ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

400 ಬಿಲಿಯನ್ ಡಾಲರ್ ಸರಕು ರಫ್ತು; ಆತ್ಮನಿರ್ಭರ ಭಾರತದ ಮೈಲುಗಲ್ಲು–ಪ್ರಧಾನಿ ಮೋದಿ

Last Updated 23 ಮಾರ್ಚ್ 2022, 8:29 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಸಾಲಿನಲ್ಲಿ ಭಾರತದಿಂದ ಹೊರ ದೇಶಗಳಿಗೆ 400 ಬಿಲಿಯನ್‌ ಡಾಲರ್‌(ಅಂದಾಜು ₹30.49 ಲಕ್ಷ ಕೋಟಿ ) ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ. ದೇಶದ ‘ಆತ್ಮನಿರ್ಭರ ಭಾರತ’ ಪ್ರಯಾಣದಲ್ಲಿ ಇದೊಂದು ಮಹತ್ತರ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷ ಮುಕ್ತಾಯಕ್ಕೆ 9 ದಿನಗಳು ಉಳಿದಿರುವಂತೆ ಸರಕು ರಫ್ತು ಪ್ರಮಾಣವು ಈವರೆಗಿನ ದಾಖಲೆಯ ಮಟ್ಟ ತಲುಪಿದೆ. 2022ರ ಮಾರ್ಚ್‌ ವರೆಗೂ ರಫ್ತು ಮಾಡಲಾಗಿರುವ ಸರಕು ಮೌಲ್ಯವು ಶೇಕಡ 37ರಷ್ಟು ಹೆಚ್ಚಳ ಕಂಡಿದ್ದು, 400 ಬಿಲಿಯನ್‌ ಡಾಲರ್‌ ತಲುಪಿದೆ. 2020–21ನೇ ಸಾಲಿನಲ್ಲಿ 292 ಬಿಲಿಯನ್‌ ಡಾಲರ್‌ ಮೊತ್ತದ ಸರಕು ರಫ್ತು ಮಾಡಲಾಗಿತ್ತು.

'ಭಾರತವು 400 ಬಿಲಿಯನ್‌ ಡಾಲರ್‌ ಸರಕು ರಫ್ತು ಗುರಿಯನ್ನು ಇದೇ ಮೊದಲ ಬಾರಿಗೆ ತಲುಪಿದೆ. ಈ ಯಶಸ್ಸಿಗಾಗಿ ನಮ್ಮ ರೈತರು, ನೇಕಾರರು, ಎಂಎಸ್‌ಎಂಇಗಳು, ತಯಾರಕರು ಹಾಗೂ ರಫ್ತುದಾರರನ್ನು ಅಭಿನಂದಿಸುತ್ತೇನೆ. ನಮ್ಮ ಆತ್ಮನಿರ್ಭರ ಭಾರತ ಪ್ರಯಾಣದಲ್ಲಿ ಇದೊಂದು ಮಹತ್ತರ ಮೈಲುಗಲ್ಲಾಗಿದೆ' ಎಂದು ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.

ಸ್ಥಳೀಯ ವಸ್ತುಗಳು ವಿಶ್ವದೆಲ್ಲೆಡೆ ತಲುಪುತ್ತಿರುವುದಾಗಿ ಟ್ಯಾಗ್‌ (ಲೋಕಲ್‌ ಗೋಸ್‌ ಗ್ಲೋಬಲ್‌– #LocalGoesGlobal) ಮಾಡಿದ್ದಾರೆ.

ನಿತ್ಯ ಸರಾಸರಿ ಒಂದು ಬಿಲಿಯನ್‌ ಡಾಲರ್‌ ಮೌಲ್ಯದ ಹಾಗೂ ಪ್ರತಿ ತಿಂಗಳು ಸರಾಸರಿ 33 ಬಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ರಫ್ತು ಮಾಡಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್‌ ಮತ್ತು ಎಂಜಿನಿಯರಿಂಗ್‌ ಸರಕು, ಲೆದರ್‌, ಕಾಫಿ, ಪ್ಲಾಸ್ಟಿಕ್‌, ಸಿದ್ಧ ಉಡುಪು ಮತ್ತು ವಸ್ತ್ರಗಳು, ಮಾಂಸ ಮತ್ತು ಡೈರಿ ಉತ್ಪನ್ನಗಳು, ಮೀನು ಸೇರಿದಂತೆ ಸಮುದ್ರದ ಉತ್ಪನ್ನಗಳು ಹಾಗೂ ತಂಬಾಕು ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT