ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 2020–21ರಲ್ಲಿ ಹೊಟೇಲ್‌ ಉದ್ಯಮಕ್ಕೆ ₹ 1.30 ಲಕ್ಷ ಕೋಟಿ ನಷ್ಟ

ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮ
Last Updated 16 ಮೇ 2021, 13:15 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮವಾಗಿ ದೇಶದ ಹೊಟೇಲ್ ಉದ್ಯಮಕ್ಕೆ2020–21ನೇ ಹಣಕಾಸು ವರ್ಷದಲ್ಲಿ ₹ 1.30 ಲಕ್ಷ ಕೋಟಿ ವರಮಾನ ನಷ್ಟವಾಗಿದೆ. ಹೀಗಾಗಿ, ತಕ್ಷಣವೇ ನೆರವು ನೀಡಬೇಕು ಎಂದು ಭಾರತೀಯ ಹೊಟೇಲ್‌ ಮತ್ತು ರೆಸ್ಟೋರೆಂಟ್‌ ಸಂಘಗಳ ಒಕ್ಕೂಟವು (ಎಫ್‌ಎಚ್‌ಆರ್‌ಎಐ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಆತಿಥ್ಯ ಉದ್ಯಮ ವಲಯದ ಉಳಿವಿಗಾಗಿ ತಕ್ಷಣವೇ ಆರ್ಥಿಕ ಉತ್ತೇಜನಾ ಕ್ರಮಗಳನ್ನು ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಕೆಲವು ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ಒಕ್ಕೂಟ ತಿಳಿಸಿದೆ.

‘2019–20ರಲ್ಲಿ ದೇಶದ ಹೊಟೇಲ್‌ ಉದ್ಯಮದ ಒಟ್ಟಾರೆ ವರಮಾನವು ₹ 1.82 ಲಕ್ಷ ಕೋಟಿಗಳಷ್ಟಿತ್ತು. ನಮ್ಮ ಅಂದಾಜಿನ ಪ್ರಕಾರ, 2020–21ರಲ್ಲಿ ಉದ್ಯಮದ ವರಮಾನದಲ್ಲಿ ಶೇ 75ರಷ್ಟು ಅಂದರೆ ಸರಿಸುಮಾರು ₹ 1.30 ಲಕ್ಷ ಕೋಟಿ ನಷ್ಟವಾಗಿದೆ’ ಎಂದು ಒಕ್ಕೂಟವು ಪ್ರಕಟಣೆಯಲ್ಲಿ ತಿಳಿಸಿದೆ.

ವಹಿವಾಟುಗಳು ನಿಧಾನವಾಗಿ ಮುಚ್ಚುತ್ತಿವೆ, ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣವು ಹೆಚ್ಚಾಗುತ್ತಿದೆ ಎಂದೂ ಅದು ಹೇಳಿದೆ.

2020ರ ಮಾರ್ಚ್‌ನಿಂದಲೂ ಬಂಡವಾಳ ವೆಚ್ಚ ನಿರ್ವಹಿಸಲು ಉದ್ಯಮವು ಹೆಣಗಾಡುತ್ತಿದೆ. ಸದ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಬಡ್ಡಿ ಸಹಿತವಾಗಿ ಸಾಲ ಮರುಪಾವತಿಯು ಅಸಾಧ್ಯವಾಗುತ್ತಿದೆ ಎಂದು ಒಕ್ಕೂಟದ ಉಪಾಧ್ಯಕ್ಷ ಗುರ್ಬಕ್ಸಿಶ್‌ ಸಿಂಗ್‌ ಕೊಹ್ಲಿ ಹೇಳಿದ್ದಾರೆ. ಸಾಲದ ಇಎಂಐ ಮತ್ತು ಬಡ್ಡಿ ಪಾವತಿ ಅವಧಿ ಮುಂದೂಡಿಕೆ ಆಗದೇ ಇದ್ದರೆ ಉದ್ಯಮವು ಸಂಪೂರ್ಣವಾಗಿ ನಾಶವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ಹೆಚ್ಚಿನ ಸಮಯ ವ್ಯರ್ಥ ಮಾಡದೇ, ಆತಿಥ್ಯ ಉದ್ಯಮದ ಶಾಸನಬದ್ಧ ಶುಲ್ಕಗಳನ್ನು ಮನ್ನಾ ಮಾಡಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು ಎಂದಿದ್ದಾರೆ. ಲಾಕ್‌ಡೌನ್‌ ಅವಧಿಗೆ ಉದ್ಯಮದ ಆಸ್ತಿ ತೆರಿಗೆ, ನೀರಿನ ಶುಲ್ಕ, ವಿದ್ಯುತ್‌ ಶುಲ್ಕ ಮತ್ತು ಎಕ್ಸೈಸ್‌ ಪರವಾನಗಿ ಶುಲ್ಕಗಳನ್ನು ಮನ್ನಾ ಮಾಡುವಂತೆಯೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT