ಸರಿ ಲೆಕ್ಕದ ವ್ಯವಹಾರಕ್ಕೆ ಜಿಎಸ್‌ಟಿ ಒಳಿತು

7
ಹೋಟೆಲ್‌, ಬೇಕರಿ ವ್ಯವಹಾರಕ್ಕೆ ತೊಂದರೆ ಉಂಟು ಮಾಡದ ಸರಕು ಮತ್ತು ಸೇವಾ ತೆರಿಗೆ

ಸರಿ ಲೆಕ್ಕದ ವ್ಯವಹಾರಕ್ಕೆ ಜಿಎಸ್‌ಟಿ ಒಳಿತು

Published:
Updated:
Deccan Herald

ದಾವಣಗೆರೆ: ಸರಿ ಲೆಕ್ಕ ಕೊಡುವವರಿಗೆ ಜಿಎಸ್‌ಟಿಯಿಂದ ಯಾವ ತೊಂದರೆಯೂ ಇಲ್ಲ. ಲೆಕ್ಕ ತಪ್ಪಿಸುವವರಿಗೆ ಮಾತ್ರ ಈಗ ತೊಂದರೆಯಾಗಿದೆ.

ಇದು ಜಿಎಸ್‌ಟಿ ಬಗ್ಗೆ ಮೈತ್ರಿ ಫುಡ್‌ನ ಶ್ರೀನಿವಾಸ ಅವರ ಒಂದೇ ಮಾತಿನ ವಿವರಣೆ.

ವಾರ್ಷಿಕ ವ್ಯವಹಾರ ₹ 75 ಲಕ್ಷದವರೆಗೆ ಕಾಂಪೋಜಿಷನ್‌ ಟ್ಯಾಕ್ಸ್‌ ಎಂದು ವ್ಯವಹಾರದ ಶೇ 5ರಷ್ಟು ತೆರಿಗೆ ಕಟ್ಟಿದರೆ ಆಯಿತು. ವ್ಯವಹಾರ ₹ 75 ದಾಟಿದ್ದರಷ್ಟೇ ಮಾತ್ರ ಜಿಎಸ್‌ಟಿ ಮತ್ತು ಕೆಎಸ್‌ಟಿ ಕಟ್ಟಬೇಕಾಗುತ್ತದೆ. ದಾವಣಗೆರೆಯ ಶೇ 90ರಷ್ಟು ಹೋಟೆಲ್‌ಗಳು, ಬೇಕರಿಗಳು ಇದರ ಒಳಗೇ ವ್ಯವಹಾರ ನಡೆಸುವಂತವುಗಳಾಗಿವೆ. ಹಾಗಾಗಿ ಇಲ್ಲಿ ಜೆಎಸ್‌ಟಿ ಬಗ್ಗೆ ಹೆಚ್ಚಿನ ಆಹಾರ ಮಾರಾಟ ಕೇಂದ್ರಗಳು (ಹೋಟೆಲ್‌, ಬೇಕರಿ) ತಲೆ ಕೆಡಿಸಿಕೊಂಡಿಲ್ಲ.

ಗ್ರಾಹಕರಿಗೆ ತೆರಿಗೆ ವಿಧಿಸುತ್ತಿಲ್ಲ. ನಾವೇ ಭರಿಸುತ್ತೇವೆ. ಬಿಲ್‌ನಲ್ಲಿ ಜಿಎಸ್‌ಟಿ ಎಷ್ಟು, ಕೆಎಸ್‌ಟಿ ಎಸ್ಟು ಎಂಬುದನ್ನು ತೋರಿಸುತ್ತೇವೆ. ಉದಾಹರಣೆಗೆ ₹ 20 ಮೌಲ್ಯದ ಒಂದು ಆಹಾರ ವಸ್ತುವನ್ನು ಜಿಎಸ್‌ಟಿ ಜಾರಿಯಾದ ಮೇಲೆಯೂ ಅಷ್ಟೇ ದರಕ್ಕೆ ಮಾರುತ್ತಿದ್ದೇವೆ. ಆದರೆ ಬಿಲ್‌ನಲ್ಲಿ ಅದರ ಮೌಲ್ಯ ₹ 16.5 ದಾಖಲಿಸಿ, ಉಳಿದ ಮೊತ್ತವನ್ನು ತೆರಿಗೆ ಎಂಬುದನ್ನು ತೋರಿಸುತ್ತೇವೆ. ಇದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದು ಶ್ರೀನಿವಾಸ್‌ ವಿವರಣೆ ನೀಡಿದರು.

ಕಪ್ಪು ಹಣಕ್ಕೆ ಅವಕಾಶ ಇಲ್ಲ:

ಅಂಗಡಿಯಿಂದ ₹ 100 ವಸ್ತುವನ್ನು ಖರೀದಿಸಿದರೆ ಅದಕ್ಕೆ ₹ 50ರ ಬಿಲ್‌ ಪಡೆದರೆ ಉಳಿದ ₹ 50 ಕಪ್ಪು ಹಣವಾಗುತ್ತದೆ. ಇದರಿಂದ ಅಂಗಡಿಯವನಿಗೂ, ಖರೀದಿಸಿದ ಹೋಟೆಲ್‌ನವನಿಗೂ ವ್ಯವಹಾರಕ್ಕೆ ತೊಂದರೆಯಾಗುತ್ತದೆ. ಈಗ ಇನ್‌ಪುಟ್‌, ಔಟ್‌ಪುಟ್‌ ಎಲ್ಲವೂ ಬಿಲ್‌ ಮೂಲಕವೇ ಹೋಗುವುದರಿಂದ ಕಪ್ಪು ಹಣದ ಸೃಷ್ಟಿಯಾಗುವುದಿಲ್ಲ. ಕಪ್ಪು ವ್ಯವಹಾರಗಳು ನಡೆಯುವುದಿಲ್ಲ ಎಂದು ‘ಆಹಾರ್‌’ ಮ್ಯಾನೇಜರ್‌ ವೆಂಕಟೇಶ್‌ ಅವರ ವಿವರಣೆ.

ಜಿಎಸ್‌ಟಿ ಜಾರಿಗೊಳಿಸುವಾಗ ಶೇ 15ರಿಂದ ಶೇ 18ರವರೆಗೆ ತೆರಿಗೆ ವಿಧಿಸುತ್ತಿದ್ದರು. ಈಗ ಅದನ್ನು ಶೇ 5ಕ್ಕೆ ಇಳಿಸಿದ್ದಾರೆ. ಅದರ ನಿಯಮಗಳ ಬಗ್ಗೆ ಎಲ್ಲ ವ್ಯಾಪಾರಸ್ಥರಿಗೆ ಅರಿವು ಮೂಡಿಸಿದರೆ ಒಳ್ಳೆಯದು. ಜಿಎಸ್‌ಟಿಯಿಂದ ಯಾರಿಗೂ ತೊಂದರೆಯಾಗಿಲ್ಲ. ಆದರೂ ಹೆದರಿಕೆ ನಿಂತಿಲ್ಲ ಎಂದು ಪ್ರಫುಲ್ಲಚಂದ್ರ ತಿಳಿಸಿದರು.

ಲೆಕ್ಕ ಸರಿಯಾಗಿ ಕೊಟ್ಟರೆ ವ್ಯವಹಾರ ನಡೆಸುವವರಿಗೂ ಒಳ್ಳೆಯದು, ಸರ್ಕಾರಕ್ಕೂ ಒಳ್ಳೆಯದು. ಇಲ್ಲದೇ ಇದ್ದರೆ ಸರ್ಕಾರಕ್ಕೂ ಇದನ್ನು ಪತ್ತೆ ಮಾಡುವ ಕೆಲಸ. ವ್ಯಾಪಾರಸ್ಥರಿಗೂ ಅನಧಿಕೃತ ವ್ಯವಹಾರ ನಡೆಸಿ ಸಿಕ್ಕಿಬೀಳುವ ಅಪಾಯ. ಹಾಗಾಗಿ ಜಿಎಸ್‌ಟಿ ಜಾರಿಯಾಗಿದ್ದರಿಂದ ನೇರ ವ್ಯವಹಾರ ಮಾಡುವವರಿಗೆ ಯಾವುದೇ ತೊಂದರೆಯಾಗಿಲ್ಲ. ತೆರಿಗೆ ತಪ್ಪಿಸಲು ಕದ್ದುಮುಚ್ಚಿ ವ್ಯವಹಾರ ಮಾಡುವವರಿಗಷ್ಟೇ ತೊಂದರೆಯಾಗಿದೆ ಎಂಬುದು ರವಿ, ವಿಠಲರಾವ್‌, ಜಗದೀಶ್‌ ಒಳಗಂಡಂತೆ ಹೆಚ್ಚಿನ ವ್ಯವಹಾರಸ್ಥರ ಅಭಿಪ್ರಾಯವಾಗಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !