ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಅಗತ್ಯಗಳು ಭಿನ್ನವಲ್ಲವೇ?

Last Updated 16 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

‘ಸ್ನೇಹಿತ ಅಥವಾ ಪಕ್ಕದ ಮನೆಯವರು ಧರಿಸಿರುವಂಥದ್ದೇ ಉಡುಪನ್ನು ನಾನೂ ಧರಿಸಬೇಕು’ ಎಂದು ನಿಮಗೆ ಎಂದಾದರೂ ಅನ್ನಿಸಿದೆಯೇ, ಇಲ್ಲವಲ್ಲ? ಜನರು ಧರಿಸುವ ಉಡುಪಿನ ಅಳತೆ ಮಾತ್ರವಲ್ಲ, ಅಭಿರುಚಿ, ಆಯ್ಕೆಗಳೂ ಬೇರೆಬೇರೆಯಾಗಿರುತ್ತವೆ. ಮುಖ್ಯವಾಗಿ ಪ್ರತಿಯೊಬ್ಬನೂ, ‘ನಾನು ಇತರರಿಗಿಂತ ಭಿನ್ನವಾಗಿ ಕಾಣಿಸಬೇಕು’ ಎಂದು ಬಯಸುತ್ತಾನೆ. ಆದರೆ ಹಣ ಹೂಡಿಕೆಯ ವಿಚಾರಕ್ಕೆ ಬಂದಾಗ ಮಾತ್ರ, ‘ನನ್ನ ಅಪ್ಪ ಅವಧಿ ಠೇವಣಿ ಮಾಡುತ್ತಿದ್ದರು, ನಾನೂ ಅದನ್ನೇ ಮಾಡಬೇಕು, ಪಕ್ಕದ ಮನೆಯವರು ಮಾಡಿಸಿದ ವಿಮೆಯನ್ನೇ ನಾನೂ ಮಾಡಿಸಬೇಕು, ಸ್ನೇಹಿತರು ಹೂಡಿಕೆ ಮಾಡಿರುವ ಮ್ಯೂಚುವಲ್‌ ಫಂಡ್‌ನಲ್ಲೇ ನಾನು ಹೂಡಿಕೆ ಮಾಡಬೇಕು’ ಎಂದು ಬಯಸುವುದೇಕೆ? ನಾವು ನಮ್ಮ ಅಭಿರುಚಿ, ಅಳತೆಗೆ ಸರಿಯಾಗಿ ವಸ್ತ್ರಗಳನ್ನು ಹೊಲಿಸುವಂತೆಯೇ ನಮ್ಮ ಹೂಡಿಕೆಯೂ ನಮ್ಮ ಅಗತ್ಯಗಳಿಗೆ ತಕ್ಕಂತೆ ಇರಬೇಕು. ಇನ್ನೊಬ್ಬರಿಗೆ ಸೂಕ್ತವಾಗಿರುವ ಹೂಡಿಕಾ ವಿಧಾನವು ನಮಗೂ ಸೂಕ್ತವಾಗಿರಬೇಕೆಂದಿಲ್ಲ.

ನಿಮ್ಮ ಹೂಡಿಕೆ ಹೇಗಿರಬೇಕು ಎಂಬ ಬಗ್ಗೆ ಒಂದಿಷ್ಟು ಸಲಹೆಗಳು ಇಲ್ಲಿವೆ:

ನಿಮ್ಮ ಗುರಿಗಳೇ ಬೇರೆ:
ನಮ್ಮ ಸ್ನೇಹಿತರು, ಸಹೋದ್ಯೋಗಿಗಳು ಆಡುವ ಮಾತುಗಳು ಮತ್ತು ಅವರ ಅನುಭವಗಳು ಸಹಜವಾಗಿ ನಮ್ಮ ಮೇಲೆ ಪರಿಣಾಮ ಉಂಟುಮಾಡುತ್ತವೆ. ಯಾವುದಾದರೂ ಒಂದು ಫಂಡ್‌ ಭಾರಿ ಪ್ರಮಾಣದಲ್ಲಿ ಗಳಿಕೆ ತಂದುಕೊಟ್ಟಿದೆ ಎಂದು ಸ್ನೇಹಿತರೊಬ್ಬರು ಹೇಳಿದಾಗ, ಯಾವುದೋ ಫಂಡ್‌ನಲ್ಲಿ ಮಾಡಿದ ಹೂಡಿಕೆಯಿಂದ ಏನೇನೂ ಲಾಭವಾಗಿಲ್ಲ ಎಂದಾಗ ಅಥವಾ ಇನ್ಯಾರೋ ಗೆಳೆಯರು ‘ಅವಧಿ ಠೇವಣಿಯು ಒತ್ತಡರಹಿತ ಮತ್ತು ಸುರಕ್ಷಿತ ಹೂಡಿಕಾ ವಿಧಾನ’ ಎಂದಾಗ ನಮ್ಮಲ್ಲೂ ಗೊಂದಲಗಳು ಆರಂಭವಾಗುತ್ತವೆ. ಇಂಥ ಹತ್ತಾರು ಅಭಿಪ್ರಾಯಗಳು ಬೇರೆಬೇರೆ ದಿಕ್ಕುಗಳಿಂದ ಬರುತ್ತಲೇ ಇರುತ್ತವೆ. ಇಂಥ ಅಭಿಪ್ರಾಯಗಳ ಆಧಾರದಲ್ಲಿ ಹೂಡಿಕೆ ಮಾಡುವುದು ಸರಿಯಲ್ಲ.

‘ನನ್ನ ಗುರಿ ಇತರರಿಗಿಂತ ಹೇಗೆ ಭಿನ್ನ’ ಎಂಬ ಪ್ರಶ್ನೆ ಸಹಜವಾಗಿ ಮೂಡಬಹುದು. ಮಕ್ಕಳ ಶಿಕ್ಷಣ, ನಿಮ್ಮ ನಿವೃತ್ತಿ ಯೋಜನೆ ಅಥವಾ ಒಂದಿಷ್ಟು ಹಣವನ್ನು ಕೂಡಿಡುವ ಉದ್ದೇಶದ ಹೂಡಿಕೆಗಳ ವಿಚಾರದಲ್ಲಿ ಬಹುತೇಕ ಎಲ್ಲರ ಗುರಿಯೂ ಒಂದೇ ಆಗಿರಬಹುದು. ಆದರೆ ಅವಲಂಬಿತರ ವಿಚಾರದಲ್ಲಿ ನಿಮಗೂ ಇತರರಿಗೂ ವ್ಯತ್ಯಾಸಗಳಿಲ್ಲವೇ? ನಿಮ್ಮ ಸ್ನೇಹಿತರು ಅಥವಾ ನೆರೆಕರೆಯವರ ಮಕ್ಕಳು ಹೋಗುವ ಶಾಲೆಗೇ ನಿಮ್ಮ ಮಕ್ಕಳನ್ನೂ ಕಳುಹಿಸುವಿರೇ? ನಿಮ್ಮ ಜೀವನಶೈಲಿಯೂ ಅವರ ಜೀವನಶೈಲಿಯಂತೆಯೇ ಇದೆಯೇ..?

ನಿಮ್ಮ ಗುರಿಯು ಇತರರಿಗಿಂತ ಭಿನ್ನವಾದುದು ಎಂಬುದನ್ನು ಸಾರಿ ಹೇಳಲು ಇಂಥ ಅನೇಕ ಕಾರಣಗಳಿರುತ್ತವೆ. ನೀವು ಎಷ್ಟು ಹಣ ಹೂಡಿಕೆ ಮಾಡಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎಂಬುದನ್ನೆಲ್ಲ ಇಂಥ ವಿಚಾರಗಳ ಆಧಾರದಲ್ಲಿ ಮಾಡಬೇಕು. ನೀವು 35ನೇ ವಯಸ್ಸಿನಲ್ಲೇ ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿರಬಹುದು. ಆದರೆ ನಿಮ್ಮ ಸ್ನೇಹಿತರು ಅದನ್ನು 45ನೇ ವಯಸ್ಸಿನಲ್ಲಿ ಆರಂಭಿಸಿರಬಹುದು. ಇಂಥ ಸಂದರ್ಭದಲ್ಲಿ ದೀರ್ಘಾವಧಿಯ ಹೂಡಿಕೆಯಿಂದ ನೀವು ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ.

ನಷ್ಟ ತಾಳಿಕೆಯ ಶಕ್ತಿ:
ನಮ್ಮ ಗುರಿಗಳಂತೆಯೇ ನಷ್ಟ ತಾಳಿಕೆಯ ಶಕ್ತಿಯಲ್ಲೂ ವ್ಯತ್ಯಾಸಗಳಿರುತ್ತವೆ. ಅಂದರೆ, ನಷ್ಟದ ಭಯದಿಂದ ಕೆಲವು ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತೀರಿ ಎಂದು ನಾನು ಹೇಳುತ್ತಿಲ್ಲ. ಬದಲಿಗೆ, ನೀವು ಎಷ್ಟು ಸಾಲವನ್ನು ಹೊಂದಿದ್ದೀರಿ, ಏನೇನು ಹಣಕಾಸು ಬದ್ಧತೆಗಳಿವೆ ಮುಂತಾದ ಅಂಶಗಳನ್ನು ಹೂಡಿಕೆಯ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ನೀವು ಎಷ್ಟು ಅಪಾಯಗಳನ್ನು ಎದುರಿಸಬಲ್ಲಿರಿ ಎಂಬುದನ್ನು ಈ ವಿಚಾರಗಳು ನಿರ್ಧರಿಸುತ್ತವೆ. ನಿಮ್ಮ ಸ್ನೇಹಿತರಿಗೆ ವಂಶಪಾರಂಪರ್ಯವಾಗಿ ಬಂದ ಆಸ್ತಿ ಇರಬಹುದು. ಆದರೆ ನಿಮ್ಮ ವಿಚಾರದಲ್ಲಿ ಹಾಗೇ ಇರಬೇಕೆಂದಿಲ್ಲ. ನಿಮಗೆ ಬೇಕಾದ ಹಣವನ್ನು ನೀವೇ ದುಡಿದು ಸಂಪಾದಿಸಬೇಕಾದ ಒತ್ತಡ ಇರಬಹುದು.

ಹೂಡಿಕೆಯ ವಿಧಾನವೂ ಬೇರೆ ಇರಲಿ:
ಹೂಡಿಕೆಗೆ ಅನುಸರಿಸುವ ವಿಧಾನದಲ್ಲೂ ಇತರರನ್ನು ಅನುಸರಿಸದಿರುವುದೇ ಒಳಿತು. ಸಿಪ್‌ (ಎಸ್‌ಐಪಿ) ಮೂಲಕ ಪ್ರತಿ ತಿಂಗಳ ಒಂದೇ ದಿನಾಂಕದಂದು ಹೂಡಿಕೆ ಮಾಡುವ ಬದಲು ಬೇರೆ ಬೇರೆ ದಿನಗಳಂದು ಹೂಡಿಕೆ ಮಾಡುವುದರಿಂದ ಷೇರುಪೇಟೆಯ ಏರುಪೇರುಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ. ಆದರೆ ನಿಮಗೆ ನಿಮ್ಮ ವೆಚ್ಚಗಳ ಮೇಲೆ ಸಂಪೂರ್ಣ ನಿಯಂತ್ರಣ ಇಲ್ಲದಿದ್ದರೆ, ಮಾಸಾಂತ್ಯದಲ್ಲಿ ಹೂಡಿಕೆಯ ದಿನ ಬಂದಾಗ ಖಾತೆಯಲ್ಲಿ ಹಣವೇ ಇಲ್ಲದಾಗಬಹುದು. ಅದಕ್ಕಾಗಿ, ತಿಂಗಳ ಮೊದಲ ವಾರದಲ್ಲಿ ಖಾತೆಯಲ್ಲಿ ಹಣವಿರುವುದು ಖಚಿತ ಎಂದಾದರೆ ಆ ವಾರದಲ್ಲೇ ಹೂಡಿಕೆಯ ಆಯ್ಕೆ ಮಾಡುವುದು ಸೂಕ್ತ. ಬೇರೆ ಬೇರೆ ದಿನಗಳಲ್ಲಿ ಹೂಡಿಕೆ ಮಾಡುವುದು ಅಥವಾ ಒಂದೇ ದಿನದಲ್ಲಿ ಹೂಡಿಕೆ ಮಾಡುವುದರಿಂದ ಆಗುವ ವ್ಯತ್ಯಾಸ ಅತ್ಯಲ್ಪ.

ನಿಮ್ಮ ಖರ್ಚುವೆಚ್ಚಗಳಿಗೆ ‘ಸಿಪ್‌’ ಹೂಡಿಕಾ ವಿಧಾನ ಸರಿಹೊಂದುವುದಿಲ್ಲ ಎಂದಾದರೆ ಎಸ್‌ಟಿಪಿ, ಎಸ್‌ಡಬ್ಲ್ಯುಪಿ ಯೋಜನೆಗಳನ್ನೂ ಆಯ್ಕೆ ಮಾಡಿಕೊಳ್ಳಬಹುದು.

‘ಸ್ನೇಹಿತರು ಆಯ್ಕೆ ಮಾಡಿಕೊಂಡ ಯೋಜನೆ’ ಎಂಬ ಒಂದೇ ಕಾರಣಕ್ಕೆ ನೀವೂ ಅದೇ ಯೋಜನೆಯನ್ನು ಹೂಡಿಕೆಗಾಗಿ ಆಯ್ಕೆ ಮಾಡುಕೊಳ್ಳುವುದು ಸೂಕ್ತವೆನಿಸಲಾರದು. ಹೂಡಿಕೆಯ ಸಂದರ್ಭದಲ್ಲಿ ಮೇಲೆ ತಿಳಿಸಿದ ಎಲ್ಲ ಅಂಶಗಳನ್ನೂ ಅಳೆದು ತೂಗಿ, ಸರಿಯಾದ್ದನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಕು. ಅದರಿಂದ ಮಾತ್ರ ಗರಿಷ್ಠ ಲಾಭ ಮಾಡಿಕೊಳ್ಳಲು ಸಾಧ್ಯ. ಹೂಡಿಕೆಯ ವಿಚಾರದಲ್ಲಿ ನೀವು ಸರಿದಾರಿಯಲ್ಲಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ಇಂದೇ ನಿಮ್ಮ ಸಲಹೆಗಾರರನ್ನು ಭೇಟಿಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT