ನವದೆಹಲಿ: ‘ದೇಶೀಯ ಉಕ್ಕು ಉದ್ಯಮವನ್ನು ರಕ್ಷಿಸುವ ಉದ್ದೇಶದಿಂದ ಅಗ್ಗದ ಬೆಲೆಯ ಚೀನಾ ಉಕ್ಕಿನ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಕುರಿತು ವಿತ್ತ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಉಕ್ಕು ಹಾಗೂ ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ದೇಶೀಯ ಉಕ್ಕು ಉದ್ಯಮ ಸಮಾವೇಶದಲ್ಲಿ ಅವರು ಚೀನಾದಿಂದ ಅನಿಯಂತ್ರಿತ ಉಕ್ಕು ಆಮದು ಕುರಿತು ಮಾತನಾಡಿದ ಅವರು, ‘ದೇಶೀಯ ಉಕ್ಕು ಉದ್ಯಮವು ಯಾವುದೇ ರೀತಿಯ ಅಪಾಯ ಎದುರಿಸದಂತೆ ಚೀನಾದ ಉಕ್ಕಿನ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವ ಕುರಿತು ಚರ್ಚಿಸಲಾಗುವುದು’ ಎಂದಿದ್ದಾರೆ.
‘ದೇಶೀಯ ಉಕ್ಕು ಹಾಗೂ ಮಿಶ್ರಲೋಹದ ಉದ್ಯಮವನ್ನು ರಕ್ಷಿಸುವ ಹೊಣೆ ನಮ್ಮದು. ಈ ಉದ್ಯಮವು ಸದ್ಯ ಎದುರಿಸುತ್ತಿರುವ ಸವಾಲುಗಳಿಂದ ಪಾರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಚರ್ಚೆ ಪ್ರಗತಿಯಲ್ಲಿದೆ. ವಿತ್ತ ಸಚಿವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದಿದ್ದಾರೆ.
‘ಉಕ್ಕು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಅದನ್ನು ಸದೃಢಗೊಳಿಸುವ ಕಾರ್ಯದಲ್ಲಿ ನಾವು ನಿರತರಾಗಿದ್ದೇವೆ. ಈ ನಿಟ್ಟಿನಲ್ಲಿ ಸಚಿವಾಲಯವು ನಿರಂತರ ಚರ್ಚೆಯಲ್ಲಿ ತೊಡಗಿದೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ವಿಶಾಖಪಟ್ಟಣದಲ್ಲಿರುವ ರಾಷ್ಟ್ರೀಯ ಉಕ್ಕು ಘಟಕವನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ‘ಅಲ್ಲಿನ ಪರಿಸ್ಥಿತಿಯ ಮಾಹಿತಿ ಇದೆ. ಯಾವುದೇ ಸವಾಲನ್ನು ಎದುರಿಸಲು ಸಿದ್ಧ. ಘಟಕವನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ಶ್ರಮ ವಹಿಸಲಾಗುವುದು’ ಎಂದರು.