ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ವಿಕ್ರಯಕ್ಕೆ ಭಾರಿ ಹಿನ್ನಡೆ?

ಐಡಿಬಿಐ ಬ್ಯಾಂಕ್, ಎನ್ಎಂಡಿಸಿ ಸ್ಟೀಲ್ ಮಾರಾಟ ಮುಂದೂಡಿಕೆ
Published 24 ನವೆಂಬರ್ 2023, 15:45 IST
Last Updated 24 ನವೆಂಬರ್ 2023, 15:45 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಸತತ ಐದನೇ ವರ್ಷವು ಷೇರು ವಿಕ್ರಯದ ಗುರಿ ತಲುಪುವಲ್ಲಿ ವಿಫಲ ಆಗಲಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಸಂಗ್ರಹಿಸಲು ಉದ್ದೇಶಿಸಿರುವ ಬಂಡವಾಳದ ಅರ್ಧದಷ್ಟು ಗುರಿ ಸಾಧನೆಯೂ ಕಷ್ಟವಾಗಲಿದೆ ಎಂದು ಮೂಲಗಳು ಹೇಳಿವೆ.

ಕೆಲವು ಕೇಂದ್ರೋದ್ಯಮಗಳ ಮಾರಾಟ ಅಥವಾ ಷೇರುಪಾಲು ಮಾರಾಟ ಮಾಡಲು ಒಂದಿಷ್ಟು ತೊಡಕುಗಳು ಎದುರಾಗಿವೆ. ಇದಲ್ಲದೆ, ರಾಜ್ಯಗಳ ವಿಧಾನಸಭೆ ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಗಳತ್ತ ಕೇಂದ್ರ ಸರ್ಕಾರವು ಗಮನ ಹರಿಸಿರುವುದರಿಂದಲೂ ಷೇರುವಿಕ್ರಯ ಗುರಿ ಸಾಧನೆಗೆ ಅಡ್ಡಿಯಾಗಿದೆ.

2023–24ರಲ್ಲಿ ಷೇರು ವಿಕ್ರಯದ ಮೂಲಕ ಒಟ್ಟು ₹51 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಈವರೆಗೆ ಒಟ್ಟು ₹8 ಸಾವಿರ ಕೋಟಿಯಷ್ಟೇ ಸಂಗ್ರಹ ಆಗಿದೆ. ಸದ್ಯದ ಬೆಳವಣಿಗೆಯನ್ನು ಪರಿಗಣಿಸಿದರೆ ₹30 ಸಾವಿರ ಕೋಟಿಯುಷ್ಟು ಕಡಿಮೆ ಸಂಗ್ರಹ ಆಗಲಿದೆ ಎಂದು ತಿಳಿಸಿವೆ.

ಸಂಗ್ರಹಿಸಲು ಉದ್ದೇಶಿಸಿರುವ ಒಟ್ಟು ₹51 ಸಾವಿರ ಕೋಟಿ ಮೊತ್ತದಲ್ಲಿ ಐಡಿಬಿಐ ಬ್ಯಾಂಕ್‌ನ ಷೇರು ಮಾರಾಟ ಮತ್ತು ಎನ್‌ಎಂಡಿಸಿ ಸ್ಟೀಲ್‌ನ ಖಾಸಗೀಕರಣದಿಂದಲೇ ₹30,000 ಕೋಟಿ ಬರುವ ನಿರೀಕ್ಷೆಯನ್ನು ಕೇಂದ್ರ ಇಟ್ಟುಕೊಂಡಿದೆ. 

ಐಡಿಬಿಐ ಬ್ಯಾಂಕ್‌ ಷೇರು ಖರೀದಿಗೆ ಹೂಡಿಕೆದಾರರಿಂದ ಖರೀದಿ ಆಸಕ್ತಿ ವ್ಯಕ್ತವಾಗಿಲ್ಲ. ಹೀಗಾಗಿ 2024ರಲ್ಲಿ ಸಾರ್ವತ್ರಿಕ ಚುನಾವಣೆಯ ಬಳಿಕ ಷೇರುಗಳನ್ನು ಮಾರಾಟ ಮಾಡಲು ಆರ್‌ಬಿಐ ನಿರ್ಧರಿಸಿದೆ. ಇನ್ನು, ಎನ್‌ಎಂಡಿಸಿ ಸ್ಟೀಲ್‌ ಕಂಪನಿಯ ಮಾರಾಟವು ರಾಜ್ಯಗಳ ಚುನಾವಣೆ ಮತ್ತು ಸಾರ್ವತ್ರಿಕ ಚುನಾವಣೆಯ ಕಾರಣಕ್ಕಾಗಿ ಕೈಗೂಡುತ್ತಿಲ್ಲ. ಕಂಪನಿಯ ಪ್ರಮುಖ ಘಟಕವು ಛತ್ತಿಸಗಢದಲ್ಲಿ ಇದ್ದು, ಅಲ್ಲಿನ ಸಿಬ್ಬಂದಿ ಮತ್ತು ಒಕ್ಕೂಟವು ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2019ರಿಂದಲೂ ಉಕ್ಕು, ರಸಗೊಬ್ಬರ ಮತ್ತು ತೈಲ ಮತ್ತು ಅನಿಲ ವಲಯದ ಷೇರುಗಳನ್ನು ಮಾರಾಟ ಮಾಡುವ ಯೋಜನೆ ರೂಪಿಸುತ್ತಿದೆಯಾದರೂ ಅದು ಕೈಗೂಡುತ್ತಲೇ ಇಲ್ಲ. ಭೂ ಮಾಲೀಕತ್ವ ಮತ್ತು ಪ್ರತಿಪಕ್ಷಗಳ ವಿರೋಧವು ಅಡ್ಡಿಯಾಗುತ್ತಲೇ ಇದೆ ಎಂದು ಮೂಲಗಳು ಹೇಳಿವೆ.

ಷೇರು ವಿಕ್ರಯದ ಕುರಿತು ಹಣಕಾಸು ಸಚಿವಾಲಯವು ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಸರ್ಕಾರದ ಈ ಅವಧಿಯಲ್ಲಿ ಯಾವುದೇ ಕಂಪನಿಗಳ ಖಾಸಗೀಕರಣ ಆಗುವುದಿಲ್ಲ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್‌ ಚಂದ್ರ ಗರ್ಗ್ ಅವರು ಹೇಳಿದ್ದರು. ಆಳುವ ವರ್ಗಕ್ಕೆ ಖಾಸಗೀಕರಣ ನೀತಿಯಲ್ಲಿ ಈಗ ರಾಜಕೀಯವಾಗಿ ಆಸಕ್ತಿ ಇಲ್ಲದೇ ಇರುವುದರಿಂದ ಮುಂದಿನ ಆರು ತಿಂಗಳವರೆಗೆ ಷೇರು ವಿಕ್ರಯ ಮತ್ತು ಖಾಸಗೀಕರಣವನ್ನು ಮರೆತುಬಿಡಿ ಎಂದು ಅವರು ಹೇಳಿದ್ದಾರೆ.

ಕೇಂದ್ರೋದ್ಯಮಗಳು ಉತ್ತಮ ಲಾಭಾಂಶ ಗಳಿಸಿಕೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಲಾಭಾಂಶ ರೂಪದಲ್ಲಿ ಹೆಚ್ಚಿನ ಮೊತ್ತ ಸಂದಾಯ ಆಗಲಿದೆ. ಕೇಂದ್ರವು ₹43 ಸಾವಿರ ಕೋಟಿಯಷ್ಟು ಲಾಭಾಂಶವನ್ನು ಪಡೆಯುವ ಗುರಿಯನ್ನು ಮೀರಲಿದೆ. ಏಕೆಂದರೆ ಈವರೆಗೆ ಲಾಭಾಂಶವಾಗಿ ₹20,300 ಕೋಟಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲಿಯವರೆಗೆ ಕೇಂದ್ರ ಸರ್ಕಾರವು ವಿತ್ತೀಯ ಗುರಿಯನ್ನು ತಲುಪುತ್ತದೆಯೋ ಅಲ್ಲಿಯವರೆಗೆ ಷೇರು ವಿಕ್ರಯದ ಗುರಿ ತಪ್ಪಿದರೆ ಸಮಸ್ಯೆ ಆಗವುದಿಲ್ಲ ಎಂದು ಬರ್ಕ್ಲೇಸ್‌ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್‌ನ ಆರ್ಥಿಕ ತಜ್ಞ ರಾಹುಲ್‌ ಬಜೋರಿಯಾ ಹೇಳಿದ್ದಾರೆ.

ಖಾಸಗೀಕರಣದಲ್ಲಿನ ವಿಳಂಬವು ಸರ್ಕಾರದ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 5.9ಕ್ಕೆ ನಿಯಂತ್ರಿಸುವ ಗುರಿಯ ಮೇಲೆ ಪರಿಣಾಮ ಬೀರಲಾರದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT