ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿ – ಮಾರ್ಚ್‌ ಅವಧಿ: ಮನೆ ಮಾರಾಟ ಶೇ 29 ಕುಸಿತ

ಜೆಎಲ್‌ಎಲ್‌ ಇಂಡಿಯಾ ವರದಿ
Last Updated 7 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ದೇಶದ ಏಳು ಪ್ರಮುಖ ನಗರಗಳಲ್ಲಿ ಈ ವರ್ಷದ ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯಲ್ಲಿ 27,451 ಮನೆಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಮಾರಾಟಗೊಂಡಿದ್ದ 38,628 ಮನೆಗಳಿಗೆ ಹೋಲಿಸಿದರೆ ಶೇ 29ರಷ್ಟು ಕುಸಿತ ದಾಖಲಾಗಿದೆ.

ಮಂದಗತಿಯ ಆರ್ಥಿಕತೆಗೆ ಈಗ ‘ಕೊರೊನಾ–2’ ವೈರಸ್‌ ಪಿಡುಗಿನ ಕಾರಣಕ್ಕೆ ಉದ್ಭವಿಸಿರುವ ಆರೋಗ್ಯ ಬಿಕ್ಕಟ್ಟು ಕೂಡ ಸೇರಿಕೊಂಡಿದೆ. ಹೀಗಾಗಿ 2020ರ ಕ್ಯಾಲೆಂಡರ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ ಜನರು ಮನೆ ಖರೀದಿ ನಿರ್ಧಾರವನ್ನು ಮುಂದೂಡಿದ್ದಾರೆ ಎಂದು ಜೆಎಲ್‌ಎಲ್‌ ಇಂಡಿಯಾದ ತ್ರೈಮಾಸಿಕ ವರದಿಯಲ್ಲಿ ತಿಳಿಸಲಾಗಿದೆ.

ಮನೆಗಳ ಮಾರಾಟ ವಿಷಯದಲ್ಲಿ ಕಳೆದ ಐದು ವರ್ಷಗಳಲ್ಲಿನ ಎರಡನೆ ಅತಿದೊಡ್ಡ ಕುಸಿತ ಇದಾಗಿದೆ. ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಕಾರಣಕ್ಕೆ 2017ರ ಕ್ಯಾಲೆಂಡರ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮನೆಗಳ ಮಾರಾಟವು ಶೇ 37ರಷ್ಟು ಕಡಿಮೆಯಾಗಿತ್ತು.

ಈ ವರ್ಷ ಬೆಂಗಳೂರಿನಲ್ಲಿ ಕೇವಲ 4,186 ಮನೆಗಳು ಮಾರಾಟವಾಗಿದ್ದು, ಕುಸಿತದ ಪ್ರಮಾಣವು ಗರಿಷ್ಠ ಶೇ 52ರಷ್ಟಿದೆ. ನಂತರದ ಸ್ಥಾನದಲ್ಲಿ ಮುಂಬೈ, ಚೆನ್ನೈ ನಗರಗಳಿವೆ.

ಜನವರಿ–ಮಾರ್ಚ್‌ ಅವಧಿಯಲ್ಲಿ ದೇಶದ ಏಳು ಮಹಾನಗರಗಳಲ್ಲಿ ಖರೀದಿಯಾದ ಮನೆಗಳಿಗಿಂತ ಮಾರಾಟಕ್ಕೆ ಸಿದ್ಧಗೊಂಡ ಮನೆಗಳ ಸಂಖ್ಯೆ ಹೆಚ್ಚಿದೆ. ವಾಸಕ್ಕೆ ಸಿದ್ಧವಿರುವ ಹೊಸ ಮನೆಗಳ ಪ್ರಮಾಣ ಶೇ 3ರಷ್ಟು ಹೆಚ್ಚಾಗಿ 40,574ಕ್ಕೆ ಏರಿದೆ.

ಮಾರಾಟವಾಗದ ಮನೆಗಳ ಒಟ್ಟಾರೆ ಸಂಖ್ಯೆಯು 4,55,351ಕ್ಕೆ ತಲುಪಿದೆ. ಮಾರಾಟವಾಗದ ಮನೆಗಳ ಮೌಲ್ಯವು ದೆಹಲಿ – ಎನ್‌ಸಿಆರ್‌ಗಿಂತ ಮುಂಬೈನಲ್ಲಿ ಹೆಚ್ಚಿಗೆ ಇದೆ. ಏಳು ಮಹಾ ನಗರಗಳಲ್ಲಿ ಮಾರಾಟವಾಗದ ಮನೆಗಳ ಒಟ್ಟಾರೆ ಮೊತ್ತವು 2020ರ ಮಾರ್ಚ್ ಅಂತ್ಯಕ್ಕೆ ₹ 3,65,100 ಕೋಟಿಗೆ ತಲುಪಿದೆ.

‘ಕೋವಿಡ್‌ ಬಿಕ್ಕಟ್ಟು ಶಮನಗೊಳ್ಳುತ್ತಿದ್ದಂತೆ ಮನೆಗಳ ಖರೀದಿ ಆಸಕ್ತಿ ಗರಿಗೆದರಲಿದೆ. ಉತ್ತಮ ಬೆಲೆ, ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿಯ ಸುಧಾರಣೆ, ಬೇಡಿಕೆ ಹೆಚ್ಚಳದಿಂದಾಗಿ ಮನೆಗಳ ಮಾರಾಟ ಚುರುಕಾಗಲಿದೆ. ಹಬ್ಬದ ದಿನಗಳಲ್ಲಿ ಮಾರಾಟ ಭರಾಟೆಯೂ ಕಂಡು ಬರಲಿದೆ’ ಎಂದು ಜೆಎಲ್‌ಎಲ್‌ ಇಂಡಿಯಾದ ಸಿಇಒ ರಮೇಶ್‌ ನಾಯರ್‌ ಆಶಾವಾದ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT