ಪಿಡಿಎಸ್ ಬಲವರ್ಧನೆಗೆ ಆ್ಯಪ್ ಬಿಡುಗಡೆ
ಪಡಿತರ ವಿತರಣಾ ವ್ಯವಸ್ಥೆಯ (ಪಿಡಿಎಸ್) ಬಲವರ್ಧನೆಗಾಗಿ ಸಚಿವ ಪ್ರಲ್ಹಾದ ಜೋಶಿ ಅವರು ‘ಡಿಪೊ ದರ್ಪಣ್’ ‘ಅನ್ನ ಮಿತ್ರ’ ಮತ್ತು ‘ಅನ್ನ ಸಹಾಯತಾ’ ಹೆಸರಿನ ಆ್ಯಪ್‌ಗಳನ್ನು ಬಿಡುಗಡೆ ಮಾಡಿದರು. ವ್ಯವಸ್ಥೆಯಲ್ಲಿ ಪಡಿತರ ಪದಾರ್ಥಗಳನ್ನು ದುರ್ಬಳಕೆ ಮಾಡಿಕೊಳ್ಳುವವರು ಇದ್ದಾರೆ. ಈ ಆ್ಯಪ್‌ಗಳು ಸೋರಿಕೆ ತಡೆಗಟ್ಟುವ ಜೊತೆಗೆ ಆಹಾರ ಪದಾರ್ಥಗಳು ವ್ಯರ್ಥವಾಗದಂತೆ ತಡೆಗಟ್ಟಲು ನೆರವಾಗಲಿವೆ ಎಂದರು. ಭಾರತೀಯ ಆಹಾರ ನಿಗಮ ಮತ್ತು ಕೇಂದ್ರ ಉಗ್ರಾಣ ನಿಗಮದ ವ್ಯಾಪ್ತಿಗೆ ಬರುವ 2278 ಗೋದಾಮುಗಳ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ಸರ್ಕಾರ ₹1280 ಕೋಟಿ ವೆಚ್ಚ ಮಾಡಲಿದೆ ಎಂದರು. ಪಡಿತರ ವಿತರಣೆಯಲ್ಲಿನ ಸೋರಿಕೆ ತಡೆಗಟ್ಟಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ನವೀನ ತಂತ್ರಜ್ಞಾನದ ಬಳಕೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.