ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಐ’ ಷೇರು ವಿಕ್ರಯ ಸದ್ಯಕ್ಕಿಲ್ಲ

Last Updated 19 ಜೂನ್ 2018, 20:28 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ನಾಗರಿಕ ವಿಮಾನಯಾನ ಸಂಸ್ಥೆ ಏರ್‌ ಇಂಡಿಯಾದ (ಎ.ಐ) ಖಾಸಗೀಕರಣ ಪ್ರಕ್ರಿಯೆಯನ್ನು ಮುಂದೂಡುವ ನಿರ್ಧಾರಕ್ಕೆ ಬರಲಾಗಿದೆ.

ಲೋಕಸಭೆಗೆ ಚುನಾವಣೆ ನಡೆಯಲಿರುವ ವರ್ಷದಲ್ಲಿ, ಸಂಸ್ಥೆಯಲ್ಲಿನ ಸರ್ಕಾರದ ಪಾಲು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಮುಂದುವರಿಸದಿರಲು ಸರ್ಕಾರ ತೀರ್ಮಾನಿಸಿದೆ. ದಿನನಿತ್ಯದ ಕಾರ್ಯನಿರ್ವಹಣೆಗೆ ಅಗತ್ಯವಾದ ಹಣಕಾಸಿನ ನೆರವನ್ನು ‘ಎ.ಐ’ ಶೀಘ್ರದಲ್ಲಿಯೇ ಪಡೆಯಲಿದೆ. ಹೊಸ ವಿಮಾನಗಳ ಖರೀದಿಗೂ ಚಾಲನೆ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಲದ ಸುಳಿಗೆ ಸಿಲುಕಿರುವ ಸಂಸ್ಥೆಯಲ್ಲಿನ ಸರ್ಕಾರದ ಶೇ 76ರಷ್ಟು ಪಾಲು ಬಂಡವಾಳ ಖರೀದಿಸಲು ಯಾರೊಬ್ಬರೂ ಮುಂದೆ ಬರದ ಮೂರು ವಾರಗಳಲ್ಲಿಯೇ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಸಚಿವ ಅರುಣ್‌ ಜೇಟ್ಲಿ ಅವರ ಅಧ್ಯಕ್ಷತೆ
ಯಲ್ಲಿ ಸೋಮವಾರ ನಡೆದ ಸಚಿವರ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಸಂಸ್ಥೆಯು ಕಾರ್ಯನಿರ್ವಹಣಾ ಲಾಭ ಮಾಡುತ್ತಿದೆ. ಯಾವುದೇ ವಿಮಾನಗಳ ಹಾರಾಟ ಖಾಲಿಯಾಗಿರುವುದಿಲ್ಲ. ವೆಚ್ಚಕ್ಕೆ ಕಡಿವಾಣ ಹಾಕುವ ಕ್ರಮಗಳು ಜಾರಿಯಲ್ಲಿದ್ದು, ಕಾರ್ಯನಿರ್ವಹಣಾ ದಕ್ಷತೆ ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಷೇರು ವಿಕ್ರಯಕ್ಕೆ ಅವಸರ ಮಾಡುವ ಅನಿವಾರ್ಯತೆ ಉದ್ಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ತರಲು, ಉದ್ಯೋಗಿಗಳ ನೈತಿಕತೆ ವೃದ್ಧಿಸಿ ಲಾಭದ ಹಾದಿಗೆ ತರಲು ಕ್ರಮಗಳನ್ನು ಕೈಗೊಳ್ಳಲಾಗುವುದು. ಅಗತ್ಯ ಬಿದ್ದಾಗಲೆಲ್ಲ ಹಣಕಾಸಿನ ನೆರವು ಒದಗಿಸಲಾಗುವುದು.

ಷೇರುಪೇಟೆಯಲ್ಲಿ ವಹಿವಾಟು: ಷೇರುಪೇಟೆಯಲ್ಲಿ ವಹಿವಾಟು ನಡೆಸುವುದಕ್ಕೆ ಚಾಲನೆ ನೀಡುವ ಮುನ್ನ ಸಂಸ್ಥೆಯನ್ನು ಲಾಭದ ಹಾದಿಗೆ ತರಲು ಸರ್ಕಾರ ಕ್ರಮಗಳನ್ನು ಕೈಗೊಳ್ಳಲಿದೆ. ಷೇರುಪೇಟೆ ‍ಪ್ರವೇಶಿಸಲು ಸಂಸ್ಥೆಯು ಕೆಲ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.

ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳ ಅನ್ವಯ, ಹಿಂದಿನ ಮೂರು ಹಣಕಾಸು ವರ್ಷಗಳಲ್ಲಿ ನಿರಂತರವಾಗಿ ಲಾಭ ಮಾಡಿರುವ ಸಂಸ್ಥೆ ಮಾತ್ರ ಷೇರುಪೇಟೆಯ ವಹಿವಾಟಿಗೆ ಪ್ರವೇಶಿಸಬಹುದು.

ಪಾಲುಬಂಡವಾಳ ಮಾರಾಟಕ್ಕೆ ಹಿನ್ನಡೆ

ಏರ್‌ ಇಂಡಿಯಾದಲ್ಲಿನ (ಎ.ಐ) ತನ್ನ ಶೇ 76ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ₹50 ಸಾವಿರ ಕೋಟಿಗೂ ಹೆಚ್ಚಿನ ಸಾಲದ ಹೊರೆಗೆ ಸಿಲುಕಿರುವ ಸಂಸ್ಥೆಯ ಷೇರು ವಿಕ್ರಯಕ್ಕೆ ಕೇಂದ್ರ ಸಚಿವ ಸಂಪುಟವು 2017ರ ಜೂನ್‌ನಲ್ಲಿ ಸಮ್ಮತಿ ನೀಡಿತ್ತು.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಖಾಸಗಿ ವಲಯದಿಂದ ತಣ್ಣನೆಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಖರೀದಿ ಆಸಕ್ತಿ ವ್ಯಕ್ತಪಡಿಸಲು ಗಡುವು ವಿಸ್ತರಿಸಿದ್ದರೂ ಫಲಿತಾಂಶ ಶೂನ್ಯವಾಗಿತ್ತು. ಕೋಟ್ಯಂತರ ರೂಪಾಯಿಗಳ ನಷ್ಟದಲ್ಲಿ ಇರುವ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ವಿಮಾನಯಾನ ರಂಗದ ಇತರ ಭಾಗಿದಾರರಿಂದ ಉತ್ತೇಜಕರ ಸ್ಪಂದನವೇ ಸಿಕ್ಕಿರಲಿಲ್ಲ. ಇದರಿಂದ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT