ಬುಧವಾರ, ಆಗಸ್ಟ್ 10, 2022
25 °C

ಪೆಟ್ರೋಲ್, ಡೀಸೆಲ್ ರಫ್ತಿಗೆ ತೆರಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ರಫ್ತಿನ ಮೇಲೆ ಕೇಂದ್ರ ಸರ್ಕಾರವು ತೆರಿಗೆ ವಿಧಿಸಿದೆ. ಅಲ್ಲದೆ, ದೇಶದಲ್ಲಿ ಉತ್ಪಾದನೆ ಆಗುವ ಕಚ್ಚಾ ತೈಲದ ಮೇಲೆ ‘ಆಕಸ್ಮಿಕ ಲಾಭ ತೆರಿಗೆ’ ಕೂಡ ಹೇರಿದೆ.

ಈ ತೆರಿಗೆ ಶುಕ್ರವಾರದಿಂದ ಜಾರಿಗೆ ಬಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲಕ್ಕೆ ಪ್ರತಿ ಟನ್‌ಗೆ ₹ 23,250ರಷ್ಟು ತೆರಿಗೆ ವಿಧಿಸಲಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿಯಂತಹ ಕಂಪನಿಗಳು ತೈಲವನ್ನು ಬೇರೆ ದೇಶಗಳಲ್ಲಿ ಮಾರಾಟ ಮಾಡುವುದಕ್ಕೆ ಉತ್ತೇಜನ ಸಿಗಬಾರದು ಎಂಬ ಕಾರಣಕ್ಕೆ ರಫ್ತು ತೆರಿಗೆ ವಿಧಿಸಲಾಗಿದೆ. ರಿಲಯನ್ಸ್, ನಯಾರಾ ಕಂಪನಿಗಳು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಿ, ಅದರಿಂದ ಉತ್ಪಾದಿಸಿದ ಇಂಧನವನ್ನು ಯುರೋಪ್ ಮತ್ತು ಅಮೆರಿಕಕ್ಕೆ ರಫ್ತು ಮಾಡಿ ಲಾಭ ಗಳಿಸುತ್ತಿದ್ದವು ಎನ್ನಲಾಗಿದೆ.

ಕಚ್ಚಾ ತೈಲದ ಮೇಲಿನ ತೆರಿಗೆಯಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ₹ 7 ಸಾವಿರ ಕೋಟಿಗಿಂತ ಹೆಚ್ಚು ವರಮಾನ ಸಿಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕವನ್ನು ಈಚೆಗೆ ತಗ್ಗಿಸಿದೆ. ಇದರಿಂದಾಗಿ ಸರ್ಕಾರಕ್ಕೆ ವರಮಾನದಲ್ಲಿ ₹ 1 ಲಕ್ಷ ಕೋಟಿ ಕಡಿಮೆ ಆಗುತ್ತದೆ ಎಂದು ಅಂದಾಜಿಸಲಾಗಿದೆ.

ಪೆಟ್ರೋಲನ್ನು ರಫ್ತು ಮಾಡುವ ಕಂಪನಿಗಳು, ರಫ್ತು ಮಾಡಿದ ಪೆಟ್ರೋಲ್‌ನ ಶೇ 50ರಷ್ಟನ್ನು ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು. ಡೀಸೆಲ್ ರಫ್ತು ಮಾಡುವ ಕಂಪನಿಗಳು, ರಫ್ತಿನ ಶೇ 30ರಷ್ಟು ಪ್ರಮಾಣವನ್ನು ದೇಶದಲ್ಲಿ ಮಾರಾಟ ಮಾಡಬೇಕು ಎಂದು ಕೂಡ ಕೇಂದ್ರವು ತಾಕೀತು ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ರಫ್ತಿಗೆ ನಿರ್ಬಂಧ ವಿಧಿಸಿ, ದೇಶದಲ್ಲಿ ಈ ಇಂಧನಗಳ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶ ಕೇಂದ್ರದ್ದು. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಬಂಕ್‌ಗಳಲ್ಲಿನ ಪೆಟ್ರೋಲ್, ಡೀಸೆಲ್‌ ಬೆಲೆಯು ಖಾಸಗಿ ಕಂಪನಿಗಳ ಬಂಕ್‌ಗಳಲ್ಲಿ ಸಿಗುವ ಇಂಧನಗಳ ಬೆಲೆಗಿಂತ ಕಡಿಮೆ ಇದೆ. ಹೀಗಾಗಿ, ಖಾಸಗಿ ಕಂಪನಿಗಳು ರಫ್ತಿನ ಮೊರೆ ಹೋಗಿದ್ದವು.

ಈಚಿನ ತಿಂಗಳುಗಳಲ್ಲಿ ಕಚ್ಚಾ ತೈಲದ ಬೆಲೆಯು ತೀವ್ರ ಏರಿಕೆ ಕಂಡಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ಕಚ್ಚಾ ತೈಲವನ್ನು ಸಂಸ್ಕರಣಾ ಕಂಪನಿಗಳಿಗೆ ಮಾರಾಟ ಮಾಡುವ ದೇಶಿ ಕಚ್ಚಾ ತೈಲ ಉತ್ಪಾದನಾ ಕಂಪನಿಗಳು ಇದರಿಂದಾಗಿ ಲಾಭ ಪಡೆದುಕೊಂಡಿವೆ. ಅವು ಆಕಸ್ಮಿಕವಾಗಿ ಭಾರಿ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿವೆ. ಇದನ್ನು ಪರಿಗಣಿಸಿ ಸೆಸ್ ವಿಧಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

‘ತೈಲ ಸಂಸ್ಕರಣಾ ಕಂಪನಿಗಳು ಅಂತರರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್, ಡೀಸೆಲ್ ರಫ್ತು ಮಾಡುತ್ತಿವೆ. ರಫ್ತು ಬಹಳ ಆದಾಯ ತಂದುಕೊಡುತ್ತಿದೆ. ಆದರೆ, ಕೆಲವು ಕಂಪನಿಗಳು ದೇಶದಲ್ಲಿನ ತಮ್ಮ ಪೆಟ್ರೋಲ್‌ ಬಂಕ್‌ಗಳನ್ನು ಭರ್ತಿ ಮಾಡುತ್ತಿಲ್ಲದಿರುವುದು ಕಂಡುಬಂದಿದೆ. ಹೀಗಾಗಿ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್ ರಫ್ತಿಗೆ ತೆರಿಗೆ ವಿಧಿಸಲಾಗಿದೆ’ ಎಂದು ಸಚಿವಾಲಯ ತಿಳಿಸಿದೆ.

ಈ ಕ್ರಮದಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯ ಮೇಲೆ ಪರಿಣಾಮ ಆಗುವುದಿಲ್ಲ, ಇಲ್ಲಿನ ಚಿಲ್ಲರೆ ಮಾರಾಟ ಬೆಲೆಯಲ್ಲಿ ವ್ಯತ್ಯಾಸವಾಗುವುದಿಲ್ಲ ಎಂದು ವಿವರಿಸಿದೆ. ಎಟಿಎಫ್‌ ರಫ್ತಿನ ಮೇಲೆ ಲೀಟರಿಗೆ ₹ 6ರಂತೆ ವಿಶೇಷ ಹೆಚ್ಚುವರಿ ಎಕ್ಸೈಸ್ ಸುಂಕವನ್ನು ಹೊರಿಸಲಾಗಿದೆ.

==

₹ 6

ಲೀಟರ್ ಪೆಟ್ರೋಲ್, ಎಟಿಎಫ್ ರಫ್ತಿಗೆ ತೆರಿಗೆ

₹ 13

ಡೀಸೆಲ್ ರಫ್ತಿಗೆ ತೆರಿಗೆ

=

ಆಕಸ್ಮಿಕ ಲಾಭ ತೆರಿಗೆ

ಮಾರುಕಟ್ಟೆಯಲ್ಲಿನ ಅನುಕೂಲಕರ ಪರಿಸ್ಥಿತಿಯ ಕಾರಣ ಮಾತ್ರದಿಂದ ಕಂಪನಿಗಳ ಲಾಭವು ಅಸಾಮಾನ್ಯ ರೀತಿಯಲ್ಲಿ ಹೆಚ್ಚಳವಾದರೆ, ಅದಕ್ಕೆ ವಿಧಿಸುವ ತೆರಿಗೆ ಇದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.