ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವಿಮೆ ಹೆಚ್ಚುವರಿ ಪ್ರಯೋಜನಕ್ಕೆ ‘ರೈಡರ್‌’

Last Updated 27 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

‘ರೈಡರ್‌’ ಎಂಬುದು ಜೀವವಿಮೆಯ ಸೌಲಭ್ಯಗಳನ್ನು ಹೆಚ್ಚಿಸುವಂಥ ಉತ್ಪನ್ನ. ಜೀವವಿಮೆಯು ಸಹಜವಾಗಿ ಇದನ್ನು ಒಳಗೊಂಡಿರುವುದಿಲ್ಲ. ಬದಲಿಗೆ ಹೆಚ್ಚುವರಿಯಾಗಿ ಅವುಗಳನ್ನು ಆಯ್ಕೆಯ ರೂಪದಲ್ಲಿ ಸೇರಿಸಿಕೊಳ್ಳಬಹುದು. ವಿಮೆ ಪಾಲಿಸಿದಾರರಿಗೆ ತಮಗೆ ಬೇಕಾದ ರೀತಿಯಲ್ಲಿ ಪಾಲಿಸಿ ರೂಪಿಸಲು ಇವು ಅನುವು ಮಾಡಿಕೊಡುವುದರ ಜೊತೆಗೆ ಹೆಚ್ಚಿನ ಆರ್ಥಿಕ ಭದ್ರತೆಯನ್ನೂ ನೀಡುತ್ತವೆ.

ಒಂದು ಸಣ್ಣ ಉದಾಹರಣೆ ಇಲ್ಲಿದೆ: ನೀವು ಒಂದು ಪಿಜ್ಜಾ ಆರ್ಡರ್‌ ಮಾಡಬೇಕು ಎಂದಿಟ್ಟುಕೊಳ್ಳಿ. ನಿಮ್ಮ ಮುಂದೆ ಹತ್ತಾರು ಆಯ್ಕೆಗಳು ಬರುತ್ತವೆ. ಅದರಲ್ಲಿ ಬೇಕಾದ್ದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಬೇಸ್‌ ಒಂದೇ ಇದ್ದರೂ, ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಟಾಪಿಂಗ್‌ ಮಾಡಿಸಿಕೊಂಡು ಅದನ್ನು ಸವಿಯಬಹುದು. ಇಂಥದ್ದೇ ಆಯ್ಕೆ ಜೀವವಿಮೆಗೂ ಲಭ್ಯವಾದರೆ. ಪಿಜ್ಜಾದ ಟಾಪಿಂಗ್‌ನಂತೆ ‘ರೈಡರ್‌’ಗಳೂ ಸಹ ಖರೀದಿದಾರರ ಅಗತ್ಯ ಮತ್ತು ಆಯ್ಕೆಗೆ ಬಿಟ್ಟವುಗಳು. ‘ರೈಡರ್‌’ಗಳ ಮೂಲಕ ಜೀವವಿಮೆಯನ್ನೂ ತಮಗೆ ಬೇಕಾದಂತೆ ರೂಪಿಸಬಹುದಾಗಿದೆ.

ಗ್ರಾಹಕರು ಸಾಮಾನ್ಯ ಜೀವವಿಮೆಯ ಮೇಲೆ ಇಂಥ ರೈಡರ್‌ಗಳನ್ನು ಪಡೆಯಬಹುದಾಗಿದೆ. ಇದಕ್ಕೆ ಹೆಚ್ಚುವರಿಯಾಗಿ ಸ್ವಲ್ಪ ವೆಚ್ಚ ಬರುತ್ತದೆ ಅಷ್ಟೇ. ಹೆಚ್ಚಿನ ಹಣವನ್ನು ತೆತ್ತು ಹೊಸ ವಿಮೆ ಮಾಡಿಸುವ ಬದಲು, ಇರುವ ವಿಮೆಗೇ ಕಡಿಮೆ ವೆಚ್ಚದಲ್ಲಿ ತಮಗೆ ಬೇಕಾದಂಥ ‘ರೈಡರ್‌’ಗಳನ್ನು ಸೇರಿಸಿಕೊಂಡು ಇನ್ನಷ್ಟು ಗಟ್ಟಿಗೊಳಿಸಬಹುದು.

ಸಾಕಷ್ಟು ಆಯ್ಕೆ ಲಭ್ಯ

ಈಚಿನ ವರ್ಷಗಳಲ್ಲಿ ನಮ್ಮ ಜೀವನಶೈಲಿ ಬದಲಾಗಿದೆ. ಇದರ ಪರಿಣಾಮವಾಗಿ, ಹೃದಯ, ಮೂತ್ರಪಿಂಡ, ಕ್ಯಾನ್ಸರ್‌ನಂಥ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುವ ಅಪಾಯವೂ ಹೆಚ್ಚಿದೆ. ಅನೇಕ ಸಂದರ್ಭಗಳಲ್ಲಿ ಇಂತಹ ಕಾಯಿಲೆಯ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಸುರಿಯಬೇಕಾಗುತ್ತದೆ. ಸಾಮಾನ್ಯ ಆರೋಗ್ಯ ವಿಮೆಗಳು ಚಿಕಿತ್ಸಾ ವೆಚ್ಚವನ್ನು ಭರಿಸಬಲ್ಲವು. ಆದರೆ, ಅವುಗಳಿಗೆ ಗರಿಷ್ಠ ಮಿತಿ ಇರುತ್ತದೆ. ಸಾಮಾನ್ಯವಾಗಿ ಇಂತಹ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲು ಅವು ಸಾಕಾಗುವುದಿಲ್ಲ. ಆದರೆ, ವಿಮೆಯ ಜೊತೆಗೆ ಗಂಭೀರ ಕಾಯಿಲೆಗಳ ‘ರೈಡರ್‌’ ಇದ್ದರೆ ಚಿಂತಿಸುವ ಅಗತ್ಯ ಇರುವುದಿಲ್ಲ. ಇದು ವಿಮೆ ಪಾಲಿಸಿದಾರರ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಭರಿಸುತ್ತದೆ. ಆದ್ದರಿಂದ ಯಾವ ಸಂದರ್ಭದಲ್ಲೂ ಕುಟುಂಬದ ಆರ್ಥಿಕ ಸ್ಥಿತಿ ಏರುಪೇರಾಗದಂತೆ ನೋಡಿಕೊಳ್ಳಬೇಕಾದರೆ ಇಂಥ ‘ರೈಡರ್‌’ ಹೊಂದಿರುವುದು ಅಗತ್ಯ.

ಗಂಭೀರ ಕಾಯಿಲೆ ‘ರೈಡರ್‌’ನಲ್ಲೂ ವರ್ಧಿತ (ಎಕ್ಸಲರೇಟೆಡ್) ಮತ್ತು ಹೆಚ್ಚುವರಿ (ಅಡಿಷನಲ್‌) ಎಂಬ ಎರಡು ಆಯ್ಕೆಗಳು ಲಭ್ಯ ಇವೆ. ಎಕ್ಸಲರೇಟೇಡ್ ರೈಡರ್‌ನ ಕಂತು ಕಡಿಮೆ ಇರುತ್ತದೆ. ಯಾಕೆಂದರೆ ಚಿಕಿತ್ಸಾ ವೆಚ್ಚವು ಮೂಲ ಆರೋಗ್ಯ ವಿಮೆಯ ಒಂದು ಭಾಗವಾಗಿರುತ್ತದೆ. ಹೆಚ್ಚುವರಿ ‘ರೈಡರ್‌’ ಇದಕ್ಕಿಮತ ಭಿನ್ನವಾಗಿರುತ್ತದೆ. ಇದರಲ್ಲಿ ಮೂಲ ಪಾಲಿಸಿಯಲ್ಲಿ ನಿಗದಿ ಮಾಡಿರುವ ಮೊತ್ತಕ್ಕಿಂತ ತುಂಬ ಹೆಚ್ಚಿನ ಪರಿಹಾರ ಲಭಿಸುತ್ತದೆ. ವಿಮಾದಾರರು ಅಪಾಯಕಾರಿ ಕಾಯಿಲೆಗೆ ಒಳಗಾದರೆ, ಅವರು ತಿಳಿಸುವ ದೊಡ್ಡ ಮೊತ್ತವನ್ನು ಈ ‘ರೈಡರ್‌’ಗಳು ನೀಡುತ್ತವೆ.

ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಜನರ ಸಾವಿಗೆ ಕಾರಣವಾಗುವ ಅಂಶವೆಂದೆರೆ ರಸ್ತೆ ಅಪಘಾತಗಳು. ಅಪಘಾತದಲ್ಲಿ ಸಾಯುವವರಲ್ಲಿ ಹೆಚ್ಚಿನವರು ಕಡಿಮೆ ವಯಸ್ಸಿನವರು ಇರುತ್ತಾರೆ. ಅದರಲ್ಲೂ ಶೇ 90ರಷ್ಟು ಸಾವುಗಳು ಬಡರಾಷ್ಟ್ರಗಳಲ್ಲೇ ಸಂಭವಿಸುತ್ತವೆ. ಇಂಥ ಸಾವುಗಳಿಂದ ಸಂಭವಿಸಬಹುದಾದ ಆರ್ಥಿಕ ಸಮಸ್ಯೆಯನ್ನು ನಿವಾರಿಸಲು ಇರುವ ಒಂದು ಆಯ್ಕೆ ಎಂದರೆ ಜೀವವಿಮೆಗೆ ‘ಅಪಘಾತ ಮತ್ತು ಆಕಸ್ಮಿಕ ಸಾವು’ ಕುರಿತ ‘ರೈಡರ್‌’ ಜೋಡಿಸಿಕೊಳ್ಳುವುದು. ವಿಮೆದಾರನ ಆಕಸ್ಮಿಕ ಸಾವಿನಿಂದ ಕುಟುಂಬದ ಮೇಲಾಗುವ ಆರ್ಥಿಕ ಆಘಾತವನ್ನು ತಪ್ಪಿಸಲು ಇದು ನೆರವಾಗುತ್ತದೆ.

ಗಂಭೀರ ಕಾಯಿಲೆಗೆ ಒಳಗಾದ ಕಾರಣದಿಂದ ಅಥವಾ ವಿಮಾದಾರನು ಸಾವನ್ನಪ್ಪಿ, ವಿಮೆಯ ಮುಂದಿನ ಕಂತುಗಳನ್ನು ಕಟ್ಟಲಾಗದೆ, ಕುಟುಂಬದವರಿಗೆ ವಿಮೆಯ ಲಾಭವೂ ಸಿಗದಿರುವಂಥ ಘಟನೆಗಳು ಅನೇಕ ಇರುತ್ತವೆ. ಇಂತಹ ಸಂದರ್ಭಗಳು ಬಾರದಂತೆ ವಿಮೆಗೆ ‘ಪ್ರೀಮಿಯಂ ಮನ್ನಾ’ ರೈಡರ್‌ ಸೇರಿಸಿಕೊಳ್ಳಬಹುದು. ವಿಮೆ ಪಾಲಿಸಿದಾರರು ಗಂಭೀರ ಕಾಯಿಲೆಗೆ ಒಳಗಾದರೆ ಅಥವಾ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವರ ವಿಮೆಯ ಮುಂದಿನ ಕಂತುಗಳನ್ನು ಮನ್ನಾ ಮಾಡಲಾಗುತ್ತದೆ. ಆದರೆ ಇದಕ್ಕೆ ಕೆಲವು ನಿಬಂಧನೆಗಳು ಅನ್ವಯವಾಗುತ್ತವೆ.

ಸಾಂಪ್ರದಾಯಿಕ ವಿಮೆ ಅಥವಾ ಯುಲಿಪ್‌ ಆಧಾರಿತ ವಿಮೆಯಲ್ಲಿ ಯಾರಾದರೂ ಹೂಡಿಕೆ ಮಾಡಿದ್ದರೆ ಅಂಥವರು ಆರ್ಥಿಕ ಭದ್ರತೆ ಹೆಚ್ಚಿಸಿಕೊಳ್ಳಲು ವಿಮೆಗೆ ‘ಅವಧಿ ರೈಡರ್‌’ಗಳನ್ನು (ಟರ್ಮ್‌ ರೈಡರ್‌) ಜೋಡಿಸಬಹುದು.

ಯಾಕೆ ಖರೀದಿಸಬೇಕು?

ಒಂದೊಂದು ಉದ್ದೇಶ ಅಥವಾ ಅಗತ್ಯಕ್ಕೆ ಒಂದೊಂದು ವಿಮೆಯನ್ನು ಖರೀದಿಸುವ ಬದಲು ಒಂದು ಮೂಲ ವಿಮೆಯನ್ನು ಖರೀದಿಸಿ ಅದಕ್ಕೆ ತಮ್ಮ ಕುಟುಂಬಕ್ಕೆ ಬೇಕಾದಂತಹ ‘ರೈಡರ್‌’ಗಳನ್ನು ಸೇರಿಸುತ್ತಾ ಹೋಗಬಹುದು. ‘ರೈಡರ್‌’ಗಳನ್ನು ಯಾವ ಪಾಲಿಸಿಗೆ ಬೇಕಾದರೂ, ಯಾವಾಗ ಬೇಕಾದರೂ ಜೋಡಿಸಿಕೊಳ್ಳಬಹುದು. ಇಂಥ ‘ರೈಡರ್‌’ಗಳಿಗೆ ತಗಲುವ ವೆಚ್ಚ ಕಡಿಮೆಯಾಗಿರುವುದರಿಂದ ಕುಟುಂಬದ ಆರ್ಥಿಕ ಭದ್ರತೆಯನ್ನು ಇನ್ನಷ್ಟು ಸದೃಢಗೊಳಿಸಲು ಅತ್ಯುತ್ತಮ ಉತ್ಪನ್ನಗಳಾಗಿ ಇವು ಗೋಚರಿಸುತ್ತವೆ.

(ಲೇಖಕ; ಮ್ಯಾಕ್ಸ್‌ ಲೈಫ್‌ ಇನ್ಶುರೆನ್ಸ್‌ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT