ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಬೆಳವಣಿಗೆ | ಶೇ 7.3ರಷ್ಟು ಜಿಡಿಪಿ ಪ್ರಗತಿ ನಿರೀಕ್ಷೆ: ಎನ್‌ಎಸ್‌ಒ

Published 5 ಜನವರಿ 2024, 15:59 IST
Last Updated 5 ಜನವರಿ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) 2023–24ರ ಹಣಕಾಸು ವರ್ಷದಲ್ಲಿ ಶೇ 7.3ರಷ್ಟು ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ತಿಳಿಸಿದೆ.  

ಎನ್‌ಎಸ್‌ಒ ಶುಕ್ರವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿರುವ ಅಂದಾಜಿನ ಪ್ರಕಾರ, ಹಿಂದಿನ ಹಣಕಾಸು ವರ್ಷದ ಮಟ್ಟವನ್ನು (ಶೇ 7.2) ಮೀರಲಿದೆ. 

ಗಣಿಗಾರಿಕೆ, ತಯಾರಿಕಾ ವಲಯ ಸೇರಿದಂತೆ ಪ್ರಮುಖ ವಲಯಗಳ ಬೆಳವಣಿಗೆಯಲ್ಲಿ ಸುಧಾರಣೆ ಕಂಡುಬಂದಿದೆ. ಹಾಗಾಗಿ, ಈ ಪ್ರಮಾಣದ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ ಎಂದು ವಿವರಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತಯಾರಿಕಾ ವಲಯವು ಶೇ 6.5ರಷ್ಟು ಬೆಳವಣಿಗೆ ಕಾಣಲಿದೆ. 2022–23ನೇ ಸಾಲಿಗಿಂತಲೂ ಶೇ 1.3ರಷ್ಟು ಹೆಚ್ಚಳವಾಗಲಿದೆ ಎಂದು ಅಂದಾಜಿಸಿದೆ.

ಗಣಿಗಾರಿಕೆ ವಲಯವು ಶೇ 8.1ರಷ್ಟು ಬೆಳವಣಿಗೆ ಹೊಂದಲಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 4.1ರಷ್ಟು ಹೆಚ್ಚಳವಾಗಲಿದೆ. ಅಲ್ಲದೇ ಹಣಕಾಸು, ರಿಯಲ್‌ ಎಸ್ಟೇಟ್‌ ಮತ್ತು ವೃತ್ತಿಪರ ಸೇವಾ ವಲಯವು ಶೇ 8.9ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.

2022–23ರಲ್ಲಿ ಜಿಡಿಪಿ ಗಾತ್ರವು ₹160.06 ಲಕ್ಷ ಕೋಟಿ ಇತ್ತು. 2023–24ರಲ್ಲಿ ಈ ಗಾತ್ರವು ₹171.79 ಲಕ್ಷ ಕೋಟಿ ತಲುಪಲಿದೆ ಎಂದು 2023ರ ಮೇ 31ರಂದು ಬಿಡುಗಡೆಗೊಳಿಸಿದ್ದ ಎನ್‌ಎಸ್‌ಒ ವರದಿಯಲ್ಲಿ ಹೇಳಲಾಗಿತ್ತು.  

ಮತ್ತೊಂದೆಡೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಬೆಳವಣಿಗೆ ದರವು ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂದಾಜಿಸಿತ್ತು. ಆದರೆ, ಆರ್‌ಬಿಐನ ನಿರೀಕ್ಷೆಗಿಂತಲೂ ಎನ್‌ಎಸ್‌ಒ ವರದಿಯು ಹೆಚ್ಚಿನ ಬೆಳವಣಿಗೆಯನ್ನು ಅಂದಾಜಿಸಿದೆ.

2022–23ರಲ್ಲಿ ₹272.41 ಲಕ್ಷ ಕೋಟಿ ಇದ್ದ ಜಿಡಿಪಿ ಗಾತ್ರವು 2023–24ರಲ್ಲಿ ₹296.58 ಲಕ್ಷ ಕೋಟಿಗೆ (3.57 ಟ್ರಿಲಿಯನ್ ಡಾಲರ್‌) ತಲುಪಲಿದೆ ಎಂದು ಸದ್ಯ ಬಿಡುಗಡೆಯಾಗಿರುವ ವರದಿಯಲ್ಲಿ ವಿವರಿಸಲಾಗಿದೆ. 

ಕೃಷಿ ವಲಯ ಕುಂಠಿತ: ಕೃಷಿ ವಲಯದ ಬೆಳವಣಿಗೆಯು ಶೇ 1.8ರಷ್ಟು ಕಾಣಲಿದೆ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ದಾಖಲಾಗಿದ್ದ ಶೇ 4ರಷ್ಟು ಬೆಳವಣಿಗೆಗಿಂತಲೂ ಕಡಿಮೆಯಾಗಿದೆ ಎಂದು ಹೇಳಿದೆ.

ವ್ಯಾಪಾರ, ಹೋಟೆಲ್‌, ಸಾರಿಗೆ, ಸಂವಹನ ಸೇರಿದಂತೆ ಸೇವೆಗೆ ಸಂಬಂಧಿಸಿದ ಪ್ರಸಾರ ವಿಭಾಗದ ಬೆಳವಣಿಗೆಯು ಶೇ 6.3ರಷ್ಟು ಕಾಣಲಿದೆ. ಇದು 2022–23ರಲ್ಲಿದ್ದ ಶೇ 14ಕ್ಕಿಂತ ಕಡಿಮೆ ಎಂದು ವಿವರಿಸಿದೆ.

ನಿರ್ಮಾಣ ವಲಯ ಶೇ 10.7, ಸಾರ್ವಜನಿಕ ಆಡಳಿತ, ರಕ್ಷಣೆ ಸೇರಿದಂತೆ ಇತರೆ ಸೇವಾ ವಲಯ ಶೇ 7.7ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT