ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2030ಕ್ಕೆ ದೇಶದ ಉಕ್ಕು ಬೇಡಿಕೆ 19 ಕೋಟಿ ಟನ್‌ಗೆ ಏರಿಕೆ: ವರದಿ

ಉಕ್ಕು ಉತ್ಪಾದನೆ 21 ಕೋಟಿ ಟನ್‌ಗೆ ಹೆಚ್ಚಳ: ಸ್ಟೀಲ್‌ಮಿಂಟ್‌
Published : 26 ನವೆಂಬರ್ 2023, 16:21 IST
Last Updated : 26 ನವೆಂಬರ್ 2023, 16:21 IST
ಫಾಲೋ ಮಾಡಿ
Comments

ನವದೆಹಲಿ: ಭಾರತದ ಉಕ್ಕು ಬೇಡಿಕೆ, ವಾರ್ಷಿಕ ಸಂಯುಕ್ತ ಬೆಳವಣಿಗೆ ದರದ (ಸಿಎಜಿಆರ್) ಪ್ರಕಾರ 2030ರ ವೇಳೆಗೆ ಶೇ 7ರಷ್ಟು ಏರಿಕೆಯಾಗಿ, 19 ಕೋಟಿ ಟನ್‌ಗೆ ಬೆಳೆಯುವ ನಿರೀಕ್ಷೆ ಇದೆ ಎಂದು ಸ್ಟೀಲ್‌ಮಿಂಟ್‌ ಇಂಡಿಯಾ ಸಂಸ್ಥೆ ವರದಿ ತಿಳಿಸಿದೆ.

ನಿರ್ಮಾಣ ಮತ್ತು ಮೂಲಸೌಕರ್ಯ ವಲಯಗಳು ಬೇಡಿಕೆ ಹೆಚ್ಚಳಕ್ಕೆ ಶೇ 60–65ರಷ್ಟು ಕೊಡುಗೆ ನೀಡುತ್ತಿವೆ ಎಂದು ವರದಿ ತಿಳಿಸಿದೆ.

2030ರಲ್ಲಿ ಭಾರತದ ಉಕ್ಕಿನ ಬೇಡಿಕೆಯು ವಾರ್ಷಿಕ ಶೇ 7ರಷ್ಟು ಸಿಎಜಿಆರ್‌ ಆಧಾರದ ಮೇಲೆ 19 ಕೋಟಿ ಟನ್‌ಗೆ ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಇದು 2030ರ ವೇಳೆಗೆ 23 ಕೋಟಿ ಟನ್‌ಗೆ ತಲುಪಬಹುದು ಎಂದು ‘ಭಾರತದ ಉಕ್ಕು ಮತ್ತು ಕೋಕಿಂಗ್ ಕಲ್ಲಿದ್ದಲು ಬೇಡಿಕೆ 2030’ ವರದಿ ಹೇಳಿದೆ.

ಆಟೊ ಮತ್ತು ಎಂಜಿನಿಯರಿಂಗ್‌ ವಲಯವು ಬೇಡಿಕೆಯನ್ನು ಹೆಚ್ಚಿಸುತ್ತಿವೆ. ಜನಸಂಖ್ಯೆ ಹೆಚ್ಚಳ, ನಗರೀಕರಣದ ಬೆಳವಣಿಗೆ, ಸರ್ಕಾರದ ಉಪಕ್ರಮಗಳು ಪ್ರಮುಖವಾಗಿ ಬೇಡಿಕೆ ಹೆಚ್ಚಲು ಕಾರಣವಾದ ಅಂಶಗಳಾಗಿವೆ. 2023ರ ಅಂತ್ಯದ ವೇಳೆಗೆ ಬೇಡಿಕೆ 12 ಕೋಟಿ ಟನ್‌ ತಲುಪುವ ನಿರೀಕ್ಷೆಯಿದೆ ಮತ್ತು ಉತ್ಪಾದನೆ 13.6 ಕೋಟಿ ಟನ್‌ ಆಗಲಿದೆ ಎಂದು ತಿಳಿಸಿದೆ.

2030ರ ವೇಳೆಗೆ ಭಾರತದ ಕಚ್ಚಾ ಉಕ್ಕು ಉತ್ಪಾದನೆ 21 ಕೋಟಿ ಟನ್‌ ಆಗುವ ನಿರೀಕ್ಷೆಯಿದ್ದು, ಇದು 2023ರ ಉತ್ಪಾದನಾ ಮಟ್ಟಕ್ಕಿಂತ ಶೇ 45ರಷ್ಟು ಹೆಚ್ಚಾಗಿದೆ. ಚೀನಾ ಸೇರಿದಂತೆ ಹಲವು ದೇಶಗಳು ತಮ್ಮ ಪ್ರಸ್ತುತ ಉಕ್ಕು ಉತ್ಪಾದನಾ ಮಟ್ಟಕ್ಕೆ ಹೋಲಿಸಿದರೆ ಉತ್ಪಾದನೆಯಲ್ಲಿ ಇಳಿಕೆಯನ್ನು ತೋರಿಸುತ್ತವೆ ಎಂದು ಹೇಳಿದೆ.

ಮುಂಬರುವ ದಿನಗಳಲ್ಲಿ ಭಾರತವು ಸಮುದ್ರ ಮಾರ್ಗದ ಮೂಲಕ ಸಾಗಿಸುವ ಕಲ್ಲಿದ್ದಲಿನ ಅತಿದೊಡ್ಡ ಆಮದುದಾರನಾಗಿ ಹೊರಹೊಮ್ಮಲಿದೆ, ಇದು ಮಾರುಕಟ್ಟೆಯ ಶೇ 30ರಷ್ಟು ಪಾಲನ್ನು ಹೊಂದಲಿದೆ. 2030ರ ವೇಳೆಗೆ ದೇಶಕ್ಕೆ 35 ಕೋಟಿ ಟನ್‌ ಕಬ್ಬಿಣದ ಅದಿರು ಅಗತ್ಯವಿರುತ್ತದೆ. 2030ರ ವರ್ಷವು ದೇಶೀಯ ಉಕ್ಕು ಉದ್ಯಮಕ್ಕೆ ಮಹತ್ವದ್ದಾಗಿದ್ದು, ಈ ವೇಳೆಗೆ ಸರ್ಕಾರವು ಭಾರತದ ಸ್ಥಾಪಿತ ಉಕ್ಕು ತಯಾರಿಕೆ ಸಾಮರ್ಥ್ಯವನ್ನು 30 ಕೋಟಿ ಟನ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT