ಮುಂಬೈ/ನವದೆಹಲಿ: ಚಿಲ್ಲರೆ ಹಣದುಬ್ಬರ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಇಂಧನ ಹಾಗೂ ಜೋಳದ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸುವ ಸಾಧ್ಯತೆ ಇದೆ. ಫೆಬ್ರುವರಿಯಲ್ಲಿ ಹಣದುಬ್ಬರ ಯಾವ ಮಟ್ಟವನ್ನು ತಲುಪಿದೆ ಎಂಬುದು ಗೊತ್ತಾದ ನಂತರದಲ್ಲಿ ಈ ಕುರಿತು ಅಂತಿಮ ತೀರ್ಮಾನ ಆಗಲಿದೆ.
ಹಣದುಬ್ಬರ ನಿಯಂತ್ರಿಸಲು ತೆರಿಗೆ ಕಡಿಮೆ ಮಾಡಬೇಕು ಎಂಬ ಶಿಫಾರಸು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಡೆಯಿಂದ ಬಂದಿದೆ ಎಂದು ಗೊತ್ತಾಗಿದೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಮತ್ತೆ ಹೆಚ್ಚಾಗಿದ್ದು, ಆರ್‌ಬಿಐ ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟವನ್ನು ಮೀರಿದೆ.
‘ಆಹಾರ ವಸ್ತುಗಳ ಬೆಲೆ ಏರಿಕೆ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ. ಹಾಲು, ಜೋಳ ಮತ್ತು ಸೋಯಾ ಎಣ್ಣೆಯ ಬೆಲೆಯು ಹಣದುಬ್ಬರಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಜೋಳದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಇದಕ್ಕೆ ಶೇಕಡ 60ರಷ್ಟು ಮೂಲ ಸುಂಕ ವಿಧಿಸಲಾಗುತ್ತಿದೆ. ಹಾಗೆಯೇ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕೂಡ ಮತ್ತೊಮ್ಮೆ ತಗ್ಗಿಸುವ ಸಾಧ್ಯತೆ ಇದೆ’ ಎಂದು ಅವರು ಹೇಳಿದ್ದಾರೆ.
ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಆರ್‌ಬಿಐ ಕಡೆಯಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಈಚಿನ ದಿನಗಳಲ್ಲಿ ಸ್ಥಿರವಾಗಿದೆ. ಆದರೆ, ಕಂಪನಿಗಳು ಕಚ್ಚಾ ತೈಲದ ಬೆಲೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿಲ್ಲ.
ಕೇಂದ್ರವು ಇಂಧನದ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಆಗಿ, ಹಣದುಬ್ಬರ ನಿಯಂತ್ರಿ ಸಲು ನೆರವಾಗುತ್ತದೆ. ‘ಆರ್‌ಬಿಐ ಕಡೆಯಿಂದಲೂ ನಮಗೆ ಕೆಲವು ಶಿಫಾರಸುಗಳು ಬಂದಿವೆ’ ಎಂದು ಅಧಿಕಾರಿ ಹೇಳಿದ್ದಾರೆ.
ಜನವರಿಯಲ್ಲಿ ಹಣದುಬ್ಬರ ಪ್ರಮಾಣವು ಹೆಚ್ಚಳ ಕಂಡ ನಂತರದಲ್ಲಿ, ರೆಪೊ ದರವನ್ನು ಮತ್ತಷ್ಟು ಹೆಚ್ಚಿಸಬೇಕು ಎಂಬ ಆಗ್ರಹ ಬಂದಿದೆ. ಆದರೆ ಎಲ್ಲರಿಗೂ ಈ ವಿಚಾರದಲ್ಲಿ ಸಹಮತ ಇಲ್ಲ.
‘ಮುಂದಿನ ಎರಡು ತಿಂಗಳುಗಳ ವರೆಗೆ ಚಿಲ್ಲರೆ ಹಣದುಬ್ಬರ ದರವು ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಉಳಿದರೆ, ಆರ್‌ಬಿಐ ಮತ್ತೆ ರೆಪೊ ದರ ಹೆಚ್ಚಿಸುವ ಬಗ್ಗೆ ಪರಿಶೀಲಿಸಬಹುದು’ ಎಂದು ‘ಬ್ಯಾಂಕ್ ಆಫ್ ಬರೋಡ’ದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್ ಹೇಳಿದ್ದಾರೆ. ಆದರೆ, ದರ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿ ದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.