ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2025ರಲ್ಲಿ IT ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗ: ಶೇ 8.5ರ ದರದಲ್ಲಿ ವೃದ್ಧಿ– ವರದಿ

Published 8 ಆಗಸ್ಟ್ 2024, 11:02 IST
Last Updated 8 ಆಗಸ್ಟ್ 2024, 11:02 IST
ಅಕ್ಷರ ಗಾತ್ರ

ಮುಂಬೈ: ‘ಮಾರುಕಟ್ಟೆಯಲ್ಲಿ ಸದ್ಯ ಎದುರಾಗಿರುವ ಸವಾಲುಗಳನ್ನು ಮೆಟ್ಟಿ ನಿಂತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರವು, 2025ರಲ್ಲಿ ಶೇ 8.5ರ ವೃದ್ಧಿ ದರದಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಭಲವಾಗಿದೆ’ ಎಂದು ವರದಿಯೊಂದು ಗುರುವಾರ ಹೇಳಿದೆ.

‘ರಿಕ್ರೂಟ್ ಹೋಲ್ಡಿಂಗ್ಸ್’ ಎಂಬ ನೇಮಕಾತಿ ಕಂಪನಿ ವರದಿಯನ್ನು ಬಿಡುಗಡೆ ಮಾಡಿದ್ದು 

‘ಕಳೆದ ವರ್ಷ ಐಟಿ ಕ್ಷೇತ್ರವು ಮಂದಗತಿಯ ಬೆಳವಣಿಗೆ ದಾಖಲಿಸಿತ್ತು. ಇದು ಈ ವರ್ಷದ ಆರಂಭದವರೆಗೂ ಮುಂದುವರಿಯಿತು. ಆದರೆ ಈಗ ಐಟಿ ಕ್ಷೇತ್ರದಲ್ಲಿ ಕೌಶಲ ಭರಿತ ತಂತ್ರಜ್ಞರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಮುಂದಿನ ವರ್ಷದ ಹೊತ್ತಿಗೆ ನುರಿತ ತಂತ್ರಜ್ಞರಿಗೆ ಉತ್ತಮ ಅವಕಾಶಗಳು ಸಿಗಲಿವೆ’ ಎಂದು ಹೇಳಿದೆ.

ಸದ್ಯ ಖಾಲಿ ಇರುವ ಉದ್ಯೋಗಗಳಲ್ಲಿ ಶೇ 70ರಷ್ಟು ಸಾಫ್ಟ್‌ವೇರ್‌ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್‌ ಹಾಗೂ ಬ್ಲಾಕ್‌ಚೈನ್ ಕ್ಷೇತ್ರದಲ್ಲಿನ ಕ್ಷಿಪ್ರ ಕ್ರಾಂತಿಯಿಂದಾಗಿ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ತಂತ್ರಾಂಶ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ತಂತ್ರಜ್ಞರ ಅಗತ್ಯ ಇದ್ದು, ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಎಂದೆನ್ನಲಾಗಿದೆ.

‘ಐಟಿ ಕ್ಷೇತ್ರದಲ್ಲಿನ ಕೆಲವೊಂದು ಸ್ಟಾರ್ಟ್ಅಪ್‌ಗಳೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಯೂ ಡೆವಲಪರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪ್ಲಿಕೇಷನ್ ಡೆವಲಪರ್‌, ಸಾಫ್ಟ್‌ವೇರ್ ಎಂಜಿನಿಯರ್, ಫುಲ್‌ ಸ್ಟಾಕ್ ಡೆವಲಪರ್, ಸೀನಿಯರ್ ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಪಿಎಚ್‌ಪಿ ಡೆವಲಪರ್‌ಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಇದರೊಂದಿಗೆ ಎನ್‌ಇಟಿ ಡೆವಲಪರ್ಸ್‌, ಸಾಫ್ಟ್‌ವೇರ್ ಆರ್ಕಿಟೆಕ್ಟ್ಸ್‌, ಡೆವಾಪ್ಸ್‌ ಎಂಜಿನಿಯರ್ಸ್‌, ಡಾಟಾ ಎಂಜಿನಿಯರ್ಸ್‌ ಹಾಗೂ ಫ್ರಂಟ್ ಎಂಡ್‌ ಡೆವಲಪರ್ಸ್‌ಗಳಿಗೂ ಬೇಡಿಕೆ ಹೆಚ್ಚಾಗಲಿದೆ. ಈ ನೇಮಕಾತಿಗಳೊಂದಿಗೆ ಅಪ್‌ಡೇಟ್ಸ್‌, ಸೆಕ್ಯುರಿಟಿ ಪ್ಯಾಚಸ್ ಹಾಗೂ ಹಾಲಿ ಇರುವ ತಂತ್ರಾಂಶಗಳಿಗೆ ಹೊಸ ಸೌಕರ್ಯ ಅಳವಡಿಸುವ ಕೆಲಸಗಳೂ ಬೆಳವಣಿಗೆ ಕಾಣಲಿವೆ. ತಂತ್ರಜ್ಞಾನ ಆಧುನಿಕತೆಗೊಳ್ಳುತ್ತಾ ಸಾಗಿದಂತೆ, ಅದಕ್ಕೆ ತಕ್ಕಂತ ಕೌಶಲಭರಿತ ತಂತ್ರಜ್ಞರಿಗೆ ಬೇಡಿಕೆಯೂ ಹೆಚ್ಚಾಗುತ್ತಾ ಸಾಗಲಿದೆ’ ಎಂದು ಅಂದಾಜಿಸಲಾಗಿದೆ.

‘ಸದ್ಯದ ಪರಿಸ್ಥಿತಿಯಲ್ಲಿ ಐಟಿ ಕ್ಷೇತ್ರವನ್ನು ಉದ್ಯೋಗಾವಕಾಶದ ಶಕ್ತಿ ಕೇಂದ್ರ ಕರೆಯಲಾಗುತ್ತಿದೆ. ಆದರೆ ಇತ್ತೀಚೆಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಈ ಕ್ಷೇತ್ರದ ನೇಮಕಾತಿ ಕುಂಠಿತಗೊಂಡಿದೆ. ಜಾಗತಿಕ ಅಸ್ತಿರತೆ ಮತ್ತು ಆರ್ಥಿಕತೆಯ ಅನಿಶ್ಚತತೆಯಿಂದಾಗಿ ಹೀಗಾಗುತ್ತಿದೆ ಎಂದು ಕಂಪನಿಗಳು ಹೇಳುತ್ತಿವೆ. ಆದರೆ ಈಗ ಗಾಳಿ ತನ್ನ ದಿಕ್ಕನ್ನು ಬದಲಿಸಿದೆ. ಕಂಪನಿಗಳು ಈಗ ತಮ್ಮ ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಿವೆ. ಇದರಲ್ಲಿ ಗ್ಲೋಬಲ್ ಕೇಪಬಿಲಿಟಿ ಸೆಂಟರ್‌ (ಜಿಸಿಸಿ) ನಿರ್ಣಾಯಕ ಪಾತ್ರ ವಹಿಸಲಿದೆ’ ಎಂದು ಇಂಡೀಡ್‌ ಇಂಡಿಯಾದ ಮುಖ್ಯಸ್ಥ ಶಶಿ ಕುಮಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT