ಬುಧವಾರ, ಅಕ್ಟೋಬರ್ 21, 2020
21 °C

ದಾಖಲೆಯ ಮಟ್ಟಕ್ಕೆ ತಯಾರಿಕಾ ವಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಸೆಪ್ಟೆಂಬರ್‌ನಲ್ಲಿಯೂ ಚೇತರಿಕೆ ಕಂಡಿವೆ. ಕಂಪನಿಗಳು ತಮ್ಮಲ್ಲಿನ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುತ್ತಿದ್ದರೂ, ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ತಯಾರಿಕಾ ವಲಯದ ಚಟುವಟಿಕೆಗಳು ಎಂಟೂವರೆ ವರ್ಷದಲ್ಲೇ ಅತ್ಯಧಿಕ ಮಟ್ಟವನ್ನು ತಲುಪಿವೆ.

ಐಎಚ್‌ಎಸ್‌ ಮರ್ಕಿಟ್ ಇಂಡಿಯಾ ಸಿದ್ಧಪಡಿಸುವ ಪಿಎಂಐ ಸೂಚ್ಯಂಕವು ಆಗಸ್ಟ್‌ನಲ್ಲಿ 52 ಇದ್ದಿದ್ದು ಸೆಪ್ಟೆಂಬರ್‌ನಲ್ಲಿ 56.8ಕ್ಕೆ ತಲುಪಿದೆ. 2012ರ ಜನವರಿಯ ನಂತರ ಇದು ಅತಿಹೆಚ್ಚು. ‘ಸೆಪ್ಟೆಂಬರ್‌ ತಿಂಗಳಿನ ಪಿಎಂಐ ಅಂಕಿ–ಅಂಶಗಳು ಹಲವು ಧನಾತ್ಮಕ ವಿಚಾರಗಳನ್ನು ಗುರುತಿಸಿವೆ. ದೇಶದ ತಯಾರಿಕಾ ವಲಯವು ಸರಿಯಾದ ದಿಕ್ಕಿನಲ್ಲಿ ಸಾಗಿದೆ. ಕೋವಿಡ್–19 ಕಾರಣದಿಂದ ಹೇರಲಾಗಿದ್ದ ನಿರ್ಬಂಧಗಳು ಸಡಿಲಗೊಂಡಿರುವ ಕಾರಣ, ಕೈಗಾರಿಕೆಗಳು ಪೂರ್ಣ ಪ್ರಮಾಣದಲ್ಲಿ ತಯಾರಿಕಾ ಕೆಲಸದಲ್ಲಿ ತೊಡಗಿಸಿಕೊಂಡಿವೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ತಜ್ಞರು ವಿಶ್ಲೇಷಿಸಿದ್ದಾರೆ.

ಏಪ್ರಿಲ್ ತಿಂಗಳಿನಲ್ಲಿ ಪಿಎಂಐ ಸೂಚ್ಯಂಕವು 50ಕ್ಕಿಂತಲೂ ಕಡಿಮೆ ಆಗಿತ್ತು. ‘ರಫ್ತು ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ವಾಣಿಜ್ಯೋದ್ಯಮಗಳ ವಿಶ್ವಾಸ ಹೆಚ್ಚಾಗಿದೆ’ ಎಂದು ತಜ್ಞರು ಹೇಳಿದ್ದಾರೆ. ಆದರೆ, ಪಿಎಂಐ ಸೂಚ್ಯಂಕ ಏರಿಕೆ ಕಂಡಿದ್ದರೂ, ಉದ್ಯೋಗದ ಪ್ರಮಾಣದಲ್ಲಿ ಆರು ತಿಂಗಳ ಸತತ ಕುಸಿತ ಕಂಡುಬಂದಿದೆ.

‘ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವಲ್ಲಿ ಕಷ್ಟವಾಗುತ್ತಿದೆ ಎಂದು ಕೆಲವು ಕಂಪನಿಗಳು ಹೇಳಿವೆ. ಇನ್ನು ಕೆಲವು ಕಂಪನಿಗಳು, ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಬೇಕಿರುವ ಕಾರಣ ಕೆಲಸಗಾರರ ಸಂಖ್ಯೆಯನ್ನು ಕನಿಷ್ಠ ಮಟ್ಟದಲ್ಲಿ ಇರಿಸಲಾಗಿದೆ ಎಂದು ಹೇಳಿವೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ವಿಶ್ಲೇಷಕರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು