ಅಥವಾ ಸಮಯವನ್ನು ಮತ್ತಷ್ಟು ವಿಸ್ತರಿಸಬೇಕಿದೆ’ ಎಂದು ಮೂರ್ ಸಿಂಘಿ ಕಾರ್ಯನಿರ್ವಾಹಕ ನಿರ್ದೇಶಕ ರಜತ್ ಮೋಹನ್ ಹೇಳಿದ್ದಾರೆ.