ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಪಗ್ರಹ ಆಧಾರಿತ ಟೋಲ್ ಸಂಗ್ರಹ ಜಾರಿ: ನಿತಿನ್‌ ಗಡ್ಕರಿ

Published 26 ಜೂನ್ 2024, 14:28 IST
Last Updated 26 ಜೂನ್ 2024, 14:28 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದಲ್ಲಿ ಪ್ರಸಕ್ತ ಹಣಕಾಸು ವರ್ಷದಡಿ 5 ಸಾವಿರಕ್ಕೂ ಹೆಚ್ಚು ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಉಪಗ್ರಹ ಆಧಾರಿತ ಶುಲ್ಕ ಸಂಗ್ರಹ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಟೋಲ್‌ ಪ್ಲಾಜಾಗಳ ಬದಲಾಗಿ ಉಪಗ್ರಹ ಆಧಾರಿತ ಟೋಲ್‌ ವ್ಯವಸ್ಥೆ ಜಾರಿ ಸಂಬಂಧ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ಹೆದ್ದಾರಿಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೆ ಏಜೆನ್ಸಿಗಳು ಬಳಕೆದಾರರಿಂದ ಶುಲ್ಕ ಸಂಗ್ರಹಿಸಬಾರದು’ ಎಂದು ಸೂಚಿಸಿದರು.

‘ಏಜೆನ್ಸಿಗಳು ಗುಣಮಟ್ಟದ ಸೇವೆ ನೀಡಲು ವಿಫಲವಾದರೆ ಯಾವುದೇ ಕಾರಣಕ್ಕೂ ಶುಲ್ಕ ಸಂಗ್ರಹಿಸಬಾರದು. ಆದರೆ, ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ಬಳಕೆದಾರರಿಂದ ತರಾತುರಿಯಲ್ಲಿ ಶುಲ್ಕ ಸಂಗ್ರಹಿಸುತ್ತಿವೆ’ ಎಂದರು.

ಹೊಸ ವ್ಯವಸ್ಥೆ ಹೇಗೆ?:

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಿಎನ್‌ಎಸ್ಎಸ್‌ (ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ) ಆಧಾರಿತ ಎಲೆಕ್ಟ್ರಾನಿಕ್‌ ಟೋಲ್ ಕಲೆಕ್ಷನ್‌ಗೆ (ಇಟಿಸಿ) ಮುಂದಾಗಿದೆ. ಫಾಸ್ಟ್ಯಾಗ್‌ ವ್ಯವಸ್ಥೆಯನ್ನೇ ಶುಲ್ಕ ಸಂಗ್ರಹಕ್ಕೆ ಬಳಸಿಕೊಳ್ಳಲಿದೆ.

ಆರಂಭಿಕ ಹಂತದಲ್ಲಿ ಫಾಸ್ಟ್ಯಾಗ್‌ ವ್ಯವಸ್ಥೆ ಬಳಸಿಕೊಂಡೇ ಜಿಎನ್‌ಎಸ್‌ಎಸ್‌–ಇಟಿಸಿ ವ್ಯವಸ್ಥೆ ಜಾರಿಯಾಗಲಿದೆ. ಕೆಲಕಾಲ ಹಾಲಿ ಇರುವ ಆರ್‌ಎಫ್‌ಐಡಿ–ಇಟಿಸಿ (ರೇಡಿಯೊ ಪ್ರೀಕ್ವೆನ್ಸಿ ಐಡೆಂಟಿಫಿಕೇಷನ್‌) ಮತ್ತು ಹೊಸ ವ್ಯವಸ್ಥೆ ಎರಡೂ ಜಾರಿಯಲ್ಲಿ ಇರಲಿವೆ.

ಮೊದಲಿಗೆ ವಾಣಿಜ್ಯ ವಾಹನಗಳಿಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಬಳಿಕ ಖಾಸಗಿ ವಾಹನಗಳಿಗೆ ಈ ಸೇವೆ ವಿಸ್ತರಿಸಲು ಪ್ರಾಧಿಕಾರವು ನಿರ್ಧರಿಸಿದೆ.

ವಂಚನೆ ತಡೆಗಟ್ಟುವ ಸಂಬಂಧ ಚಾಲಕರ ವರ್ತನೆ ಹಾಗೂ ಬಳಕೆಗೆ ಸಂಬಂಧಿಸಿದ ದತ್ತಾಂಶಗಳ ವಿಶ್ಲೇಷಣೆಗೂ ಪ್ರಾಧಿಕಾರವು, ಸಾರಿಗೆ ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಜಿಎನ್‌ಎಸ್‌ಎಸ್‌ ಪಾವತಿ ಮಾದರಿಯನ್ನು ಪ್ರೀಪೇಯ್ಡ್‌ನಿಂದ ಪೋಸ್ಟ್‌ ಪೇಯ್ಡ್‌ಗೆ ಬದಲಾಯಿಸಬೇಕು. ಇದರಿಂದ ಬ್ಯಾಂಕ್‌ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ತ್ವರಿತಗತಿಯ ಶುಲ್ಕ ಜಮಾ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT