ಶನಿವಾರ, ಸೆಪ್ಟೆಂಬರ್ 25, 2021
24 °C

ಆರೋಗ್ಯ ವಿಮೆ: ಸರಿಯಾದ ಮೊತ್ತದ ಆಯ್ಕೆ ಹೇಗೆ?

ತಪನ್ ಸಿಂಘೇಲ್ Updated:

ಅಕ್ಷರ ಗಾತ್ರ : | |

Prajavani

ನಮ್ಮಲ್ಲಿ ಬಹಳಷ್ಟು ಜನ ತಮಗೆ ಯಾವುದು ಬೇಕು ಎಂಬುದನ್ನು ತೀರ್ಮಾನಿಸಲು ಸಾಕಷ್ಟು ಸಮಯ ವಿನಿಯೋಗಿಸುತ್ತಾರೆ. ಉದಾಹರಣೆಗೆ, ನಾವು ನಮ್ಮ ಅಗತ್ಯಕ್ಕೆ ಬೇಕಾದಷ್ಟು ಸ್ಟೊರೇಜ್ ಸ್ಪೇಸ್ ಇರುವ ಮತ್ತು ಉತ್ತಮ ಬ್ಯಾಟರಿ ಲೈಫ್ ಹೊಂದಿರುವ ಸ್ಮಾರ್ಟ್ ಫೋನ್ ಖರೀದಿಸಲು ಬಯಸುತ್ತೇವೆ. ಒಂದು ಕಾರು ಖರೀದಿಸುವಾಗ, ಅದರೊಳಗಿನ ಲೆಗ್ ಸ್ಪೇಸ್ ಮತ್ತು ಅದು ನೀಡುವ ಮೈಲೇಜ್ ಬಗ್ಗೆ ಯೋಚಿಸುತ್ತೇವೆ. ಯಾವುದೇ ವಸ್ತು ಖರೀದಿಸುವಾಗ ಅದರ ಬಳಕೆ ಮತ್ತು ಬಾಳಿಕೆಯನ್ನು ಪರೀಕ್ಷಿಸುತ್ತೇವೆ.

ಆದರೆ ನಿಮಗಾಗಿ ಅಥವಾ ನಿಮ್ಮವರಿಗಾಗಿ ಆರೋಗ್ಯ ವಿಮೆ ಖರೀದಿಸುವಾಗಲೂ ಸಾಕಷ್ಟು ಪರಿಶೀಲನೆ ನಡೆಸುತ್ತೀರಾ? ಹೆಸರಿಗೊಂದು ಆರೋಗ್ಯ ವಿಮೆ ಖರೀದಿಸಿದರೆ ಸಾಕಾಗುವುದಿಲ್ಲ. ಸೂಕ್ತ ವಿಮಾ ರಕ್ಷಣೆ ಪಡೆಯಲು ನೀವು ಕವರೇಜ್ ಕಡೆ ಗಮನ ಕೊಡಬೇಕು ಹಾಗೂ ಪಾಲಿಸಿಯಲ್ಲಿನ ಅಶ್ಯೂರ್ಡ್ ಮೊತ್ತದ ಕಡೆ ಗಮನ ಕೊಡಬೇಕು. ನೀವು ಆಯ್ಕೆ ಮಾಡುವ ಪಾಲಿಸಿ ನಿಮಗೆ ಹಲವು ಕಾಯಿಲೆಗಳ ವಿರುದ್ಧ ವಿಮಾ ರಕ್ಷಣೆ ನೀಡಬಹುದು. ಆದರೆ, ನೀವು ಸರಿಯಾದ ವಿಮಾ ಮೊತ್ತ ಆಯ್ದುಕೊಳ್ಳದಿದ್ದಲ್ಲಿ ಆ ಪಾಲಿಸಿಯೇ ನಿಷ್ಪ್ರಯೋಜಕ ಆಗಬಹುದು.

ನೀವು ಆದಾಯ ತೆರಿಗೆ ಉಳಿಸುವ ಉದ್ದೇಶಕ್ಕಾಗಿ, ನಿಮಗೆ ಮತ್ತು ನಿಮ್ಮ ಸಂಗಾತಿಗಾಗಿ ಒಂದು ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆ ಪಾಲಿಸಿ ಖರೀದಿಸಿದ್ದು ಅದು ₹ 3 ಲಕ್ಷದ ಇನ್ಶೂರ್ಡ್ ಮೊತ್ತ ಹೊಂದಿದೆ ಎಂದು ಭಾವಿಸಿ. ಒಂದು ವೇಳೆ ನೀವು ಮತ್ತು ನಿಮ್ಮ ಸಂಗಾತಿ ಕೋವಿಡ್-19ಕ್ಕೆ ತುತ್ತಾಗಿ ಇಬ್ಬರೂ ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ ಆ ಇನ್ಶೂರ್ಡ್‌ ಮೊತ್ತ ಸಾಕಾಗುತ್ತದೆಯೇ? ಖಂಡಿತ ಇಲ್ಲ. ಆಸ್ಪತ್ರೆಯ ಖರ್ಚುಗಳನ್ನು ನಿಭಾಯಿಸಲು ನೀವು ನಿಮ್ಮ ಉಳಿತಾಯದ ಹಣ ಬಳಸಬೇಕಾಗುತ್ತದೆ. ಅಥವಾ ನಿಮ್ಮ ಬಂಧುಗಳಿಂದ ಸಾಲ ಮಾಡಬೇಕಾಗುತ್ತದೆ.

ಇಲ್ಲಿ ನಾನು ಹೇಳಿರುವ ಕೆಲವು ಅಂಶಗಳನ್ನು ಪರಿಗಣಿಸಿ, ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ಮೊತ್ತ ಎಷ್ಟಿರಬೇಕು ಎಂಬುದನ್ನು ನಿರ್ಧರಿಸಿ.

ವಯಸ್ಸು: ನಿಮ್ಮ ವಯಸ್ಸು ಜಾಸ್ತಿ ಇದ್ದಷ್ಟೂ ನಿಮ್ಮ ಚಿಕಿತ್ಸೆಯ ವೆಚ್ಚಗಳು ಜಾಸ್ತಿಯಾಗುತ್ತವೆ. ಹೀಗಾಗಿ, ನೀವು ಮುಂಚಿನಿಂದಲೇ ಸರಿಯಾದ ಇನ್ಶೂರ್ಡ್ ಮೊತ್ತ ಆಯ್ಕೆ ಮಾಡಬೇಕು. ನೀವು ಯುವಕರಾಗಿರುವಾಗ, ನಿಮ್ಮ ಪಾಲಿಸಿಯ ಮೇಲಿನ ಪ್ರೀಮಿಯಂ ಕಡಿಮೆಯಾಗಿರುವುದಷ್ಟೇ ಅಲ್ಲದೆ, ನೀವು ವಿಮಾ ಮೊತ್ತ ಕ್ಲೇಮ್ ಮಾಡುವ ಸಾಧ್ಯತೆಗಳೂ ಕಡಿಮೆ ಇರುತ್ತವೆ. ಪಾಲಿಸಿಯ ನವೀಕರಣದ ವೇಳೆ ನಿಮಗೆ ನೋ-ಕ್ಲೇಮ್ ಬೋನಸ್ ಕೂಡ ಸಿಗುತ್ತದೆ. ಆ ಮೂಲಕ ನಿಮ್ಮ ಇನ್ಶೂರ್ಡ್ ಮೊತ್ತ ಹೆಚ್ಚಾಗುತ್ತದೆ.

ಒಂದು ವೇಳೆ ನಿಮಗೆ 50 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾದ ನಂತರದಲ್ಲಿ ಪಾಲಿಸಿ ಖರೀದಿಸಿದರೆ, ನಿಮ್ಮ ಇನ್ಶೂರ್ಡ್ ಮೊತ್ತವು ಕನಿಷ್ಠ ₹ 10 ಲಕ್ಷ ಆಗಿರಬೇಕು. ಏಕೆಂದರೆ, ಈಗಿನ ದಿನಗಳಲ್ಲಿ ಒಂದು ಸಾಮಾನ್ಯ ಶಸ್ತ್ರ ಚಿಕಿತ್ಸೆಗೂ ಲಕ್ಷಾಂತರ ರೂಪಾಯಿ ಖರ್ಚು ಬರುತ್ತಿದೆ.

‘ಹೀಗೇನಾದರೂ ಆದರೆ’ ಎಂಬ ಪರಿಸ್ಥಿತಿಗೆ ಸಜ್ಜಾಗಿ: ಆಗುವುದೆಲ್ಲ ಒಳ್ಳೆಯದಕ್ಕಾಗಿ ಎಂಬ ಸಕಾರಾತ್ಮಕ ಮನೋಭಾವ ಇರಬೇಕು. ಆದರೆ, ನಾವು ಸಂಕಷ್ಟದ ಪರಿಸ್ಥಿತಿಗಳಿಗೂ ಸಜ್ಜಾಗಿರಬೇಕು. ಹೀಗಾಗಿ, ನೀವು ಅಥವಾ ನಿಮ್ಮ ಕುಟುಂಬದವರು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ಎದುರಾದರೆ ಏನು ಮಾಡಬೇಕೆಂಬುದನ್ನೂ ಯೋಚಿಸಿ. ನಿಮ್ಮ ಸಮೀಪದ ಒಳ್ಳೆಯ ಆಸ್ಪತ್ರೆಯಲ್ಲಿನ ಸರಾಸರಿ ವೈದ್ಯಕೀಯ ವೆಚ್ಚಗಳು, ಆಸ್ಪತ್ರೆ ಕೊಠಡಿಯ ಬಾಡಿಗೆ ವೆಚ್ಚ ಇತ್ಯಾದಿಗಳನ್ನು ಅರ್ಥ ಮಾಡಿಕೊಂಡು ಲೆಕ್ಕಾಚಾರ ಮಾಡಿಟ್ಟುಕೊಳ್ಳಿ. ಈ ಲೆಕ್ಕಾಚಾರವು ಬೇಸ್ ಕವರ್ ಆಗಿ ನೀವು ಆಯ್ದುಕೊಳ್ಳಬೇಕಾದ ಮೊತ್ತವನ್ನು ಸರಿಯಾಗಿ ತೀರ್ಮಾನಿಸಲು ನೆರವಾಗುತ್ತದೆ.

ಕೌಟುಂಬಿಕ ಇತಿಹಾಸ: ನಿಮ್ಮ ಕುಟುಂಬದಲ್ಲಿ ಯಾವುದೇ ಒಂದು ಕಾಯಿಲೆ ಅಥವಾ ಆರೋಗ್ಯ ಸಮಸ್ಯೆ ಮೊದಲಿನಿಂದಲೂ ಇದೆ ಎಂದಾದಲ್ಲಿ, ನೀವು ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ಇನ್ಶೂರ್ಡ್ ಮೊತ್ತ ಆಯ್ದುಕೊಳ್ಳುವಾಗ ಅಂತಹ ಕಾಯಿಲೆಯ ಚಿಕಿತ್ಸೆಗೆ ಬೇಕಾಗುವ ವೆಚ್ಚವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು.

ಕುಟುಂಬದ ಸದಸ್ಯರು: ಒಂದು ವೇಳೆ ನೀವು ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮಾ ಪಾಲಿಸಿ ಖರೀದಿಸಲು ಬಯಸಿದ್ದರೆ ಈ ಅಂಶವು ಬಹಳ ಮುಖ್ಯವಾಗುತ್ತದೆ. ಈ ಪಾಲಿಸಿಯ ಅಡಿಯಲ್ಲಿ ಇನ್ಶೂರ್ಡ್ ಮೊತ್ತವು ಕುಟುಂಬದ ಎಲ್ಲ ಸದಸ್ಯರಿಗೂ ಅನ್ವಯಿಸುವುದರಿಂದ, ಎಲ್ಲರ ವಯಸ್ಸು, ಪ್ರತಿ ಸದಸ್ಯರ ವೈಯಕ್ತಿಕ ಅಗತ್ಯಗಳು ಹಾಗೂ ಅವರ ಭವಿಷ್ಯದ ಆರೋಗ್ಯ ಸಂಬಂಧಿ ವೆಚ್ಚಗಳ ಅಂದಾಜು ಲೆಕ್ಕಾಚಾರ ಮಾಡಿಕೊಳ್ಳಬೇಕಾಗುತ್ತದೆ. ಇಂಥ ಪಾಲಿಸಿಯಲ್ಲಿ ನೀವು ಬಹಳ ಜಾಗರೂಕತೆಯಿಂದ ಒಂದು ವಿಷಯದ ಕಡೆಗೆ ಗಮನ ನೀಡಬೇಕು. ನಿಮ್ಮ ಕುಟುಂಬದಲ್ಲಿ ಯಾರಿಗೋ ಒಬ್ಬರಿಗೆ ಅನಾರೋಗ್ಯ ಉಂಟಾದಲ್ಲಿ, ವಿಮೆ ಮೊತ್ತವು ಸಂಪೂರ್ಣವಾಗಿ ಖರ್ಚಾಗಬಾರದು; ಇತರ ಸದಸ್ಯರಿಗೂ ವಿಮಾ ಮೊತ್ತದ ಲಭ್ಯತೆ ಮುಂದುವರಿಯಬೇಕು.

ಇಂದು ಒಬ್ಬ ವ್ಯಕ್ತಿಗೆ ವೈಯಕ್ತಿಕವಾಗಿ ₹ 5 ಲಕ್ಷದ ಆರೋಗ್ಯ ವಿಮೆ ಸಾಕಾಗಬಹುದು. ಆದರೆ, ವೈದ್ಯಕೀಯ ವೆಚ್ಚಗಳ ಹಣದುಬ್ಬರವು ಪ್ರತಿ ವರ್ಷಕ್ಕೆ ಶೇಕಡ 12ರಿಂದ ಶೇ 15ರಷ್ಟು ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಕನಿಷ್ಠ ಎರಡು ವರ್ಷಗಳಿಗೊಮ್ಮೆ ನಿಮ್ಮ ಇನ್ಶೂರ್ಡ್ ಮೊತ್ತದ ಪರಿಶೀಲನೆ ಮಾಡುತ್ತ ಇರಬೇಕು.

ಸಮಂಜಸ ಅನ್ನುವಂತಹ ಮೊತ್ತ ಇದ್ದರೂ ಆರೋಗ್ಯ ವಿಮಾ ಪಾಲಿಸಿ ಕೆಲವೊಮ್ಮೆ ನಿಮಗೆ ಸಾಕಾಗದೆ ಇರಬಹುದು. ಪಾರ್ಶ್ವವಾಯು ಅಥವಾ ಕಿಡ್ನಿ ವೈಫಲ್ಯ ಮುಂತಾದ ಆರೋಗ್ಯ ಸಮಸ್ಯೆಗಳು ಎದುರಾದಾಗ ಇಂತಹ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ, ಅತ್ಯಲ್ಪ ಬೆಲೆಗೆ ನಿಮ್ಮ ಪಾಲಿಸಿಯ ವಿಮಾ ಮೊತ್ತವನ್ನು ಹೆಚ್ಚಿಸುವ ಟಾಪ್‌–ಅಪ್‌ ಬಗ್ಗೆ ಆಲೋಚಿಸಬಹುದು. ಕ್ರಿಟಿಕಲ್ ಇಲ್‌ನೆಸ್ ಪಾಲಿಸಿಯನ್ನೂ ಖರೀದಿಸಬಹುದು. ಇಂತಹ ಪಾಲಿಸಿಯು, ನಿರ್ದಿಷ್ಟ ಮಾರಕ ರೋಗ ಪತ್ತೆಯಾದಲ್ಲಿ ಚಿಕಿತ್ಸೆಗಾಗಿ ದೊಡ್ಡ ಮೊತ್ತವನ್ನು ಒದಗಿಸುತ್ತದೆ.

ಕೊನೆಯದಾಗಿ, ಒಂದು ವೈಯಕ್ತಿಕ ಅಪಘಾತ ಕವರ್ ಕೂಡ ಆಯ್ದುಕೊಳ್ಳಬಹುದು. ಇದು ಅಪಘಾತದಲ್ಲಿ ಸಂಭವಿಸುವ ಸಾವಿಗೆ ಮಾತ್ರವಲ್ಲದೇ, ಸಂಪೂರ್ಣ, ಆಂಶಿಕ ಅಥವಾ ತಾತ್ಕಾಲಿಕ ಅಂಗವೈಕಲ್ಯಕ್ಕೂ ವಿಮೆಯ ರಕ್ಷಣೆ ಒದಗಿಸುತ್ತದೆ.

ಆರೋಗ್ಯ ವಿಮೆ ಎಂಬುದು ಅನಿವಾರ್ಯ. ಮೇಲೆ ಹೇಳಿದ ಅಂಶಗಳನ್ನು ನೀವು ಗಮನಕ್ಕೆ ತೆಗೆದುಕೊಂಡರೆ ಸಾಕಷ್ಟು ವಿಮಾ ರಕ್ಷಣೆ ಪಡೆದುಕೊಳ್ಳುವಿರಿ ಮತ್ತು ವೈದ್ಯಕೀಯ ತುರ್ತು ಸ್ಥಿತಿ ಎದುರಾದಾಗ, ಅದನ್ನು ನಿಭಾಯಿಸಲು ಶಕ್ತರಾಗಿರುತ್ತೀರಿ.

(ಲೇಖಕ ಬಜಾಜ್ ಅಲಯಾನ್ಸ್ ಜನರಲ್ ಇನ್ಶೂರೆನ್ಸ್‌ನ ಎಂ.ಡಿ. ಮತ್ತು ಸಿಇಒ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು