ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ವರ್ಷಗಳ ನಂತರ ದೇಶದಲ್ಲಿ ನಾಲ್ಕು ವಿಭಿನ್ನ ಬಗೆಯ ಬ್ಯಾಂಕ್‌: ದಾಸ್‌

ರಿಸರ್ವ್ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಭವಿಷ್ಯ
Last Updated 25 ಮಾರ್ಚ್ 2021, 14:17 IST
ಅಕ್ಷರ ಗಾತ್ರ

ಮುಂಬೈ: ‘ಹತ್ತು ವರ್ಷಗಳ ನಂತರ ದೇಶದ ಬ್ಯಾಂಕಿಂಗ್‌ ವಲಯದಲ್ಲಿ ನಾಲ್ಕು ವಿಭಿನ್ನ ಬಗೆಯ ಬ್ಯಾಂಕ್‌ಗಳು ಇರಲಿವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಭವಿಷ್ಯ ನುಡಿದಿದ್ದಾರೆ.

ಸಾರ್ವತ್ರಿಕ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳ ಸ್ಥಾಪನೆಗೆ ಸಲ್ಲಿಕೆಯಾಗಲಿರುವ ಅರ್ಜಿ ಪರಿಶೀಲನೆಗೆ ಮಾಜಿ ಡೆಪ್ಯುಟಿ ಗವರ್ನರ್‌ ಶ್ಯಾಮಲಾ ಗೋಪಿನಾಥ್‌ ನೇತೃತ್ವದ ಸಮಿತಿ ನೇಮಿಸಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಾಸ್, ‘ರಿಸರ್ವ್ ಬ್ಯಾಂಕ್ ಹೆಚ್ಚು ಸ್ಪರ್ಧಾತ್ಮಕ, ಪರಿಣಾಮಕಾರಿ ಮತ್ತು ವೈವಿಧ್ಯಮಯ ಬ್ಯಾಂಕಿಂಗ್ ವಲಯ ರಚನೆಯತ್ತ ಸಾಗುತ್ತಿದೆ. ಸಾರ್ವತ್ರಿಕ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು (ಎಸ್‌ಎಫ್‌ಬಿ) ಮತ್ತು ಪಾವತಿ ಬ್ಯಾಂಕುಗಳಿಗೆ ಪರವಾನಗಿ ನೀಡುವ ನೀತಿಗಳು ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ’ ಎಂದಿದ್ದಾರೆ.

‘ಸದ್ಯ, ಹತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳು ಮತ್ತು ಆರು ಪೇಮೆಂಟ್‌ ಬ್ಯಾಂಕ್‌ಗಳು ಕಾರ್ಯಾಚರಿಸುತ್ತಿವೆ’ ಎಂದು ತಿಳಿಸಿದ್ದಾರೆ.

ನಾಲ್ಕು ವಿಭಿನ್ನ ಬಗೆಯ ಬ್ಯಾಂಕ್‌ಗಳು

1) ದೇಶೀಯ ಮತ್ತು ಅಂತರರಾಷ್ಟ್ರೀಯ ಉಪಸ್ಥಿತಿ ಹೊಂದಿರುವ ಕೆಲವು ದೊಡ್ಡ ಭಾರತೀಯ ಬ್ಯಾಂಕುಗಳು

2) ಮಧ್ಯಮಗಾತ್ರದ ಬ್ಯಾಂಕ್‌ಗಳು

3) ಖಾಸಗಿ ವಲಯದ ಸಣ್ಣ ಬ್ಯಾಂಕ್‌ಗಳು, ಸಣ್ಣ ಹಣಕಾಸು ಬ್ಯಾಂಕ್‌ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಮತ್ತು ಸಹಕಾರಿ ಬ್ಯಾಂಕ್‌ಗಳು

4) ಗ್ರಾಹಕರಿಗೆ ನೇರವಾಗಿ ಅಥವಾ ಬ್ಯಾಂಕುಗಳ ಮೂಲಕ ಸೇವಾ ಪೂರೈಕೆದಾರರಾಗಿ ಕಾರ್ಯನಿರ್ವಹಿಸುವ ಡಿಜಿಟಲ್ ವಹಿವಾಟುದಾರರು

‘ಬ್ಯಾಂಕಿಂಗ್ ವಲಯದ ಆರೋಗ್ಯ ಕಾಪಾಡಿಕೊಳ್ಳುವುದು ಆದ್ಯತೆಯಾಗಿಯೇ ಮುಂದುವರಿಯಲಿದೆ. ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಲಪಡಿಸುವುದು, ಬಂಡವಾಳ ನೆಲೆಯನ್ನು ಗಟ್ಟಿ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದೇ ವೇಳೆ ಕಾರ್ಪೊರೇಟ್ ಆಡಳಿತದ ಮೇಲೆಯೂ ಗಮನ ಹರಿಸಲಾಗುವುದು’ ಎಂದೂ ಹೇಳಿದ್ದಾರೆ.

‘ಚೇತರಿಕೆಗೆ ಅಡ್ಡಿಯಾಗದು’: ‘ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಆದರೆ, ಯಾರೂ ಸಹ ಮತ್ತೆ ಲಾಕ್‌ಡೌನ್‌ ಬಯಸದೇ ಇರುವುದರಿಂದ, ಪ್ರಕರಣಗಳ ಹೆಚ್ಚಳವು ಆರ್ಥಿಕ ಚೇತರಿಕೆಯ ಮೇಲೆ ಪರಿಣಾಮ ಬೀರದು’ ಎಂದು ದಾಸ್‌ ಹೇಳಿದ್ದಾರೆ.

‘ಆರ್ಥಿಕ ಚೇತರಿಕೆಯು ಯಾವುದೇ ಅಡ್ಡಿ ಇಲ್ಲದೆ ಮುಂದುವರಿಯಲಿದೆ’ ಎಂದು ಹೇಳುವ ಮೂಲಕ ‘ಜಿಡಿಪಿ ಬೆಳವಣಿಗೆಯ ಕುರಿತು ಆರ್‌ಬಿಐನ ಮಾಡಿರುವ ಶೇ 10.5ರಷ್ಟರ ಅಂದಾಜನ್ನು ತಗ್ಗಿಸುವ ಯಾವುದೇ ಅಗತ್ಯ ಕಂಡುಬರುತ್ತಿಲ್ಲ’ ಎಂದಿದ್ದಾರೆ.

ಮಾರುಕಟ್ಟೆಯಲ್ಲಿ ವಹಿವಾಟು ನಡೆಯುವ ಕ್ರಿಪ್ಟೊಕರೆನ್ಸಿಯ ಬಗ್ಗೆ ಆರ್‌ಬಿಐ ಹೆಚ್ಚಿನ ಕಳವಳ ಹೊಂದಿದ್ದು ಅದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ ದಾಸ್‌ ಹೇಳಿದ್ದಾರೆ.

ಕ್ರಿಪ್ಟೊಕರೆನ್ಸಿ ನಿಷೇಧ ಮಾಡುವ ಬಗ್ಗೆಜನವರಿಯಲ್ಲಿ ಮಂಡಿಸಿದ್ದ ಮಸೂದೆಯಲ್ಲಿ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ, ಡಿಜಿಟಲ್‌ ಕರೆನ್ಸಿಯ ಕ್ಷೇತ್ರದಲ್ಲಿ ಪ್ರಯೋಗಕ್ಕೆ ನಾವು ಉತ್ತೇಜನ ನೀಡುತ್ತೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈಚೆಗಷ್ಟೇ ಹೇಳಿದ್ದಾರೆ. ಇದು ಗೊಂದಲಕಾರಿ ಹೇಳಿಕೆ ಎಂದು ಕೆಲವು ವಲಯಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ದಾಸ್‌ ಈ ಈ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT