ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳಿಕೆ ನೀಡಲು ವಿದ್ವತ್‌ಗೆ ಬಾಯಿ ನೋವು ಅಡ್ಡಿ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ವತ್‌ ಚಿಕಿತ್ಸೆ ಪಡೆಯುತ್ತಿರುವ ಮಲ್ಯ ಆಸ್ಪತ್ರೆಗೆ ಸಿಸಿಬಿ ಪೊಲೀಸರು ಸೋಮವಾರ ಭೇಟಿ ನೀಡಿದರು.

ಫೆ. 17ರಂದು ರಾತ್ರಿ ನಡೆದಿದ್ದ ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ವಿದ್ವತ್‌ಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಭಾನುವಾರವಷ್ಟೇ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಈ ಮಾಹಿತಿ ತಿಳಿದ ಸಿಸಿಬಿ ಇನ್‌ಸ್ಪೆಕ್ಟರ್‌ ಅಶ್ವತ್ಥ್ ಗೌಡ ನೇತೃತ್ವದ ತಂಡವು ಗಾಯಾಳುವಿನ ಹೇಳಿಕೆ ಪಡೆಯುವುದಕ್ಕಾಗಿ ಬೆಳಿಗ್ಗೆ 11.30ಕ್ಕೆ ಆಸ್ಪತ್ರೆಗೆ ಹೋಗಿತ್ತು.

ನೇರವಾಗಿ ವಿದ್ವತ್‌ ಬಳಿ ಹೋಗಿದ್ದ ಇನ್‌ಸ್ಪೆಕ್ಟರ್‌ ಅವರು, ‘ಪ್ರಕರಣವು ಗಂಭೀರವಾಗಿದೆ. ನೀವು (ವಿದ್ವತ್‌) ಹೇಳಿಕೆ ಕೊಟ್ಟರೆ ತನಿಖೆಗೆ ಸಹಾಯವಾಗಲಿದೆ. ಜತೆಗೆ ಆರೋಪಿಗಳ ಜಾಮೀನಿಗೆ ಆಕ್ಷೇಪಣೆಯನ್ನಾಗಿ ಸಲ್ಲಿಸಲು ನಿಮ್ಮ ಹೇಳಿಕೆ ಮಹತ್ವದ್ದಾಗಿದೆ’ ಎಂದು ಹೇಳಿದರು.

ಪೊಲೀಸರನ್ನು ಕಂಡು ಬೆಡ್‌ನಿಂದ ಸ್ವಲ್ಪ ಮೇಲೆದಿದ್ದ ವಿದ್ವತ್‌ ಏನು ಹೇಳಲು ಪ್ರಯತ್ನಿಸಿದರು. ಆದರೆ, ಅವರ ತುಟಿ ಹಾಗೂ ಬಾಯಿ ನೋವು ಇದ್ದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ಕೈ ಸನ್ನೆ ಮೂಲಕವೇ ‘ಆಗುವುದಿಲ್ಲ’ ಎಂದು ಹೇಳಿದರು. ತೊದಲುತ್ತಲೇ, ‘ಸ್ವಲ್ಪ ಸಮಯ ಕೊಡಿ’ ಎಂದು ಪೊಲೀಸರನ್ನು ಕೇಳಿದರು.

ವಾರ್ಡ್‌ನಲ್ಲಿದ್ದ ಸಂಬಂಧಿ, ‘ಆತ ನಮ್ಮೊಂದಿಗೂ ಮಾತನಾಡಲು ಕಷ್ಟಪಡುತ್ತಿದ್ದಾನೆ. ಸ್ವಲ್ಪ ದಿನ ಬಿಟ್ಟು ಹೇಳಿಕೆ ಪಡೆಯಿರಿ’ ಎಂದರು. ಬಳಿಕ ವೈದ್ಯರ ಬಳಿ ಹೋದ ಪೊಲೀಸರು, ಆರೋಗ್ಯ ಸ್ಥಿತಿ ಬಗ್ಗೆ ತಿಳಿದುಕೊಂಡರು.

ವೈದ್ಯರು, ‘ಊಟ ಮಾಡಲಷ್ಟೇ ಅವರು ಸಮರ್ಥರಾಗಿದ್ದಾರೆ. ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಛರಿಸು
ವುದಿಲ್ಲ. ಇಂಥ ಸಂದರ್ಭದಲ್ಲಿ ಹೇಳಿಕೆ ಪಡೆದರೆ ಗೊಂದಲಗಳು ಉಂಟಾಗುತ್ತವೆ. ಹೀಗಾಗಿ, ಆರೋಗ್ಯದಲ್ಲಿ ಚೇತರಿಕೆ ಬಂದ ಬಳಿಕ ನಾವೇ ತಿಳಿಸುತ್ತೇವೆ’ ಎಂದರು. ಅದಕ್ಕೆ ಒಪ್ಪಿದ ಪೊಲೀಸರು, ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಯಿಂದ ಹೊರಟು ಹೋದರು.

‘ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು ಎಂದು ತಿಳಿದು ಆಸ್ಪತ್ರೆಗೆ ಹೋಗಿದ್ದೆವು. ಆದರೆ, ಹೇಳಿಕೆ ಸಿಗಲಿಲ್ಲ. ಕೆಲ ದಿನ ಬಿಟ್ಟು ಮತ್ತೆ ಹೋಗುತ್ತೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಡಿವಿಆರ್‌ ಮುಚ್ಚಿಟ್ಟಿದ್ದ ಕೆಫೆ ಸಿಬ್ಬಂದಿ: ಹಲ್ಲೆಯ ದೃಶ್ಯ ಸೆರೆಯಾಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್‌ ಅನ್ನು ಫರ್ಜಿ ಕೆಫೆ ಸಿಬ್ಬಂದಿ ಮುಚ್ಚಿಟ್ಟಿದ್ದರು.
ಅದರ ಬದಲು ಬೇರೆ ಡಿವಿಆರ್‌ ಅನ್ನು ಪೊಲೀಸರಿಗೆ ನೀಡಿದ್ದರು ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಜಾಮೀನು ವಿಚಾರಣೆ ಮುಂದಕ್ಕೆ

ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿ ಸಂಬಂಧ 63ನೇ ಸೆಷನ್ಸ್‌ ನ್ಯಾಯಾಲಯ ಸೋಮವಾರ ವಾದ–‍ಪ್ರತಿವಾದ ಆಲಿಸಿತು. ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ (ಫೆ.27) ಮುಂದೂಡಿತು.

ಘಟನೆ ನಡೆದ ಮರುದಿನವೇ ಕಬ್ಬನ್‌ ಪಾರ್ಕ್‌ ಪೊಲೀಸರು, ಕೆಫೆಗ ಹೋಗಿ ಡಿವಿಆರ್‌ ಕಲೆಹಾಕಿದ್ದರು. ಅದನ್ನೇ ಸಿಸಿಬಿ ಪೊಲೀಸರಿಗೆ ನೀಡಿದ್ದರು. ಅದರ ಪರಿಶೀಲನೆ ವೇಳೆ ಹಲ್ಲೆ ದೃಶ್ಯವಿಲ್ಲದಿರುವುದು ಗೊತ್ತಾಗಿದೆ. ಬಳಿಕವೇ ಪೊಲೀಸರು, ಕೆಫೆಗೆ ಹೋಗಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಅದೇ ವೇಳೆ ಸಿಬ್ಬಂದಿ, ಮುಚ್ಚಿಟ್ಟಿದ್ದ ಡಿವಿಆರ್‌ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ. 

‘ಘಟನೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಪ್ರಮುಖ ಪುರಾವೆಗಳು. ಸದ್ಯ ಕಲೆಹಾಕಿದ ಎಲ್ಲ ಡಿವಿಆರ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಜತೆಗೆ ಡಿವಿಆರ್‌ ಮುಚ್ಚಿಟ್ಟಿದ್ದ ಆರೋಪದಡಿ ಕೆಫೆ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT