ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ ಎರಡನೇ ತಿಂಗಳಿನಲ್ಲಿಯೂ ಸೇವಾ ವಲಯದ ಚಟುವಟಿಕೆ ಕುಸಿತ

Last Updated 5 ಜುಲೈ 2021, 11:50 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಗಳು ಜೂನ್‌ ತಿಂಗಳಿನಲ್ಲಿಯೂ ನಕಾರಾತ್ಮಕ ಮಟ್ಟದಲ್ಲಿಯೇ ಇವೆ. ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ ಮತ್ತು ಲಾಕ್‌ಡೌನ್‌ ನಿರ್ಬಂಧಗಳಿಂದಾಗಿ ಸತತ ಎರಡನೇ ತಿಂಗಳಿನಲ್ಲಿಯೂ ಚಟುವಟಿಕೆಗಳು ನಕಾರಾತ್ಮಕ ಮಟ್ಟದಲ್ಲಿಯೇ ಇರುವಂತಾಗಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳ ಸೂಚ್ಯಂಕವು ಮೇ ತಿಂಗಳಿನಲ್ಲಿ 46.4ರಷ್ಟಿತ್ತು. ಜೂನ್‌ನಲ್ಲಿ ಇದು 41.2ಕ್ಕೆ ಇಳಿಕೆ ಕಂಡಿದೆ. 2020ರ ಜುಲೈ ನಂತರ ಕಂಡುಬಂದಿರುವ ಅತ್ಯಂತ ವೇಗದ ಕುಸಿತ ಇದಾಗಿದೆ. ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ‘ಸಕಾರಾತ್ಮಕ’ ಎಂದು ಪರಿಗಣಿಸಲಾಗುತ್ತದೆ. ಸೂಚ್ಯಂಕವು 50ಕ್ಕಿಂತ ಕೆಳಗಿದ್ದರೆ ಅದು ‘ನಕಾರಾತ್ಮಕ’ ಎಂದು ಪರಿಗಣಿತವಾಗುತ್ತದೆ.

ಲಾಕ್‌ಡೌನ್‌ನಿಂದಾಗಿ ಬೇಡಿಕೆ ತಗ್ಗಿರುವುದರಿಂದ ಕಂಪನಿಗಳು ಉದ್ಯೋಗಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡಿವೆ ಎಂದು ಸಂಸ್ಥೆ ಹೇಳಿದೆ.

ಭಾರತದಲ್ಲಿನ ಕೋವಿಡ್‌ ಪರಿಸ್ಥಿತಿಯನ್ನು ಗಮನಿಸಿದಾಗ ಸೇವಾ ವಲಯದ ಮೇಲೆ ಪರಿಣಾಮ ಉಂಟಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಹೊಸ ವಹಿವಾಟುಗಳು ಕಡಿಮೆ ಆಗಿದ್ದು, ಉದ್ಯೋಗ ಕಡಿತವು ತೀವ್ರವಾಗಿದೆ. ಹೀಗಿದ್ದರೂ ಮೊದಲು ಜಾರಿಗೊಳಿಸಿದ್ದ ಲಾಕ್‌ಡೌನ್‌ ಸಂದರ್ಭದಲ್ಲಿ ಆಗಿದ್ದ ದಾಖಲೆಯ ಕುಸಿತಕ್ಕೆ ಹೋಲಿಸಿದರೆ ಜೂನ್‌ ತಿಂಗಳ ಕುಸಿತವು ತುಸು ಕಡಿಮೆ ಎಂದು ಐಎಚ್‌ಎಸ್‌ ಮರ್ಕಿಟ್ ಸಂಸ್ಥೆಯ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ ಲಿಮಾ ಹೇಳಿದ್ದಾರೆ.

ಭಾರತದ ಸೇವೆಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೇಡಿಕೆಯು ಜೂನ್‌ನಲ್ಲಿ ಇನ್ನಷ್ಟು ಇಳಿಕೆ ಆಗಿದ್ದು, ಹೊಸ ರಫ್ತು ವಹಿವಾಟು ಸತತ 16ನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ.

ಸೇವಾ ವಲಯ ಹಾಗೂ ತಯಾರಿಕಾ ವಲಯಗಳ ಚಟುವಟಿಕೆಗಳ ಸ್ಥಿತಿಯನ್ನು ತಿಳಿಸುವ ಕಾಂಪೊಸಿಟ್ ಪಿಎಂಐ ಔಟ್‌ಪುಟ್‌ ಸೂಚ್ಯಂಕವು ಮೇ ತಿಂಗಳಿನಲ್ಲಿ 48.1 ರಷ್ಟು ಇದ್ದಿದ್ದು, ಜೂನ್‌ನಲ್ಲಿ 43.1ಕ್ಕೆ ಇಳಿಕೆ ಕಂಡಿದೆ. 2020ರ ಜುಲೈ ಬಳಿಕ ಅತ್ಯಂತ ತೀಕ್ಷ್ಣವಾದ ಕುಸಿತ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT