ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ವಿದ್ಯುತ್‌ ಬಳಕೆ ಶೇ 7.5ರಷ್ಟು ಹೆಚ್ಚಳ

ಆರ್ಥಿಕ ಚಟುವಟಿಕೆಗಳ ಹೆಚ್ಚಳದಿಂದ ಏರಿಕೆ
Published 18 ಫೆಬ್ರುವರಿ 2024, 15:40 IST
Last Updated 18 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ನವದೆಹಲಿ: 2023–24ರ ಹಣಕಾಸು ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ದೇಶದಲ್ಲಿ 1.35 ಲಕ್ಷ ಕೋಟಿ ಯೂನಿಟ್‌ (1354.97 ಬಿಲಿಯನ್‌ ಯೂನಿಟ್‌) ವಿದ್ಯುತ್‌ ಬಳಕೆ ಆಗಿದೆ ಎಂದು ಸರ್ಕಾರದ ಅಂಕಿ–ಅಂಶಗಳು ತಿಳಿಸಿವೆ. ಆರ್ಥಿಕ ಚಟುವಟಿಕೆಗಳ ಹೆಚ್ಚಳದಿಂದಾಗಿ ಈ ಏರಿಕೆಯಾಗಿದೆ.

ಹಿಂದಿನ ಇದೇ ಅವಧಿಯಲ್ಲಿ 1.25 ಲಕ್ಷ ಕೋಟಿ ಯೂನಿಟ್‌ (1259.49 ಬಿಲಿಯನ್‌ ಯೂನಿಟ್‌) ಬಳಕೆ ಆಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಶೇ7.5ರಷ್ಟು ಏರಿಕೆ ಆಗಿದೆ. 2022–23ರ ಪೂರ್ಣ ಹಣಕಾಸು ವರ್ಷದಲ್ಲಿ ಒಟ್ಟು 1.50 ಲಕ್ಷ ಕೋಟಿ ಯೂನಿಟ್‌ (1,505.91 ಬಿಲಿಯನ್‌ ಯೂನಿಟ್‌) ಬಳಕೆ ಆಗಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ಬಳಕೆಯಾದ ವಿದ್ಯುತ್‌, ದೇಶದಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿನ ಹೆಚ್ಚಳವನ್ನು ತೋರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್‌, ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಆರ್ದ್ರ ಹವಾಮಾನ ಮತ್ತು ಹಬ್ಬದ ಋತು ಅಂಗವಾಗಿ ಕೈಗಾರಿಕಾ ಚಟುವಟಿಕೆಗಳು ಹೆಚ್ಚಾಗಿದ್ದವು. ಇದರಿಂದ ವಿದ್ಯುತ್‌ ಬಳಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ಆರ್ಥಿಕ ಚಟುವಟಿಕೆಗಳ ಸುಧಾರಣೆಯಿಂದಾಗಿ ವಿದ್ಯುತ್‌ ಬಳಕೆ ಸ್ಥಿರವಾಗಿ ಏರಿಕೆಯಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತವು ವಿದ್ಯುತ್ ಬಳಕೆ ಮತ್ತು ಬೇಡಿಕೆಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ಹೊಂದಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನವರಿಯಲ್ಲಿ 13,318 ಕೋಟಿ ಯೂನಿಟ್‌ ವಿದ್ಯುತ್‌ ಬಳಕೆ ಆಗಿದ್ದರೆ, ಹಿಂದಿನ ಇದೇ ಅವಧಿಯಲ್ಲಿ 12,630 ಕೋಟಿ ಯೂನಿಟ್‌ ಬಳಕೆಯಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಒಟ್ಟಾರೆ ಶೇ 5.4ರಷ್ಟು ಹೆಚ್ಚಾಗಿದೆ.

2024ರ ಜನವರಿಯಲ್ಲಿ 222.32 ಗಿಗಾವಾಟ್‌ ಯೂನಿಟ್‌, 2023ರ ಜನವರಿಯಲ್ಲಿ 210.72 ಗಿಗಾವಾಟ್‌ ಯೂನಿಟ್‌ ಮತ್ತು 2022ರ ಜನವರಿಯಲ್ಲಿ 192.18 ಗಿಗಾವಾಟ್‌ ಯೂನಿಟ್‌ ದಿನದ ಗರಿಷ್ಠ ವಿದ್ಯುತ್‌ ಪೂರೈಕೆ ಆಗಿತ್ತು.

ಚಳಿಯಿಂದಾಗಿ ಹೀಟರ್‌, ಬ್ಲೋವರ್‌ ಮತ್ತು ಗೀಸರ್‌ಗಳ ಬಳಕೆ ಹೆಚ್ಚಳದಿಂದಾಗಿಯೂ ವಿದ್ಯುತ್‌ ಬಳಕೆ ಏರಿಕೆ ಆಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT