ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅದಾನಿ ಷೇರು ಹಗರಣ | ಸೆಬಿ ಅಧ್ಯಕ್ಷೆ ಭಾಗಿ: ಹಿಂಡೆನ್‌ಬರ್ಗ್‌ ಆರೋಪ

Published : 10 ಆಗಸ್ಟ್ 2024, 23:38 IST
Last Updated : 10 ಆಗಸ್ಟ್ 2024, 23:38 IST
ಫಾಲೋ ಮಾಡಿ
Comments

ನವದೆಹಲಿ: ‘ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅಧ್ಯಕ್ಷೆ ಮಾಧವಿ ಬುಚ್‌ ಮತ್ತು ಅವರ ಪತಿ, ಅದಾನಿ ಷೇರು ಹಗರಣದಲ್ಲಿ ಭಾಗಿಯಾಗಿದ್ದಾರೆ’ ಎಂದು ಅಮೆರಿಕದ ಶಾರ್ಟ್‌ ಶೆಲ್ಲರ್‌ ಕಂಪನಿ ಹಿಂಡೆನ್‌ ಬರ್ಗ್ ಮತ್ತೊಂದು ಗಂಭೀರ ಆರೋಪ ಮಾಡಿದೆ.

ಉದ್ಯಮಿ ಗೌತಮ್‌ ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆ. ಅದಾನಿಯವರು ಮಾರಿಷಸ್‌ ಮತ್ತು ಇನ್ನಿತರ ದೇಶಗಳಲ್ಲಿ ಹೊಂದಿರುವ ‘ಶೆಲ್‌ ಕಂಪನಿ’ಗಳ ಬಗ್ಗೆ ತನಿಖೆ ನಡೆಸಲು ಸೆಬಿ ಯಾವುದೇ ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ ಎಂದು ಹಿಂಡೆನ್‌ಬರ್ಗ್‌ ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಆರೋಪ ಮಾಡಿದೆ.

ಮಾಧವಿ ದಂಪತಿ ಹೂಡಿಕೆಯ ಮೂಲ ತಮ್ಮ ವೇತನವೆಂದು ನಿಧಿಯ ದೃಢೀಕೃತ ಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ. ಈ ದಂಪತಿಯ ಹೂಡಿಕೆಯ ನಿವ್ವಳ ಮೌಲ್ಯವು ₹84 ಕೋಟಿ ಎಂದು ಅಂದಾಜಿಸಲಾಗಿದೆ ಎಂದು ಅದು ಹೇಳಿದೆ. 

ಷೇರುಪೇಟೆಯ ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಹಿಂಡೆನ್‌ಬರ್ಗ್‌ ವರದಿ ಪ್ರಕಟಿಸಿತ್ತು.

‘ಈ ಹಗರಣದಲ್ಲಿ ಅದಾನಿ ಸಮೂಹವು ಸಂಪಾದಿಸಿದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದು, ಅದರಲ್ಲಿ ಸೆಬಿಯ ಈಗಿನ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಪಾಲು ಹೊಂದಿದ್ದಾರೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿಯವರ ಹಿರಿಯ ಸಹೋದರ ವಿನೋದ್ ಅದಾನಿಯವರ ನಿಯಂತ್ರಣದ, ಬರ್ಮುಡಾ ಮತ್ತು ಮಾರಿಷಸ್‌ನಲ್ಲಿನ ಹೂಡಿಕೆಗಳನ್ನು ರೌಂಡ್-ಟ್ರಿಪ್ ಫಂಡ್‌ಗಳಿಗೆ ಮತ್ತು ಷೇರು ಬೆಲೆಯನ್ನು ಹೆಚ್ಚಿಸಲು ಬಳಸಲಾಗಿದೆ’ ಎಂದು ಆರೋಪಿಸಲಾಗಿದೆ.

ಅದಾನಿ ಸಮೂಹದ ವಿದೇಶದಲ್ಲಿನ ಷೇರುದಾರರಿಗೆ ಧನಸಹಾಯ ಮಾಡಿದವರು ಯಾರೆಂಬುದನ್ನು ಸೆಬಿ ತನ್ನ ತನಿಖೆಯಲ್ಲಿ ‘ಖಾಲಿ’ ತೋರಿಸಿದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಉಲ್ಲೇಖಿಸಿರುವ ಹಿಂಡೆನ್‌ಬರ್ಗ್‌, ‘ಸೆಬಿಯು ನಿಜವಾಗಿಯೂ ವಿದೇಶದಲ್ಲಿನ ಹೂಡಿಕೆದಾರರನ್ನು ಪತ್ತೆಹಚ್ಚಲು ಬಯಸಿದ್ದರೆ, ಬಹುಶಃ ಸೆಬಿ ಅಧ್ಯಕ್ಷರೇ ಇದರಲ್ಲಿ ಸಿಕ್ಕಿಬೀಳುತ್ತಿದ್ದರು’ ಎಂದು ಹೇಳಿದೆ.

ಇದಕ್ಕೆ ಸೆಬಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT