ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಜಿಎಸ್‌ಟಿ ಮಂಡಳಿ ಸಭೆ: ನಿರ್ಮಲಾ ಸೀತಾರಾಮನ್‌ ಮೊದಲ ಬಾರಿಗೆ ಅಧ್ಯಕ್ಷತೆ

Last Updated 20 ಜೂನ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ:ಶುಕ್ರವಾರ ಇಲ್ಲಿ ಸಭೆ ಸೇರಲಿರುವ ಜಿಎಸ್‌ಟಿ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೊದಲ ಬಾರಿಗೆ ವಹಿಸಿಕೊಳ್ಳಲಿದ್ದಾರೆ.

ಮಂಡಳಿಯ 35ನೆ ಸಭೆ ಇದಾಗಿದೆ. ಲಾಭಕೋರತನ ತಡೆ ಪ್ರಾಧಿಕಾರದ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸುವ, ಮರು ಪಾವತಿ ವ್ಯವಸ್ಥೆಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರುವ ಮತ್ತು ವಹಿವಾಟುದಾರರಿಗೆ ಇ–ಇನ್‌ವಾಯ್ಸ್‌ ನೀಡುವ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಜಿಎಸ್‌ಟಿ ಇ–ವೇ ಬಿಲ್‌ ಸೌಲಭ್ಯವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಫಾಸ್ಟ್ಯಾಗ್‌ ವ್ಯವಸ್ಥೆ ಜತೆಗೆ 2020ರ ಏಪ್ರಿಲ್‌ನಿಂದ ತಳಕು ಹಾಕುವುದರ ಬಗ್ಗೆಯೂ ಸಭೆ ನಿರ್ಣಯ ಕೈಗೊಳ್ಳಲಿದೆ.

ಇದರಿಂದ ಸರಕುಗಳ ಸಾಗಾಣಿಕೆ ಮೇಲೆ ನಿಗಾ ಇಡಲು ಮತ್ತು ಜಿಎಸ್‌ಟಿ ತಪ್ಪಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ.

ಮೇಲ್ಮನವಿ ಪ್ರಾಧಿಕಾರ: ಜಿಎಸ್‌ಟಿಗೆ ಸಂಬಂಧಿಸಿದಂತೆ ಒಂದೇ ವಿಷಯದ ಬಗ್ಗೆ ಬೇರೆ, ಬೇರೆ ರಾಜ್ಯಗಳಲ್ಲಿನ ಪ್ರಾಧಿಕಾರಗಳು ನೀಡುವ ವಿಭಿನ್ನ ಆದೇಶಗಳನ್ನು ಸಮನ್ವಯಗೊಳಿಸಲು ಮೇಲ್ಮನವಿ ಪ್ರಾಧಿಕಾರ ರಚಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಜಿಎಸ್‌ಟಿ ಪಾವತಿ ಸಂದರ್ಭದಲ್ಲಿ ಆದ ಲೋಪಗಳನ್ನು ಸರಿಪಡಿಸಲು ವಹಿವಾಟುದಾರರಿಗೆ ಅನುಮತಿ ನೀಡುವ ಸಂಬಂಧ ಜಿಎಸ್‌ಟಿ ಕಾಯ್ದೆಗೆ ತಿದ್ದುಪಡಿ ತರುವ ಕರಡು ತಿದ್ದುಪಡಿ ಮಸೂದೆಗೂ ಸಭೆ ಅನುಮೋದನೆ ನೀಡುವ ನಿರೀಕ್ಷೆ ಇದೆ.

ಅವಧಿ ವಿಸ್ತರಣೆ
ರಾಷ್ಟ್ರೀಯ ಲಾಭಕೋರತನ ತಡೆ ಪ್ರಾಧಿಕಾರದ (ಎನ್‌ಎಎ) ಅಧಿಕಾರಾವಧಿಯನ್ನು 2020ರ ನವೆಂಬರ್‌ ಅಂತ್ಯದವರೆಗೆ ವಿಸ್ತರಿಸಲು ಸಭೆ ನಿರ್ಧಾರ ಕೈಗೊಳ್ಳಲಿದೆ.

ಜಿಎಸ್‌ಟಿ ದರ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸದ ಸಂಸ್ಥೆಗಳ ವಿರುದ್ಧದ ದೂರುಗಳ ಬಗ್ಗೆ ವಿಚಾರಣೆ ನಡೆಸಲು ಈ ಪ್ರಾಧಿಕಾರ ರಚಿಸಲಾಗಿತ್ತು.

ಬಿ. ಎನ್‌. ಶರ್ಮಾ ಅಧ್ಯಕ್ಷತೆಯಲ್ಲಿ ಈ ಪ್ರಾಧಿಕಾರವು 2017ರಲ್ಲಿ ಅಸ್ತಿತ್ವವಕ್ಕೆ ಬಂದಿತ್ತು. ಪ್ರಾಧಿಕಾರವು ಇದುವರೆಗೆ 67 ಆದೇಶಗಳನ್ನು ಹೊರಡಿಸಿದೆ. ಈಗಲೂ ದೂರುಗಳು ಸಲ್ಲಿಕೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT