ಶುಕ್ರವಾರ, ನವೆಂಬರ್ 22, 2019
22 °C

ಹಬ್ಬದ ದಿನಗಳಲ್ಲೂ ಹೆಚ್ಚಳ ಕಾಣದ ಜಿಎಸ್‌ಟಿ ಸಂಗ್ರಹ

Published:
Updated:
ಸಾಂದರ್ಭಿಕ ಚಿತ್ರ

ನವದೆಹಲಿ: ಹಬ್ಬದ ದಿನಗಳಲ್ಲಿ ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಿದ್ದರೂ ಅಕ್ಟೋಬರ್‌ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ( ₹ 95,380 ಕೋಟಿ) ಗಮನಾರ್ಹ ಹೆಚ್ಚಳವೇನೂ ಕಂಡು ಬಂದಿಲ್ಲ.

ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಹಬ್ಬದ ತಿಂಗಳಿನಲ್ಲಿಯೂ ಜಿಎಸ್‌ಟಿ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಆರ್ಥಿಕತೆಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಇದು ಸಂಕೇತಿಸುತ್ತದೆ.

ವರ್ಷದ ಹಿಂದಿನ ಇದೇ ಅವಧಿಯಲ್ಲಿ ₹ 1,00,710 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿಯ ಸಂಗ್ರಹವು ಶೇ 5.29ರಷ್ಟು ಕಡಿಮೆಯಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ತಿಳಿಸಿವೆ.

ಅಕ್ಟೋಬರ್‌, ಹಬ್ಬಗಳ ತಿಂಗಳಾದರೂ ಸತತ ಮೂರನೇ ತಿಂಗಳಿನಲ್ಲಿಯೂ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಗಿಂತ ಕಡಿಮೆ  ಪ್ರಮಾಣದಲ್ಲಿ ಸಂಗ್ರಹವಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿನ ತೆರಿಗೆ ಸಂಗ್ರಹಕ್ಕೆ (₹ 91,916 ಕೋಟಿ) ಹೋಲಿಸಿದರೆ ಮಾತ್ರ ಕೆಲಮಟ್ಟಿಗೆ ಹೆಚ್ಚಳ ಸಾಧಿಸಿದೆ.

ಒಟ್ಟಾರೆ ಸಂಗ್ರಹವಾದ ₹ 95,380 ಕೋಟಿಯಲ್ಲಿ ಕೇಂದ್ರದ ‘ಸಿಜಿಎಸ್‌ಟಿ’ ₹ 17,582 ಕೋಟಿ, ರಾಜ್ಯ ಸರ್ಕಾರಗಳ ‘ಎಸ್‌ಜಿಎಸ್‌ಟಿ’– ₹ 23,674 ಕೋಟಿ, ಸಮಗ್ರ ‘ಐಜಿಎಸ್‌ಟಿ’– ₹ 46,517 ಕೋಟಿ ಮತ್ತು ಸೆಸ್‌ನ ಪಾಲು – ₹ 7,607 ಕೋಟಿಗಳಷ್ಟಿದೆ ಎಂದು ಹಣಕಾಸು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ ತಿಂಗಳಲ್ಲಿ ವಹಿವಾಟುದಾರರು ಸ್ವತಃ ಲೆಕ್ಕ ಹಾಕಿ ವಿವರ ಸಲ್ಲಿಸಿದ ‘ಜಿಎಸ್‌ಟಿಆರ್‌ 3ಬಿ’ ರಿಟರ್ನ್ಸ್‌ಗಳ ಒಟ್ಟಾರೆ ಸಂಖ್ಯೆಯು 73.83 ಲಕ್ಷಗಳಷ್ಟಿದೆ.

ಪ್ರತಿಕ್ರಿಯಿಸಿ (+)