ನವದೆಹಲಿ: ಹೊಸ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಇರುವುದನ್ನು ಇನ್ಫೊಸಿಸ್ ಒಪ್ಪಿಕೊಂಡಿದ್ದು, ಕೆಲವು ಆರಂಭಿಕ ಹಂತದ ಸಮಸ್ಯೆಗಳನ್ನು ಪರಿಹರಿಸಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.
ಹೊಸ ಜಾಲತಾಣ www.incometax.gov.inಗೆ ಜೂನ್ 7ರಂದು ಚಾಲನೆ ನೀಡಲಾಗಿತ್ತು. ಅಂದಿನಿಂದಲೂ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಬಗ್ಗೆ ತೆರಿಗೆ ಪಾವತಿದಾರರು ಮತ್ತು ತೆರಿಗೆ ವೃತ್ತಿಪರರರು ಸರ್ಕಾರಕ್ಕೆ ದೂರು ನೀಡುತ್ತಲೇ ಬಂದಿದ್ದರು. ಇದರಿಂದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜೂನ್ 22ರಂದು ಇನ್ಫೊಸಿಸ್ ತಂಡದೊಂದಿಗೆ ಸಭೆ ನಡೆಸಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದರು.
ಪೋರ್ಟಲ್‌ನಲ್ಲಿ ಇರುವ ಸಮಸ್ಯೆಗಳ ಕುರಿತಾಗಿ 700ಕ್ಕೂ ಅಧಿಕ ಇ–ಮೇಲ್‌ಗಳು ಬಂದಿದ್ದು, 2 ಸಾವಿರಕ್ಕೂ ಅಧಿಕ ಸಮಸ್ಯೆಗಳು ಇರುವ ಬಗ್ಗೆ ತಿಳಿಸಲಾಗಿದೆ. ತೆರಿಗೆದಾರರು, ತೆರಿಗೆ ವೃತ್ತಿಪರರು ಮತ್ತು ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ (ಐಸಿಎಐ) ಒಳಗೊಂಡು ಹಲವರು ಸಮಸ್ಯೆಗಳ ಕುರಿತು ದೂರು ನೀಡಿದ್ದರು ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳಿರುವುದನ್ನು ಇನ್ಫೊಸಿಸ್ ಒಪ್ಪಿಕೊಂಡಿದೆ. ಇವುಗಳನ್ನು ಪರಿಹರಿಸುತ್ತ ಬರಲಾಗುತ್ತಿದೆ. ನಿಧಾನಗತಿಯ ಕಾರ್ಯಾಚರಣೆ, ಕೆಲವು ವೈಶಿಷ್ಟ್ಯಗಳು ಲಭ್ಯವಿಲ್ಲದೇ ಇರುವುದು ಸೇರಿದಂತೆ ಆರಂಭಿಕ ಹಂತದ ಕೆಲವು ಸಮಸ್ಯೆಗಳನ್ನು ನಿವಾರಣೆ ಮಾಡಿರುವುದಾಗಿ ಕಂಪನಿಯು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.