ಶನಿವಾರ, ಫೆಬ್ರವರಿ 27, 2021
28 °C

ಆದಾಯ ತೆರಿಗೆ ಮಿತಿ ಹೆಚ್ಚಳ ಯಾರಿಗೆ, ಎಷ್ಟು ಲಾಭ?

ಅರ್ಚಿತ್‌ ಗುಪ್ತ Updated:

ಅಕ್ಷರ ಗಾತ್ರ : | |

Prajavani

ಪ್ರತಿ ವರ್ಷ ಕೇಂದ್ರ ಬಜೆಟ್‌ ಮಂಡನೆಯಾದಾಗಲೂ ಇಡೀ ದೇಶ ಕುತೂಹಲದಿಂದ ಒಂದು ಸಂಗತಿಯನ್ನು ನಿರೀಕ್ಷಿಸುತ್ತಿರುತ್ತದೆ. ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆ (ಐ.ಟಿ ರಿಟರ್ನ್ಸ್‌) ಕುರಿತ ಘೋಷಣೆ ಏನಿರಬಹುದು ಎಂಬ ಕುತೂಹಲ ಅದು. ಈ ಬಾರಿ ಮಧ್ಯಂತರ ಬಜೆಟ್‌ ಆಗಿದ್ದರಿಂದ ಈ ಬಗ್ಗೆ ಸ್ವಲ್ಪ ಹೆಚ್ಚೇ ಗೊಂದಲಗಳು ತೆರಿಗೆದಾರರಲ್ಲಿವೆ. ಆದರೆ, ಆದಾಯ ತೆರಿಗೆ ಪಾವತಿಸುವವರು ಖುಷಿ ಪಡಬಹುದಾದ ಘೋಷಣೆಗಳು ಈ ಬಜೆಟ್‌ನಲ್ಲಿವೆ.

₹5ಲಕ್ಷ ಆದಾಯದವರೆಗೆ ಹೊರೆಯಿಲ್ಲ: ಒಟ್ಟು ಆದಾಯ ಅಥವಾ ತೆರಿಗೆಗೆ ಒಳಪಡಬಹುದಾದ ವಾರ್ಷಿಕ ಆದಾಯ ₹5 ಲಕ್ಷದೊಳಗಿರುವ ವ್ಯಕ್ತಿಗಳು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ ಎನ್ನುವುದು ಈ ಬಜೆಟ್‌ನ ಮಹತ್ವದ ಘೋಷಣೆ.

ವಿವಿಧ ಕಡಿತಗಳ ನಂತರ ನಿವ್ವಳ ಆದಾಯ ₹ 5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೆ ತೆರಿಗೆಯಲ್ಲಿ ₹ 12,500 ರಿಯಾಯ್ತಿ (rebate) ಸಿಗಲಿದೆ. ತೆರಿಗೆ ಪ್ರಸ್ತಾವಗಳ ಪ್ರಕಾರ, ₹ 5 ಲಕ್ಷದವರೆಗೆ ಆದಾಯ ಹೊಂದಿದ ವೈಯಕ್ತಿಕ ತೆರಿಗೆ ಪಾವತಿದಾರರು 80ಸಿ, 80 ಸಿಸಿಡಿ, 80 ಟಿಟಿಎ, 80ಇ ಪ್ರಕಾರ ಕಡಿತದ ಪ್ರಯೋಜನ ಪಡೆದಿದ್ದರೆ, ಕಾಯ್ದೆಯ ಸೆಕ್ಷನ್‌ 87ಎ ಪ್ರಕಾರ ₹ 12,500ವರೆಗೆ ರಿಯಾಯ್ತಿಗೆ ಅರ್ಹರಾಗಿರುತ್ತಾರೆ.

ಸರಿಯಾದ ಯೋಜನೆ ಮತ್ತು ತೆರಿಗೆ ಉಳಿಸುವ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ, ವಾರ್ಷಿಕ ₹ 7 ಲಕ್ಷ ಆದಾಯವಿದ್ದರೂ, ಆದಾಯ ತೆರಿಗೆ ಹೊರೆಯಿಂದ ಪಾರಾಗಬಹುದು.

ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹50 ಸಾವಿರಕ್ಕೆ: ತೆರಿಗೆ ವಿನಾಯ್ತಿ ಪಡೆಯಲು ಯಾವುದೇ ದಾಖಲೆಗಳನ್ನು ಸಲ್ಲಿಸದ ‘ಸ್ಟ್ಯಾಂಡರ್ಡ್‌ ಡಿಡಕ್ಷನ್‌’ವನ್ನು (standard deduction) ₹40 ಸಾವಿರದಿಂದ ₹50 ಸಾವಿರಕ್ಕೆ ಏರಿಸಿರುವುದು ಈ ಬಜೆಟ್‌ನ ಇನ್ನೊಂದು ಪ್ರಮುಖ ಘೋಷಣೆಗಳಲ್ಲಿ ಒಂದಾಗಿದೆ.

ಆದಾಯ ತೆರಿಗೆ ಪಾವತಿಯ ಮೊತ್ತ ಕಡಿಮೆ ಮಾಡುವುದರಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ.  ಶೇ 30ರಷ್ಟು ತೆರಿಗೆ ಹಂತದಲ್ಲಿ ಇರುವ ವೇತನದಾರರು ಈ ಮೂಲಕ ₹ 3,000 ರಷ್ಟು ಉಳಿಸಬಹುದು.

ಮೌಲ್ಯ ನಿರ್ಧಾರಿತ ಬಾಡಿಗೆ (notional rent) ವಿನಾಯ್ತಿ: ತೆರಿಗೆದಾರ ಎರಡು ಮನೆಗಳನ್ನು ಹೊಂದಿದ್ದರೆ ಮತ್ತು ಆ ಮನೆಗಳಲ್ಲಿ ಅವನೇ ವಾಸವಿದ್ದರೆ, ಅವನು ಅಥವಾ ಅವಳು ಹೊಂದಿರುವ ಎರಡನೆಯ ಮನೆಯ ಬಾಡಿಗೆ ಮೊತ್ತಕ್ಕೂ ವಿನಾಯ್ತಿ ಸಿಗಲಿದೆ. ಇನ್ನು ಮುಂದೆ ತೆರಿಗೆ ಪಾವತಿಸುವುದು ಬೇಕಿಲ್ಲ. ಈ ಮೊದಲು, ತೆರಿಗೆದಾರನ ಹೆಸರಿನಲ್ಲಿ ಇರುವ ಎರಡನೆ ಮನೆಯ ಬಾಡಿಗೆಯ ಆದಾಯಕ್ಕೆ ತೆರಿಗೆ ಪಾವತಿಸಬೇಕಿತ್ತು.

ಟಿಡಿಎಸ್ ಮಿತಿಯಲ್ಲಿ ಹೆಚ್ಚಳ: ಟಿಡಿಎಸ್ ಮಿತಿಯನ್ನೂ ಹೆಚ್ಚಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಈ ಮಿತಿ ಹೆಚ್ಚಿಸಲಾಗಿದೆ.

1. ಬ್ಯಾಂಕು ಅಥವಾ ಅಂಚೆ ಕಚೇರಿಗಳ ವಿವಿಧ ಯೋಜನೆಗಳ ರೂಪದಲ್ಲಿ ಠೇವಣಿ ಇಟ್ಟವರು ಪಡೆಯುವ ಬಡ್ಡಿ ಮೇಲಿನ ಆದಾಯ ₹40 ಸಾವಿರಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ತೆರಿಗೆ ಕಟ್ಟಬೇಕಾಗುತ್ತದೆ. ಈ ಮೊದಲು ಈ ಮಿತಿ ಕೇವಲ ₹10 ಸಾವಿರದಷ್ಟಿತ್ತು.

2. ಬಾಡಿಗೆ ಆದಾಯದ ಮೇಲಿನ ಟಿಡಿಎಸ್ ಮಿತಿಯನ್ನೂ ವಾರ್ಷಿಕ ₹1.80 ಲಕ್ಷದಿಂದ ₹2.40 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಬಂಡವಾಳ ಗಳಿಕೆ ತೆರಿಗೆ ವಿನಾಯ್ತಿ:  ಆಸ್ತಿ ಅಥವಾ ಬಂಡವಾಳವನ್ನು ಮಾರಾಟ ಮಾಡುವುದರಿಂದ ಬರುವ ಆದಾಯ ಮಿತಿ ವಿನಾಯ್ತಿಯನ್ನೂ ಹೆಚ್ಚಿಸಲಾಗಿದೆ.

ಮೊದಲು, ಒಂದು ಮನೆ ಆಸ್ತಿಗೆ ಮಾತ್ರ ಈ ಸೌಲಭ್ಯ ಅನ್ವಯವಾಗುತ್ತಿತ್ತು. ಈಗ, ಎರಡು ಮನೆಗಳ ಆಸ್ತಿ ಇದ್ದಾಗಲೂ, ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯಬಹುದು. ಅಂದರೆ, ಆಸ್ತಿ ಮಾರಾಟದಿಂದ ಬರುವ ಲಾಭವು, ವಾರ್ಷಿಕ ₹2 ಕೋಟಿಗಿಂತ ಕಡಿಮೆ ಅಥವಾ ಈ ಮೊತ್ತಕ್ಕೆ ಸಮನಾಗಿದ್ದರೆ ತೆರಿಗೆ ವಿನಾಯ್ತಿ ಇದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ತೆರಿಗೆದಾರನು ಈ ಸೌಲಭ್ಯ ಪಡೆಯಬಹುದು.

ಐಟಿ ರಿಟರ್ನ್ಸ್ ಪ್ರಕ್ರಿಯೆ ಸಂಪೂರ್ಣ ವಿದ್ಯುನ್ಮಾನ:  ಐಟಿ ರಿಟರ್ನ್ಸ್ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್‌ನಲ್ಲಿಯೇ ಮಾಡುವುದಕ್ಕೆ ಆದ್ಯತೆ ನೀಡಲಾಗಿದೆ. 24 ಗಂಟೆಗಳಲ್ಲಿಯೇ ಮರುಪಾವತಿ (ರಿಫಂಡ್) ವ್ಯವಸ್ಥೆಯನ್ನು ಎರಡು ವರ್ಷಗಳಲ್ಲಿ ಜಾರಿಗೆ ತರಲಾಗುತ್ತಿದೆ. ಆದಾಯ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಿದ ದಿನದೊಳಗೇ, ಮಾನವನ ಹಸ್ತಕ್ಷೇಪ ಇಲ್ಲದೇ ಆನ್‌ಲೈನ್‌ನಲ್ಲಿಯೇ ತೆರಿಗೆದಾರನಿಗೆ ರಿಫಂಡ್‌ (ಮರುಪಾವತಿ) ಆಗಲಿದೆ. 

(ಲೇಖಕ: ಕ್ಲಿಯರ್‌ ಟ್ಯಾಕ್ಸ್‌ನ ಸಿಇಒ)

ರಿಯಾಯ್ತಿ v/s ವಿನಾಯ್ತಿ

ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಘೋಷಿಸಿರುವ ಕ್ರಮಗಳು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ಸ್ಪಷ್ಟತೆ ಕಂಡು ಬರುತ್ತಿಲ್ಲ. ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಅವರು ತಮ್ಮ ಬಜೆಟ್‌ ಭಾಷಣದಲ್ಲಿ ರಿಯಾಯ್ತಿ (rebate) ಶಬ್ದ ಬಳಸಿದ್ದಾರೆ ಹೊರತು ವಿನಾಯ್ತಿ (exemption) ಅಲ್ಲ. ಈ ಶಬ್ದಗಳ ವ್ಯಾಖ್ಯಾನವೇ ಗೊಂದಲ ಸೃಷ್ಟಿಸಿವೆ.

ತೆರಿಗೆ ಹಂತ ಮತ್ತು ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದೂ ಸಚಿವರು ಸ್ಪಷ್ಟಪಡಿಸಿದ್ದಾರೆ. ಇದರ ಅರ್ಥ ಏನೆಂದರೆ, ತೆರಿಗೆಗೆ ಒಳಪಡುವ ಆದಾಯ ಮಿತಿ ₹ 5 ಲಕ್ಷ ಮೀರಿದರೆ, ಸದ್ಯದ ತೆರಿಗೆ ಹಂತಗಳ ಪ್ರಕಾರ ಆತ ತೆರಿಗೆ ಪಾವತಿಸಬೇಕಾಗುತ್ತದೆ.

ವಿನಾಯ್ತಿ ಎಂದರೆ, ಸದ್ಯಕ್ಕೆ ವಾರ್ಷಿಕ ₹ 2.50 ಲಕ್ಷವರೆಗಿನ ಆದಾಯದವರೆಗೆ ತೆರಿಗೆ ವಿನಾಯ್ತಿ ಇದೆ. ಅಂದರೆ, ವೇತನದಾರರ ಸಂಬಳ ಎಷ್ಟೇ ಇರಲಿ ಉದಾಹರಣೆಗೆ ₹ 3 ಲಕ್ಷದಿಂದ ₹ 25 ಲಕ್ಷದವರೆಗೆ ವೇತನ ಹೊಂದಿದವರಿಗೂ ತೆರಿಗೆ ಲೆಕ್ಕ ಹಾಕುವಾಗ ₹ 2.50 ಲಕ್ಷವನ್ನು ವಿನಾಯ್ತಿ ಎಂದೇ ಪರಿಗಣಿಸಲಾಗುತ್ತದೆ.

ರಿಯಾಯ್ತಿ ಎಂದರೆ, ನಿರ್ದಿಷ್ಟ ಮೊತ್ತಕ್ಕೆ ಕೊಡಮಾಡುವ ರಿಯಾಯ್ತಿ ಆಗಿರುತ್ತದೆ. ವಿನಾಯ್ತಿ ಮತ್ತು ಕಡಿತದ ನಂತರ ಉಳಿಯುವ ಮೊತ್ತಕ್ಕೆ ವ್ಯಕ್ತಿ ತೆರಿಗೆ ಪಾವತಿಸುತ್ತಾನೆ. ಆದಾಯ ತೆರಿಗೆಯ ಸೆಕ್ಷನ್‌ 87ಎ ಅನ್ವಯ, ಸದ್ಯದ ನಿಯಮಗಳ ಅನುಸಾರ ವ್ಯಕ್ತಿಯೊಬ್ಬನ  ವಾರ್ಷಿಕ ಆದಾಯ 

₹  3 ಲಕ್ಷಕ್ಕಿಂತ ಕಡಿಮೆ ಇದ್ದರೆ ₹ 2,500 ರಿಯಾಯ್ತಿ ಪಡೆಯಬಹುದು. 
₹ 5 ಲಕ್ಷದವರೆಗಿನ ಆದಾಯ ಹೊಂದಿದವರು 87ಎ ಅಡಿ ಇನ್ನು ಮುಂದೆ 
₹ 12,500ರಷ್ಟು ರಿಯಾಯ್ತಿ ಪಡೆಯಬಹುದು. ಇದು ₹ 2,500 ರಿಂದ 
₹ 12,500ಕ್ಕೆ ಏರಿಕೆಯಾಗಿದೆ. ಇದು ಸೀಮಿತ ಸಂಖ್ಯೆಯ ವ್ಯಕ್ತಿಗಳಿಗೆ ಮಾತ್ರ ಅನ್ವಯವಾಗಲಿದೆ.

ಆದಾಯದ ಹೆಚ್ಚುವರಿ ಪಾಲನ್ನು ಉಳಿತಾಯ ಯೋಜನೆಗಳಲ್ಲಿ ತೊಡಗಿಸಿದರೆ ತಿಂಗಳ ಹಣಕಾಸು ಅಗತ್ಯಗಳಿಗೆ ಕೈಯಲ್ಲಿ ಅಲ್ಪಮಟ್ಟಿಗಿನ ಹಣ ಮಾತ್ರ ಉಳಿಯಲಿದೆ. ಹೂಡಿಕೆಯನ್ನು ಜಾಣತನದಿಂದ ನಿಭಾಯಿಸಬೇಕು. ಕುಟುಂಬದ ಹಣಕಾಸಿನ ಅಗತ್ಯಗಳ ಜತೆ ರಾಜಿ ಮಾಡಿಕೊಳ್ಳಬಾರದು. ಆಯ್ಕೆ ನಿಮಗೆ ಬಿಟ್ಟದ್ದು ಎಂಬುದು ತೆರಿಗೆ ಪರಿಣತರ ಅಭಿಪ್ರಾಯವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು