ಹೂಡಿಕೆ: ‘ಯುಲಿಪ್‌’ಗಳ ರೂಪಾಂತರ

7

ಹೂಡಿಕೆ: ‘ಯುಲಿಪ್‌’ಗಳ ರೂಪಾಂತರ

Published:
Updated:

ಮೊಬೈಲ್‌ ಫೋನ್‌ ತಂತ್ರಜ್ಞಾನ ದೇಶಕ್ಕೆ ಮೊದಲ ಬಾರಿಗೆ ಕಾಲಿಟ್ಟ ಕಾಲಘಟ್ಟದಲ್ಲಿ ಬಳಕೆಯಾಗತ್ತಿದ್ದ ಫೋನ್‌ಗಳನ್ನು ನೆನಪಿಸಿಕೊಳ್ಳಿ, ದೊಡ್ಡ ಗಾತ್ರ, ಹೆಚ್ಚು ಭಾರದ ಆ ಕಾಲದ ಫೋನ್‌ಗಳು ಕರೆ ಮಾಡುವುದು ಅಥವಾ ಸ್ವೀಕರಿಸುವುದಕ್ಕಷ್ಟೇ ಬಳಕೆಯಾಗುತ್ತಿದ್ದವು. ಇಂದಿನ ಸ್ಮಾರ್ಟ್‌ ಫೋನ್‌ಗಳನ್ನು ನೋಡಿ. ಅವು ಕರೆ ಮಾಡುವುದಕ್ಕಷ್ಟೇ ಸೀಮಿತವಲ್ಲ, ಬಹೂಪಯೋಗಿಯಾಗಿವೆ. ‘ಮೊಬೈಲೇ ಸರ್ವಸ್ವ’ ಎನ್ನುವ ಕಾಲವಿದು. ಕಾಲಾಂತರದಲ್ಲಿ ಆಗಿರುವ ಬದಲಾವಣೆ ಇದು.

ಮೊಬೈಲ್‌ ಅಷ್ಟೇ ಅಲ್ಲ, ಹಿಂದಿನ ಕಾಲದ ಕಂಪ್ಯೂಟರ್‌ಗಳೂ ಈಗ ಲ್ಯಾಪ್‌ಟಾಪ್‌ಗಳಾಗಿ ಹತ್ತು ಹಲವು ಕೆಲಸಗಳನ್ನು ಮಾಡುತ್ತಿವೆ. ಅಷ್ಟೇ ಏಕೆ, ನಮ್ಮ ಕಾರುಗಳಲ್ಲಿ ಆಗಿರುವ ಬದಲಾವಣೆಯೂ ಅಗಾಧವಾದುದು. ಇಂದು ಯಾವ ವಸ್ತುವೂ ಯಾವುದೋ ಒಂದೇ ಉದ್ದೇಶಕ್ಕೆ ಸೀಮಿತವಾಗಿದೆ ಎನ್ನುವಂತಿಲ್ಲ. ತಂತ್ರಜ್ಞಾನದ ಉನ್ನತೀಕರಣದಿಂದ ಒಂದೊಂದು ವಸ್ತುವೂ ಹತ್ತು ಹಲವು ಕಾರ್ಯಗಳಿಗೆ ಬಳಕೆಯಾಗುವಂತಾಗಿದೆ. ಮನುಷ್ಯನ ಕೆಲಸವನ್ನು ಹಗುರಗೊಳಿಸುತ್ತ ಹೋಗಿವೆ.

ಬದಲಾವಣೆ ಯಾವುದೇ ಇರಲಿ, ಅದರ ಮೂಲ ಉದ್ದೇಶ ‘ಮೌಲ್ಯ ವರ್ಧನೆ’. ಗ್ರಾಹಕನ ಅಗತ್ಯಗಳಿಗೆ ಅನುಗುಣವಾಗಿ ಉತ್ಪನ್ನದಲ್ಲೂ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದು ನಿರಂತರ ಪ್ರಕ್ರಿಯೆ. ಹಣಕಾಸು ಕ್ಷೇತ್ರದ ಉತ್ಪನ್ನಗಳಿಗೂ ಈ ನಿಯಮ ಅನ್ವಯವಾಗುತ್ತದೆ.

ಹಲವು ದಶಕಗಳಿಂದ ಹಣಕಾಸು ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆ ‘ಉಳಿತಾಯ’ ಮಾಡುವ ಸಾಂಪ್ರದಾಯಿಕ ಪದ್ಧತಿಯನ್ನು ಜನರು ಅನುಸರಿಸುತ್ತಿದ್ದರು. ಆದರೆ, ಈಗ ಅದು ಸಂಪೂರ್ಣವಾಗಿ ಬದಲಾಗಿದೆ. ಉಳಿತಾಯದ ಹಣದಿಂದಲೇ ಇನ್ನಷ್ಟು ಸಂಪತ್ತನ್ನು ಸೃಷ್ಟಿಸುವ ಯೋಜನೆಗಳು ಈಗ ರೂಪುಗೊಂಡಿವೆ. ನೀವು ನಿಮ್ಮ ಉಳಿತಾಯದ ಹಣವನ್ನು ಯಾವುದೋ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು ಸುಮ್ಮನಾಗುವುದಿಲ್ಲ. ಬದಲಿಗೆ ಆ ಬ್ಯಾಂಕ್‌ ಕೊಡುವ ಕ್ರೆಡಿಟ್‌ಕಾರ್ಡ್‌, ಸಾಲ ಮುಂತಾದ ಇತರ ಹಲವು ಸೌಲಭ್ಯಗಳನ್ನೂ ಪಡೆಯುತ್ತೀರಿ.

ಜೀವ ವಿಮೆ ಕ್ಷೇತ್ರದಲ್ಲೂ ಇಂಥ ಬದಲಾವಣೆಗಳಾಗಿವೆ. ಹಿಂದೆಲ್ಲ ವಿಮೆ ಎನ್ನುವುದು ಒಂದು ಆರ್ಥಿಕ ಭದ್ರತೆ ನೀಡುವ ಯೋಜನೆಯಾಗಿತ್ತು. ಈಗ ಅದರ ಚಿತ್ರಣವೂ ಬದಲಾಗಿದೆ. ಜೀವ ವಿಮೆಯ ಮೂಲಕವೂ ಸಂಪತ್ತನ್ನು ಸೃಷ್ಟಿಸಬಹುದು. ಇಂದು ವಿಮೆಯೂ ಹೂಡಿಕೆಯ ಒಂದು ಮಾಧ್ಯಮವಾಗಿದೆ. ‘ಯುಲಿಪ್‌’ ಇದಕ್ಕೆ ಉತ್ತಮ ಉದಾಹರಣೆ.

ಹೊಸ ಯುಗದ ‘ಯುಲಿಪ್‌’

2000ದ ದಶಕದ ಆರಂಭದ ಭಾಗದಲ್ಲಿ ಭಾರತದಲ್ಲಿ ಷೇರು ಪೇಟೆ ಮತ್ತು ಮ್ಯೂಚುವಲ್‌ ಫಂಡ್‌ಗೆ ಲಗತ್ತಾದ ಈ ವಿಮೆ ಯೋಜನೆಯನ್ನು (ಯುಲಿಪ್‌ ಎಂದೇ ಪ್ರಚಲಿತ) ಪರಿಚಯಿಸಲಾಗಿತ್ತು. ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡುವಂತೆ ಇಲ್ಲಿ ಕಂತು ರೂಪದಲ್ಲಿ ಹೂಡಿಕೆ ಮಾಡಬಹುದು. ಗ್ರಾಹಕರು ಬಹು ಬೇಗನೆ ಇವುಗಳತ್ತ ಆರ್ಷಿತರಾದರು. ಯುಲಿಪ್‌ ಉದ್ದಿಮೆ ಹಾಗೂ ನಿಯಂತ್ರಣ ಸಂಸ್ಥೆಗಳು ಗ್ರಾಹಕರ ನಿರೀಕ್ಷೆಗಳನ್ನು ಬಹುಬೇಗನೆ ಅರ್ಥಮಾಡಿಕೊಂಡವು. ಇದರ ಪರಿಣಾಮವಾಗಿ ಒಂದು ದಶಕದಲ್ಲಿ ಯುಲಿಪ್‌ಗಳು ಹೂಡಿಕೆದಾರರ ಬೇಡಿಕೆಗಳಿಗೆ ಅನುಗುಣವಾಗಿ ಸಾಕಷ್ಟು ಬದಲಾವಣೆಗಳನ್ನು ಕಂಡಿವೆ. ಅವು ಹೆಚ್ಚು ಸ್ಮಾರ್ಟ್‌, ಹೂಡಿಕೆದಾರ ಸ್ನೇಹಿ ಹಾಗೂ ಹೆಚ್ಚು ಪಾರದರ್ಶಕವಾಗಿವೆ.

ಈಗ ಯುಲಿಪ್‌ಗಳು ಆನ್‌ಲೈನ್‌ ವಿಮೆ ಖರೀದಿ ಸೌಲಭ್ಯವನ್ನೂ ನೀಡಿದ್ದರಿಂದ, ಹೂಡಿಕೆ ಮಾಡುವುದು ಇನ್ನಷ್ಟು ಸುಲಭವಾಗಿದೆ. ಒಂದು ದಶಕದಲ್ಲಿ ಇವು ದೃಢವಾದ ಏರಿಕೆ ದಾಖಲಿಸಿ ಹೂಡಿಕೆದಾರರ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿವೆ.

ಯುಲಿಪ್‌ಗಳಲ್ಲಿ ವಿಮೆಯು ಪಕ್ವವಾದಾಗ, ವಿಮೆಯ ಅವಧಿಯಲ್ಲಿ ಪಾವತಿ ಮಾಡಿದ ‘ವಿಮಾ ವೆಚ್ಚ’ವನ್ನು ಸಂಪೂರ್ಣವಾಗಿ ಮರಳಿಸಲಾಗುತ್ತದೆ. ಇದರಿಂದಾಗಿ ಪಾಲಿಸಿದಾರರು ಪಡೆಯುವ ಮೊತ್ತದಲ್ಲಿ ಏರಿಕೆಯಾಗುತ್ತದೆ. ಈ ಸೌಲಭ್ಯವು ವಿಮೆದಾರರನ್ನು ಈ ಯೋಜನೆಯಿಂದ ವಿಮುಖರಾಗದಂತೆಯೂ ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸೌಲಭ್ಯದಿಂದಾಗಿ ಗ್ರಾಹಕರ ಜೀವವಿಮೆ, ತೆರಿಗೆ ಉಳಿತಾಯ ಹಾಗೂ ಹೂಡಿಕೆ ಈ ಮೂರೂ ಗುರಿಗಳು ಈಡೇರಿದಂತಾಗುತ್ತವೆ.

ಗ್ರಾಹಕರ ಎಲ್ಲ ಅಗತ್ಯಗಳನ್ನೂ ಪೂರೈಸಲು ಎಲ್ಲ ಉತ್ಪನ್ನಗಳೂ ತೀವ್ರ ಸ್ವರೂಪದ ಸ್ಪರ್ಧೆಗೆ ಇಳಿದಿರುವ ಸಂದರ್ಭದಲ್ಲಿ, ನಾವು ಯುಲಿಪ್‌ನಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಯುಲಿಪ್‌ಗಳಲ್ಲೇ ಹೂಡಿಕೆ ಮಾಡಲು ಗ್ರಾಹಕರಿಗೆ ಹತ್ತು ಹಲವು ಕಾರಣಗಳನ್ನು ನೀಡಿದ್ದೇವೆ ಎಂಬುದು ಹೆಮ್ಮೆಯ ವಿಚಾರವಾಗಿದೆ.

(ಲೇಖಕ: ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶೂರೆನ್ಸ್‌ ಸಂಸ್ಥೆಯ ವಿಮೆ ವಿಶ್ಲೇಷಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !