ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಬಳಕೆ ಪದಾರ್ಥಗಳಿಗೆ ಜಿಎಸ್‌ಟಿ: ಎಲ್ಲ ರಾಜ್ಯಗಳ ಒಮ್ಮತದ ನಿರ್ಧಾರ– ನಿರ್ಮಲಾ

Last Updated 19 ಜುಲೈ 2022, 14:39 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳು ಸೇರಿದಂತೆ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಗೋಧಿ ಹಿಟ್ಟು ಮತ್ತು ಇತರ ಆಹಾರ ಪದಾರ್ಥಗಳಿಗೆ ಶೇಕಡ 5ರಷ್ಟು ಜಿಎಸ್‌ಟಿ ಹೇರಿಕೆ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಣಿ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ಪಂಜಾಬ್, ಛತ್ತೀಸ್‌ಗಡ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳು ಶೇಕಡ 5 ರಷ್ಟು ತೆರಿಗೆ ವಿಧಿಸಲು ಒಪ್ಪಿದ್ದವು ಎಂದು ಅವರು ಹೇಳಿದ್ದಾರೆ.

ಪ್ರೀ-ಜಿಎಸ್‌ಟಿ ಕಾಲದಲ್ಲಿಯೂ 5-6 ಶೇ. ತೆರಿಗೆ ಇತ್ತು. ಜಿಎಸ್‌ಟಿ ನಿಗದಿ ಮಾಡಿದ್ದು 5 ಶೇ. (ಏಕರೂಪ). ಹೊಸ ತೆರಿಗೆಯೇನೂ ವಿಧಿಸಿದ್ದಲ್ಲ. ಆದರೆ ಬ್ರ್ಯಾಂಡೆಡ್ ಪದಾರ್ಥಗಳಿಗೆ ಅಂತ ಮಾಡಿದಾಗ, ಅದನ್ನು ವ್ಯಾಪಾರಿಗಳು, ಕಂಪನಿಗಳು ದುರ್ಬಳಕೆ ಮಾಡಿಕೊಂಡವು. ರಾಜ್ಯಗಳಿಗೂ ಆದಾಯಕ್ಕೆ ಹೊಡೆತ ಬಿತ್ತು. ಹೀಗಾಗಿ ಉಳಿದ ವ್ಯಾಪಾರಿಗಳು, ಕಂಪನಿಗಳ ದೂರನ್ನು ಆಲಿಸಿ, ಪ್ಯಾಕೇಜ್ಡ್ ಪದಾರ್ಥಗಳಿಗೆ ಏಕರೂಪ ಜಿಎಸ್‌ಟಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ

ಈ ದುರ್ಬಳಕೆ ಕುರಿತಂತೆ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಗುಜರಾತ್‌ನ ಅಧಿಕಾರಿಗಳನ್ನು ಒಳಗೊಂಡ ಫಿಟ್‌ಮೆಂಟ್ ಸಮಿತಿಯು ಹಲವಾರು ಸಭೆಗಳನ್ನು ನಡೆಸಿ ಪರಿಶೀಲಿಸಿದೆ ಮತ್ತು ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಕೆಲ ಬದಲಾವಣೆ ಮಾಡಲು ಶಿಫಾರಸುಗಳನ್ನು ಮಾಡಿತ್ತು ಎಂದು ಅವರು ಹೇಳಿದ್ದಾರೆ..

ಸಮಿತಿಯ ಶಿಫಾರಸುಗಳನ್ನುಕರ್ನಾಟಕದ ಮುಖ್ಯಮಂತ್ರಿಗಳ ನೇತೃತ್ವದಪಶ್ಚಿಮ ಬಂಗಾಳ, ರಾಜಸ್ಥಾನ, ಕೇರಳ, ಉತ್ತರ ಪ್ರದೇಶ, ಗೋವಾ ಮತ್ತು ಬಿಹಾರದ ಸದಸ್ಯರನ್ನು ಒಳಗೊಂಡಿರುವ ಸಚಿವರ ಗುಂಪು ಪರಿಶೀಲಿಸಿತ್ತು. ತೆರಿಗೆ ಸೋರಿಕೆ ತಡೆಗೆ ಈ ಗುಂಪು ಶಿಫಾರಸುಗಳನ್ರು ಮಾಡಿತ್ತುಎಂದು ಅವರು ಹೇಳಿದ್ದಾರೆ.

‘ಆಹಾರ ಪದಾರ್ಥಗಳ ಮೇಲೆ ತೆರಿಗೆ ಸಂಗ್ರಹ ಇದೇ ಮೊದಲಲ್ಲ. ಪ್ರೀ–ಜಿಎಸ್‌ಟಿ ಕಾಲದಿಂದಲೂ ಆಹಾರ ಪದಾರ್ಥಗಳ ಮೇಲೆ ತೆರಿಗೆ ಸಂಗ್ರಹಿಸಲಾಗುತ್ತಿದೆ. ಪಂಜಾಬ್ ರಾಜ್ಯವು ಖರೀದಿ ತೆರಿಗೆ ಹೆಸರಲ್ಲಿ ₹ 2000 ಕೋಟಿ ಮತ್ತು ಉತ್ತರ ಪ್ರದೇಶವು ₹ 700 ಕೋಟಿ ತೆರಿಗೆ ಸಂಗ್ರಹಿಸಿವೆ’ಎಂದು ಅವರು ಹೇಳಿದ್ದಾರೆ.

2017ಕ್ಕಿಂತಲೂ ಮೊದಲೇ ಪಂಜಾಬ್, ತೆಲಂಗಾಣ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಕೇರಳ ಮತ್ತು ಬಿಹಾರ ರಾಜ್ಯಗಳಲ್ಲಿ ಅಕ್ಕಿ ಮೇಲೆ ತೆರಿಗೆ ವಿಧಿಸಲಾಗಿತ್ತು ಎಂದು ಹೇಳಿದ್ದಾರೆ.

ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ಹೇರಿಕೆ ಕುರಿತಂತೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ನಿರ್ಮಲಾ ಸೀತಾರಾಮನ್ ಅವರು, ಎಲ್ಲ ರಾಜ್ಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದ ಜಿಎಸ್‌ಟಿ ಸಭೆಯಲ್ಲೇ ಒಮ್ಮತದ ಮೂಲಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಸಚಿವರ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಕಳೆದ ತಿಂಗಳು ನಡೆದ 47ನೇ ಜಿಎಸ್‌ಟಿ ಮಂಡಳಿ ಸಭೆಯ ಮುಂದಿಡಲಾಗಿತ್ತು. ಜುಲೈ 18, 2022 ರಿಂದ ಜಾರಿಗೆ ಬರುವಂತೆ, ಈ ಸರಕುಗಳ ಮೇಲೆ ಜಿಎಸ್‌ಟಿ ವಿಧಿಸುವ ವಿಧಾನಗಳನ್ನು ಮಾತ್ರ ಬದಲಾಯಿಸಲಾಗಿದೆ, 2-3 ವಸ್ತುಗಳನ್ನು ಹೊರತುಪಡಿಸಿ ಜಿಎಸ್‌ಟಿ ವ್ಯಾಪ್ತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರೀಪ್ಯಾಕೇಜ್ಡ್‌ ಮತ್ತು ಲೇಬಲ್ಡ್‌ ಆಹಾರ ಪದಾರ್ಥಗಳ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.

ಪ್ರೀ–ಪ್ಯಾಕೇಜ್ಡ್‌ ಅಲ್ಲದ ಬೇಳೆ ಕಾಳುಗಳು, ಗೋಧಿ, ಓಟ್ಸ್, ಅಕ್ಕಿ, ಹಿಟ್ಟು, ರವೆ, ಕಡಳೆಹಿಟ್ಟು, ಮಂಡಕ್ಕಿ ಮತ್ತು ಮೊಸರಿನ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ಇದು ಜಿಎಸ್‌ಟಿ ಮಂಡಳಿಯ ಸರ್ವಾನುಮತದ ನಿರ್ಧಾರವಾಗಿದೆ. ಜಿಎಸ್‌ಟಿ ಸಭೆಯಲ್ಲಿ ಆಹಾರ ಪದಾರ್ಥಗಳ ಮೇಲಿನ ತೆರಿಗೆ ತರ್ಕಬದ್ಧಗೊಳಿಸುವಿಕೆಯ ಕುರಿತು ಸಚಿವರ ಗುಂಪು ಈ ವಿಷಯವನ್ನು ಮಂಡಿಸಿದಾಗ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಉಪಸ್ಥಿತರಿದ್ದರು’ಎಂದು ಅವರು ಹೇಳಿದ್ದಾರೆ.

‘ಬಿಜೆಪಿಯೇತರ ಪಕ್ಷಗಳ ಆಡಳಿತವಿರುವರಾಜ್ಯಗಳು (ಪಂಜಾಬ್, ಛತ್ತೀಸ್‌ಗಢ, ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ) ಸೇರಿದಂತೆ ಎಲ್ಲಾ ರಾಜ್ಯಗಳು ಈ ನಿರ್ಧಾರವನ್ನು ಒಪ್ಪಿಕೊಂಡಿವೆ. ಜಿಎಸ್‌ಟಿ ಕೌನ್ಸಿಲ್‌ನ ಈ ನಿರ್ಧಾರವು ಒಮ್ಮತದಿಂದ ಬಂದಿದೆ’ಎಂದು ಸೀತಾರಾಮನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT