ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಎಸ್‌ಟಿ ಜಾರಿಯಾಗಿ ಏಳು ವರ್ಷ: ನಕಲಿ ಇನ್‌ವಾಯ್ಸ್‌ಗಳೇ ಸವಾಲು

Published 30 ಜೂನ್ 2024, 15:35 IST
Last Updated 30 ಜೂನ್ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಸೋಮವಾರಕ್ಕೆ ಏಳು ವರ್ಷ ತುಂಬಲಿದೆ. ಆದರೂ, ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ಜಿಎಸ್‌ಟಿ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್‌ (ಐಟಿಸಿ) ವಂಚನೆ ಎಸಗುವ ಪ್ರಕರಣಗಳಿಗೆ ಕಡಿವಾಣ ಹಾಕುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ.

ಜಿಎಸ್‌ಟಿ ಮಂಡಳಿಯು ದರ ಸರಳೀಕರಣಕ್ಕೆ ಸಮಿತಿ ರಚಿಸಿದೆ. ಮತ್ತೊಂದೆಡೆ ತೆರಿಗೆ ಸಂಗ್ರಹದಲ್ಲಿ ನಿರೀಕ್ಷೆ ಮೀರಿ ಸುಧಾರಣೆಯಾಗಿದೆ. ರಾಜ್ಯಗಳ ಬೊಕ್ಕಸದ ಆದಾಯವೂ ಏರಿಕೆಯಾಗುತ್ತಿದೆ. ಆದರೆ, ವಂಚನೆ ತಡೆಯುವುದು ಕಷ್ಟಕರವಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. 

ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ವ್ಯಾಪಾರ ಸ್ನೇಹಿಯಾಗಿಸಲು 2017ರ ಜುಲೈ 1ರಂದು ದೇಶದಾದ್ಯಂತ ಏಕಕಾಲಕ್ಕೆ ಜಿಎಸ್‌ಟಿ ಜಾರಿಗೊಳಿಸಲಾಯಿತು. ಇದರ ಜಾರಿಗೂ ಮೊದಲು ದೇಶದಲ್ಲಿ 17ಕ್ಕಿಂತಲೂ ಹೆಚ್ಚು ವಿವಿಧ ಬಗೆಯ ಪರೋಕ್ಷ ತೆರಿಗೆ ಮತ್ತು ಸುಂಕಗಳಿದ್ದವು. 

2017ರಲ್ಲಿ 65 ಲಕ್ಷವಿದ್ದ ತೆರಿಗೆದಾರರ ಸಂಖ್ಯೆ ಈಗ 1.46 ಕೋಟಿಗೆ ಏರಿಕೆಯಾಗಿದೆ. 2017–18ರಲ್ಲಿ ಮಾಸಿಕ ಸರಾಸರಿ ₹90 ಸಾವಿರ ಕೋಟಿ ಇದ್ದ ಜಿಎಸ್‌ಟಿ ವರಮಾನವು, 2024–25ನೇ ಸಾಲಿನಲ್ಲಿ ₹1.90 ಲಕ್ಷ ಕೋಟಿ ದಾಟಿದೆ.

ಜಿಎಸ್‌ಟಿ ಅಡಿಯಲ್ಲಿ ಜೀವರಕ್ಷಕ ಔಷಧಗಳು, ಶಿಕ್ಷಣ, ಸಾರ್ವಜನಿಕ ಸಾರಿಗೆ ಸೇರಿ ಹಲವು ಸೇವೆಗಳಿಗೆ ರಿಯಾಯಿತಿಯೂ ಸಿಕ್ಕಿದೆ.

ತೆರಿಗೆ ಸಂಗ್ರಹದಲ್ಲಿ ಶೇ 0.72ರಿಂದ (ಜಿಎಸ್‌ಟಿ ಪೂರ್ವ) ಶೇ 1.22ರಷ್ಟಕ್ಕೆ ಏರಿಕೆಯಾಗಿದೆ. ಜಿಎಸ್‌ಟಿ ಪರಿಹಾರ ಮೊತ್ತದ ಹೊರತಾಗಿ ರಾಜ್ಯಗಳ ಆದಾಯದಲ್ಲಿ ಶೇ 1.15ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಸರ್ಕಾರದ ಅಂಕಿಅಂಶ ಹೇಳಿವೆ. 

₹1.98 ಲಕ್ಷ ಕೋಟಿ ವಂಚನೆ

2023ರಲ್ಲಿ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ) ₹1.98 ಲಕ್ಷ ಕೋಟಿ ತೆರಿಗೆ ವಂಚನೆ ಪತ್ತೆ ಹಚ್ಚಿದ್ದು ಕೃತ್ಯದಲ್ಲಿ ಭಾಗಿಯಾದ 140 ಮಂದಿಯನ್ನು ಬಂಧಿಸಿದೆ.  ಪ್ರಮುಖವಾಗಿ ಆನ್‌ಲೈನ್‌ ಗೇಮಿಂಗ್‌ ಕ್ಯಾಸಿನೊ ವಿಮೆ ಮತ್ತು ಮಾನವ ಸಂಪನ್ಮೂಲ ಸೇವೆ ಒದಗಿಸುವ ಕಂಪನಿಗಳಲ್ಲಿ ಅತಿಹೆಚ್ಚು ತೆರಿಗೆ ವಂಚನೆ ನಡೆದಿದೆ ಎಂದು ಸರ್ಕಾರದ ಅಂಕಿಅಂಶ ಹೇಳಿವೆ. ವ್ಯಾಜ್ಯಗಳ ತ್ವರಿತ ವಿಲೇವಾರಿಗಾಗಿ ಜಿಎಸ್‌ಟಿ ಮೇಲ್ಮನವಿ ಪ್ರಧಾನ ಪೀಠ ಹಾಗೂ ರಾಜ್ಯಗಳ ಮಟ್ಟದಲ್ಲಿ ನ್ಯಾಯಮಂಡಳಿಯ ಪೀಠಗಳ ರಚನೆಗೆ ಜಿಎಸ್‌ಟಿ ಮಂಡಳಿಯು ಶಿಫಾರಸು ಮಾಡಿದೆ. ಆದರೆ ಇನ್ನೂ ಪೀಠಗಳು ಕಾರ್ಯರೂಪಕ್ಕೆ ಬಂದಿಲ್ಲ. ‘ನೇರ ತೆರಿಗೆ ಸಂಗ್ರಹದಲ್ಲಿ ದಕ್ಷತೆ ಹೆಚ್ಚಿಸುವ ಜೊತೆಗೆ ಪಾರದರ್ಶಕತೆ ಕಾಯ್ದುಕೊಳ್ಳಲು ಸಂಸ್ಥೆಯಿಂದ ವಿವಿಧ ಇಲಾಖೆಯ 6800 ನೌಕರರಿಗೆ ತರಬೇತಿ ನೀಡಲಾಗಿದೆ’ ಎಂದು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ (ಐಸಿಎಐ) ಅಧ್ಯಕ್ಷ ರಂಜೀತ್ ಕುಮಾರ್‌ ಅಗರ್ವಾಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT