ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕ ಬಿಡುಗಡೆ: ಭಾರತಕ್ಕೆ 39ನೇ ಸ್ಥಾನ

Published 21 ಮೇ 2024, 15:59 IST
Last Updated 21 ಮೇ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) 2024ರ ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 39ನೇ ಸ್ಥಾನಕ್ಕೆ ಜಿಗಿದಿದೆ. 

2021ರಲ್ಲಿ ಭಾರತವು 54ನೇ ಸ್ಥಾನದಲ್ಲಿತ್ತು.

ಮಂಗಳವಾರ ಬಿಡುಗಡೆಯಾಗಿರುವ ಡಬ್ಲ್ಯುಇಎಫ್‌ ವರದಿ ಪ್ರಕಾರ ಅಮೆರಿಕವು ಮೊದಲ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳು ಹಾಗೂ ಕೆಳ ಮಧ್ಯಮ ಆದಾಯದ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ ಎಂದು ವರದಿ ತಿಳಿಸಿದೆ.

ಡಬ್ಲ್ಯುಇಎಫ್‌ ಹಾಗೂ ಸರ‍್ರೆ ವಿಶ್ವವಿದ್ಯಾಲಯವು ಜಂಟಿಯಾಗಿ ಈ ವರದಿ ಸಿದ್ಧಪಡಿಸಿವೆ. ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಕೋವಿಡ್‌ ಸಾಂಕ್ರಾಮಿಕದ ಪೂರ್ವದ ಸ್ಥಿತಿಗೆ ಮರಳಿವೆ ಎಂದು ಹೇಳಿದೆ. 

ಪ್ರವಾಸೋದ್ಯಮದ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಬೆಲೆ (18ನೇ ಸ್ಥಾನ), ಸ್ಪರ್ಧಾತ್ಮಕ ವಿಮಾನ ಸಾರಿಗೆ (26ನೇ ಸ್ಥಾನ) ಹಾಗೂ ಬಂದರು ಮೂಲ ಸೌಕರ್ಯದಲ್ಲಿ (25ನೇ ಸ್ಥಾನ) ಭಾರತದ ಸಾಧನೆ ಅತ್ಯುತ್ತಮವಾಗಿದೆ.

ಭಾರತವು ನೈಸರ್ಗಿಕ (6ನೇ ಸ್ಥಾನ) ಹಾಗೂ ಸಾಂಸ್ಕೃತಿಕವಾಗಿ (9ನೇ ಸ್ಥಾನ) ಸಂಪದ್ಭರಿತವಾಗಿದೆ. ಪ್ರವಾಸಿಗರು ವಿರಾಮದ ಅವಧಿಯಲ್ಲಿ ಅಡುಗೆ ತಯಾರಿಕೆ, ಸ್ವಚ್ಛತೆ, ಸ್ನಾನ, ವಾಹನ ಚಾಲನೆಗೂ ಅವಕಾಶ ಸಿಗಲಿದೆ. ಇದು ಪ್ರವಾಸೋದ್ಯಮ ಚಟುವಟಿಕೆಗಳ ಹೆಚ್ಚಳಕ್ಕೆ ಸಹಕಾರಿಯಾಗಿದೆ ಎಂದು ತಿಳಿಸಿದೆ.

2019ರಲ್ಲಿ ಭಾರತದ ಸೂಚ್ಯಂಕವು ಕುಸಿತಗೊಂಡಿತ್ತು. ಸದ್ಯ ಸುಸ್ಥಿರತೆ ಕಾಯ್ದುಕೊಂಡಿದೆ. ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.

ದೇಶದ ಒಟ್ಟಾರೆ ಸೂಚ್ಯಂಕವು ಶೇ 2.1ರಷ್ಟಿದ್ದು, 2019ಕ್ಕಿಂತಲೂ ಕಡಿಮೆ ಇದೆ. ಯುರೋಪ್‌ ಹಾಗೂ ಏಷ್ಯಾ–ಪೆಸಿಫಿಕ್‌ ಪ್ರದೇಶದ ರಾಷ್ಟ್ರಗಳು ಸೂಚ್ಯಂಕದಲ್ಲಿ ಮುಂದಿವೆ.

‘ಕೋವಿಡ್‌ ಸಾಂಕ್ರಾಮಿಕದ ವೇಳೆ ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಸೊರಗಿ ಹೋಗಿದ್ದವು. ಪ್ರವಾಸಿಗರ ಆಗಮನದ ಸಂಖ್ಯೆಯೂ ಕುಗ್ಗಿತ್ತು. ಸದ್ಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಹಾಗಾಗಿ, ಪ್ರಸಕ್ತ ವರ್ಷದಲ್ಲಿ ಜಾಗತಿಕ ಜಿಡಿಪಿ ಹೆಚ್ಚಳಕ್ಕೆ ಪ್ರವಾಸೋದ್ಯಮ ಚಟುವಟಿಕೆಗಳು ನೆರವಾಗಲಿವೆ’ ಎಂದು ವರದಿ ತಿಳಿಸಿದೆ.

ವಿಶ್ವದ 119 ದೇಶಗಳಲ್ಲಿರುವ ನೀತಿಗಳ ಅನುಸಾರ ಅಲ್ಲಿನ ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯವನ್ನು ವಿಶ್ಲೇಷಿಸಿ, ದ್ವೈವಾರ್ಷಿಕವಾಗಿ ಈ ಸೂಚ್ಯಂಕವನ್ನು ವಿಶ್ಲೇಷಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT