ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಜಿಗಿದ ಹಣದುಬ್ಬರ ಪ್ರಮಾಣ

ಜನವರಿಯಲ್ಲಿ ಗರಿಷ್ಠ ಮಟ್ಟವನ್ನು ಮೀರಿದ ಬೆಲೆ ಏರಿಕೆ ಪ್ರಮಾಣ
Last Updated 13 ಫೆಬ್ರುವರಿ 2023, 19:00 IST
ಅಕ್ಷರ ಗಾತ್ರ

ನವದೆಹಲಿ : ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟವನ್ನು ಮತ್ತೆ ಮೀರಿದೆ. ಜನವರಿಯಲ್ಲಿ ಹಣದುಬ್ಬರ ಪ್ರಮಾಣವು ಶೇಕಡ 6.52ಕ್ಕೆ ಏರಿಕೆ ಆಗಿದೆ. ಆಹಾರ ವಸ್ತುಗಳ ಬೆಲೆಯಲ್ಲಿ ಆದ ಹೆಚ್ಚಳ ಇದಕ್ಕೆ ಮುಖ್ಯ ಕಾರಣ.

ನವೆಂಬರ್ ಹಾಗೂ ಡಿಸೆಂಬರ್ ತಿಂಗಳನ್ನು ಹೊರತುಪಡಿಸಿದರೆ, ಚಿಲ್ಲರೆ ಹಣದುಬ್ಬರ ಪ್ರಮಾಣವು 2022ರ ಜನವರಿಯಿಂದಲೂ ಶೇ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ಹಣದುಬ್ಬರ ಪ್ರಮಾಣವನ್ನು ಆರ್‌ಬಿಐ ಶೇ 6ಕ್ಕಿಂತ ಕಡಿಮೆ ಮಟ್ಟದಲ್ಲಿ ನಿಯಂತ್ರಿಸಬೇಕು. ಇದು ಸರ್ಕಾರವು ಆರ್‌ಬಿಐಗೆ ನೀಡಿರುವ ಗುರಿ. ಆದರೆ, 2022ರಲ್ಲಿ ಆರ್‌ಬಿಐ ಈ ಹಣದುಬ್ಬರ ನಿಯಂತ್ರಿಸುವಲ್ಲಿ ವಿಫಲವಾಗಿದೆ.

ಜನವರಿಯಲ್ಲಿ ತರಕಾರಿ ಬೆಲೆ ತಗ್ಗಿದ್ದರೂ, ಇತರ ಬಹುತೇಕ ಉತ್ಪನ್ನಗಳ ಬೆಲೆಯು ಏರಿಕೆ ಆಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಪ್ರಮಾಣವು ಶೇ 6.85 ಆಗಿದೆ. ನಗರ ಪ್ರದೇಶಗಳಲ್ಲಿ ಇದು ಶೇ 6ರಷ್ಟು ಇದೆ.

ಹಣದುಬ್ಬರ ನಿಯಂತ್ರಣದ ಉದ್ದೇಶದಿಂದ ಆರ್‌ಬಿಐ ರೆಪೊ ದರವನ್ನು ಫೆಬ್ರುವರಿ 8ರಂದು ಶೇ 0.25ರಷ್ಟು ಹೆಚ್ಚು ಮಾಡಿದೆ. ಈಗ ರೆಪೊ ದರವು ಶೇ 6.50ರಷ್ಟಾಗಿದೆ. ಈಗ ಚಿಲ್ಲರೆ ಹಣದುಬ್ಬರ ಪ್ರಮಾಣವು ಹೆಚ್ಚಾಗಿರುವ ಕಾರಣದಿಂದಾಗಿ ಆರ್‌ಬಿಐ ರೆಪೊ ದರವನ್ನು ಮತ್ತೆ ಶೇ 0.25ರಷ್ಟು ಹೆಚ್ಚಿಸಬಹುದು ಎಂದು ಕೋಟಕ್‌ ಮಹೀಂದ್ರ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ಉಪಾಸನಾ ಭಾರದ್ವಾಜ್ ಅಂದಾಜಿಸಿದ್ದಾರೆ.

ರಾಯಿಟರ್ಸ್‌ ಸುದ್ದಿಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಅರ್ಥಶಾಸ್ತ್ರಜ್ಞರು, ಜನವರಿಯಲ್ಲಿ ಹಣದುಬ್ಬರ ಪ್ರಮಾಣವು ಶೇ 5.9 ಆಗಬಹುದು ಎಂದು ಅಂದಾಜಿಸಿದ್ದರು. ಆದರೆ, ಈಗ ಹಣದುಬ್ಬರ ಪ್ರಮಾಣವು ಆ ಅಂದಾಜನ್ನೂ ಮೀರಿದೆ.

‘ಸತತ ಎರಡು ತಿಂಗಳ ಅವಧಿಯಲ್ಲಿ ಹಣದುಬ್ಬರ ಪ್ರಮಾಣದಲ್ಲಿ ಕಂಡುಬಂದ ಇಳಿಕೆಯು ದೀರ್ಘಕಾಲ ಉಳಿಯುವಂಥದ್ದಾಗಿರಲಿಲ್ಲ. ಜನವರಿಯ ಪ್ರಮಾಣವು ನಾವು ಸಮಸ್ಯೆಯಿಂದ ಹೊರಬಂದಿಲ್ಲ ಎಂಬುದನ್ನು ಸೂಚಿಸುತ್ತಿದೆ’ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಅರ್ಥಶಾಸ್ತ್ರಜ್ಞೆ ಸಾಕ್ಷಿ ಗುಪ್ತ ಹೇಳಿದ್ದಾರೆ.

ಆಹಾರ ವಸ್ತುಗಳ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 4.19ರಷ್ಟು ಇದ್ದಿದ್ದು ಜನವರಿಯಲ್ಲಿ ಶೇ 5.94ಕ್ಕೆ ಹೆಚ್ಚಾಗಿದೆ. ಹಾಲು, ಏಕದಳ ಧಾನ್ಯಗಳ ಬೆಲೆ ಏರಿಕೆಯು ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT