ನವದೆಹಲಿ: ಜವಳಿ, ಕೈಮಗ್ಗ, ಕೃಷಿ ಉತ್ಪನ್ನ, ರಸಗೊಬ್ಬರ ಮತ್ತು ಶೈಕ್ಷಣಿಕ ಸಾಮಗ್ರಿಗಳು ಸೇರಿ 100ಕ್ಕೂ ಹೆಚ್ಚು ವಸ್ತುಗಳ ಮೇಲಿನ ತೆರಿಗೆ ಪರಿಷ್ಕರಿಸಲು ಗೋವಾದಲ್ಲಿ ನಡೆದ ಆರು ಸಚಿವರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ.
ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸರಕುಗಳ ಮೇಲೆ ವಿಧಿಸುತ್ತಿರುವ ಶೇ 12ರಷ್ಟು ಜಿಎಸ್‌ಟಿ ಅನ್ನು ಶೇ 5ಕ್ಕೆ ಇಳಿಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ. ಆದರೆ, ಯಾವುದೇ ಒಮ್ಮತದ ನಿರ್ಧಾರ ಕೈಗೊಂಡಿಲ್ಲ.
ಅಕ್ಟೋಬರ್ 20ರಂದು ನಿಗದಿಯಾಗಿರುವ ಸಮಿತಿಯ ಸಭೆಯಲ್ಲಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. ಬಳಿಕ ನವೆಂಬರ್‌ನಲ್ಲಿ ನಡೆಯಲಿರುವ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಲಾಗಿದೆ.
‘ಬುಧವಾರ ಸಚಿವರ ಸಭೆ ನಡೆಯಿತು. ಬೈಸಿಕಲ್ ಮತ್ತು ಬಾಟಲಿ ನೀರಿನ ಮೇಲಿನ ತೆರಿಗೆ ಸರಳೀಕರಣದ ಬಗ್ಗೆಯೂ ಚರ್ಚಿಸಲಾಯಿತು’ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು, ಗುರುವಾರ ಪಿಟಿಐಗೆ ತಿಳಿಸಿದ್ದಾರೆ.
ಪ್ರಸ್ತುತ ಶೇ 5, ಶೇ 12, ಶೇ 18 ಹಾಗೂ ಶೇ 28ರ ತೆರಿಗೆ ಸ್ಲ್ಬಾಬ್‌ಗಳಿವೆ. ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅನ್ವಯ ಶೇ 40ರಷ್ಟು ಜಿಎಸ್‌ಟಿ ವಿಧಿಸಲು ಅವಕಾಶವಿದೆ.
ಪ್ರಸಕ್ತ ವರ್ಷ ಜಿಎಸ್‌ಟಿ ಅಡಿಯಲ್ಲಿ ಸರಾಸರಿ ತೆರಿಗೆಯು ಶೇ 11.56ರಷ್ಟು ಕುಸಿದಿದೆ ಎಂದು ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದಾರೆ.
23ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಶೇ 28ರ ಸ್ಲ್ಯಾಬ್‌ನಿಂದ 178 ವಸ್ತುಗಳನ್ನು ತೆಗೆದುಹಾಕಲಾಗಿದೆ. ಈ ನಿರ್ಧಾರ ಮರುಪರಿಶೀಲಿಸಲು ಸಲಹೆ ನೀಡಲಾಗಿದೆ. ಇದರಿಂದ ಹೆಚ್ಚಿನ ವರಮಾನ ಗಳಿಸಲು ಸಹಕಾರಿಯಾಗಲಿದೆ. ಅಲ್ಲದೆ, ಕೆಲವು ವಸ್ತುಗಳ ಮೇಲೆ ತೆರಿಗೆಯನ್ನು ಶೇ 5ಕ್ಕೆ ಇಳಿಸಿದರೆ ಜನಸಾಮಾನ್ಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.
‘ತೆರಿಗೆ ಸ್ಲ್ಯಾಬ್‌ಗಳನ್ನು ಬದಲಾವಣೆ ಮಾಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಜನಸಾಮಾನ್ಯರು ಬಳಸುವ ವಸ್ತುಗಳ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ಚರ್ಚಿಸಲಾಯಿತು’ ಎಂದು ಹೇಳಿದ್ದಾರೆ.
ಸಭೆಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಕರ್ನಾಟಕದ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕೇರಳದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಪಾಲ್ಗೊಂಡಿದ್ದರು.
ಹೇರ್ ಡ್ರೈಯರ್, ಹೇರ್ ಕರ್ಲರ್, ಪ್ರಸಾಧನ ಪರಿಕರಗಳು ಶೇ 18ರ ಸ್ಲ್ಬಾಬ್‌ನಲ್ಲಿವೆ. ಇಂತಹ ವಸ್ತುಗಳನ್ನು ಶೇ 28ರ ತೆರಿಗೆ ಸ್ಲ್ಬ್ಯಾಬ್‌ಗೆ ಸೇರಿಸುವ ಸಾಧ್ಯತೆಯಿದೆ.
ಬೈಸಿಕಲ್ ದೇಶದಲ್ಲಿ ಸಾಕಷ್ಟು ಜನರು ಬೈಸಿಕಲ್ ಬಳಸುತ್ತಾರೆ. ಇದರ ಮೇಲಿನ ತೆರಿಗೆ ಕಡಿಮೆ ಮಾಡುವ ಬಗ್ಗೆ ಸಮಿತಿ ಚರ್ಚಿಸಿದೆ. ಪ್ರಸ್ತುತ ಬೈಸಿಕಲ್ ಹಾಗೂ ಅದರ ಬಿಡಿಭಾಗಗಳ ಮೇಲೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇ–ಬೈಸಿಕಲ್ ಮೇಲೆ ಶೇ 5ರಷ್ಟು ತೆರಿಗೆ ದರವಿದೆ. ವೈದ್ಯಕೀಯ ಸಾಮಗ್ರಿ ಪ್ರಸ್ತುತ ವೈದ್ಯಕೀಯ ಮತ್ತು ಔಷಧೀಯ ಸಾಮಗ್ರಿಗಳಿಗೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರಿಂದ ರೋಗಿಗಳಿಗೆ ತೊಂದರೆಯಾಗಿದೆ. ತೆರಿಗೆ ಕಡಿಮೆಗೊಳಿಸುವ ವಿಷಯವು ಸಭೆಯ ಮುಂದೆ ಪ್ರಸ್ತಾಪವಾಗಿದೆ. ಆದರೆ ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚಿಸಲು ಸಭೆ ನಿರ್ಧರಿಸಿದೆ. ಆಹಾರ ಪದಾರ್ಥ ಜನಸಾಮಾನ್ಯರು ಹೆಚ್ಚು ಬಳಕೆ ಮಾಡುವ ವಸ್ತುಗಳನ್ನು ಕಡಿಮೆ ಸ್ಲ್ಯಾಬ್‌ನಡಿ ತರಬೇಕು. ಆಹಾರ ಪದಾರ್ಥಗಳ ಬೆಲೆಯನ್ನು ಶೇ 12ರಿಂದ ಶೇ 5ಕ್ಕೆ ಇಳಿಸಬೇಕು. ಬೆಲೆ ಇಳಿಕೆಯಾಗುವುದರಿಂದ ಜನರಿಗೆ ಪರಿಹಾರ ಸಿಗಲಿದೆ. ಆ ಮೂಲಕ ವರಮಾನ ಹೆಚ್ಚಳದ ಉದ್ದೇಶ ಹೊಂದಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.