ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ರಿಟರ್ನ್ಸ್‌ಗೆ ಆ.31 ಕಡೆ ದಿನ: ಫಾರಂ–16 ಹಾಗೂ ತೆರಿಗೆ ಕಡಿತದ ಮಾಹಿತಿ ಇದು

Last Updated 25 ಆಗಸ್ಟ್ 2019, 11:31 IST
ಅಕ್ಷರ ಗಾತ್ರ

ಆದಾಯ ತೆರಿಗೆ ಸಲ್ಲಿಕೆಗೆ ಆಗಸ್ಟ್‌ 31 ಕೊನೆಯ ದಿನ. ಐಟಿ ರಿಟರ್ನ್ಸ್‌ ತುಂಬಲು ಬೇಕಾಗಿರುವಫಾರಂ–16 ಹಾಗೂ ತೆರಿಗೆ ಕಡಿತದ ಉಪಯುಕ್ತ ಮಾಹಿತಿಯ ವಿವರಣೆ ಇಲ್ಲಿದೆ.

ಐಟಿ ರಿಟರ್ನ್ಸ್ ಸಲ್ಲಿಸಬೇಕಾದರೆ ‘ಫಾರಂ-16’ ಬೇಕೇ ಬೇಕು. ಆದರೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಸೇರುವುದು ಸೇರಿ ಹಲವು ಕಾರಣಗಳಿಂದ ಕೆಲವರಿಗೆ ಸಕಾಲದಲ್ಲಿ ಫಾರಂ-16 ಸಿಕ್ಕಿರುವುದಿಲ್ಲ. ಇಂತಹ ಸಮಯದಲ್ಲಿ ಐ.ಟಿ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವೇ ಎನ್ನುವ ಸಂದೇಹಕ್ಕೆ ವಿವರ ಇಲ್ಲಿದೆ.

ಫಾರಂ-16 ಎಂದರೇನು:ಕಂಪನಿಗಳ ಮಾಲೀಕರು ಉದ್ಯೋಗಿಗೆ ಕಡ್ಡಾಯವಾಗಿ ನೀಡಬೇಕಾದ ಮಹತ್ವದ ದಾಖಲೆಯೇ ಫಾರಂ-16. ಉದ್ಯೋಗಿಯ ವಾರ್ಷಿಕ ಆದಾಯ, ಖರ್ಚು, ಉಳಿತಾಯ ಸೇರಿ ಮೂಲದಲ್ಲೇ ತೆರಿಗೆ ಕಡಿತದ (ಟಿಡಿಎಸ್) ವಿವರವನ್ನು ಇದು ಒಳಗೊಂಡಿರುತ್ತದೆ.

ಫಾರಂ-16 ಅನ್ನು ಕಡ್ಡಾಯವಾಗಿ ಎಲ್ಲಾ ಕಂಪನಿಗಳು ಮಾಜಿ ಅಥವಾ ಹಾಲಿ ಉದ್ಯೋಗಿಗಳಿಗೆ ನಿಗದಿತ ಸಮಯದೊಳಗೆ ಒದಗಿಸಬೇಕು ಎಂಬ ನಿಯಮವಿದೆ. ನಿಯಮಾನುಸಾರ ನಡೆದುಕೊಳ್ಳದ ಕಂಪನಿಗಳಿಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಫಾರಂ-16 ಇಲ್ಲದಿದ್ದರೆ..?: ವಾಸ್ತವದಲ್ಲಿ ಫಾರಂ-16 ಇಲ್ಲದೆಯೂ ಐಟಿ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿದೆ. ಮೊದಲಿಗೆ ಆ ನಿಗದಿತ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ಬಂದಿರುವ ಒಟ್ಟು ಆದಾಯವನ್ನು ಲೆಕ್ಕಹಾಕಬೇಕು. ವೇತನದಿಂದ ಬಂದಿರುವ ಆದಾಯ ಲೆಕ್ಕ ಹಾಕಲು ಸ್ಯಾಲರಿ ಸ್ಲಿಪ್ (ವೇತನ ಮಾಹಿತಿ ಪತ್ರ) ನೆರವಾಗುತ್ತದೆ. ಒಟ್ಟು ಆದಾಯ ಲೆಕ್ಕ ಹಾಕಿದ ಮೇಲೆ, ಅದರಲ್ಲಿ ತೆರಿಗೆಗೆ ಒಳಪಡುವ ಮೊತ್ತ ಎಷ್ಟು ಎನ್ನುವುದನ್ನು ಅರಿಯಬೇಕು.

ನಂತರದಲ್ಲಿ ಆರೋಗ್ಯ ವಿಮೆ, ಜೀವ ವಿಮೆ, ಸುಕನ್ಯಾ ಸಮೃದ್ಧಿ, ಸೇರಿ ತೆರಿಗೆ ಉಳಿತಾಯಕ್ಕೆ ನೆರವಾಗುವಂತಹ ಎಲ್ಲ ಹೂಡಿಕೆಗಳ ಮಾಹಿತಿ ಕಲೆಹಾಕಬೇಕು. ಬಾಡಿಗೆ ಮನೆಯಲ್ಲಿ ವಾಸವಿದ್ದರೆ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)ಯನ್ನು ತೆರಿಗೆ ಆದಾಯದಲ್ಲಿ ಕಡಿತಗೊಳಿಸಬೇಕು. ನಿಯಮದಂತೆ ಇರುವ ಎಲ್ಲ ವಿನಾಯಿತಿಗಳನ್ನೂ ಪಡೆದುಕೊಳ್ಳಬೇಕು. ನಿಮ್ಮ ಸ್ಯಾಲರಿ ಸ್ಲಿಪ್ ಪ್ರಕಾರ ಎಷ್ಟು ಟಿಡಿಎಸ್ (ಫಾರಂ-26ಎಎಸ್ ನಲ್ಲಿ ತೆರಿಗೆ ಕಡಿತದ ಮಾಹಿತಿ ಸಿಗುತ್ತದೆ) ಕಡಿತಗೊಳಿಸಿದ್ದಾರೆ ಎನ್ನುವುದನ್ನು ಅರಿತುಕೊಳ್ಳಬೇಕು. ನಂತರದಲ್ಲಿ ಆದಾಯವು ತೆರಿಗೆ ವಿನಾಯಿತಿ ವ್ಯಾಪ್ತಿಯನ್ನು ದಾಟಿದ್ದರೇ, ಹೆಚ್ಚುವರಿ ತೆರಿಗೆ ಪಾವತಿಸಿ ಅಂತಿಮವಾಗಿ ಐಟಿ ರಿಟರ್ನ್ಸ್‌ ಸಲ್ಲಿಸಬೇಕು.

ತಡವಾಗಿ ಫಾರಂ-16 ಸಿಕ್ಕರೆ ಏನು ಮಾಡಬೇಕು?:ನೀವು ಈಗಾಗಲೇ ಫಾರಂ-16 ಇಲ್ಲದೆ ಐಟಿ ರಿಟರ್ನ್ಸ್ ಸಲ್ಲಿಸಿದ್ದು , ಫಾರಂ 16 ನಲ್ಲಿರುವ ಮಾಹಿತಿಗೂ ನೀವು ಐಟಿ ರಿಟರ್ನ್ಸ್ ಸಲ್ಲಿಸಿರುವುದಕ್ಕೂ ಕೆಲ ವ್ಯತ್ಯಾಸಗಳು ಕಂಡುಬಂದರೆ ನೀವು ಐಟಿ ರಿಟರ್ನ್ಸ್ ಅನ್ನು ಪರಿಷ್ಕರಿಸಬಹುದು. ಆದರೆ ಪರಿಷ್ಕರಣೆಯನ್ನು ನೀವು ಮಾರ್ಚ್ 2020 ರ ಒಳಗೆ ಮಾಡಬೇಕು.

ಎರಡು ಫಾರಂ-16 ಇದ್ದರೂ ಫೈಲಿಂಗ್ ಸಾಧ್ಯ:ಇತ್ತೀಚಿನ ದಿನಗಳಲ್ಲಿ ಒಂದು ವರ್ಷದಲ್ಲಿ ಎರಡರಿಂದ ಮೂರು ಬಾರಿ ಕೆಲಸ ಬದಲಿಸುವುದು ಸಾಮಾನ್ಯ ಸಂಗತಿ. ಹೆಚ್ಚಿನ ವೇತನ, ಹೆಚ್ಚಿನ ಸೌಲಭ್ಯ, ಬಡ್ತಿ ಮುಂತಾದ ಕಾರಣಗಳಿಗಾಗಿ ಉದ್ಯೋಗ ಬದಲಾಗುತ್ತಿರುತ್ತದೆ. ಆದರೆ ಐಟಿ ರಿಟರ್ನ್ಸ್ ಸಲ್ಲಿಸಲು ಇದರಿಂದ ಯಾವುದೇ ಸಮಸ್ಯೆ ಇಲ್ಲ. ಎರಡು ಕಂಪನಿಗಳ ಫಾರಂ-16 ಪಡೆದುಕೊಂಡು, ಆ ನಿಗದಿತ ಆರ್ಥಿಕ ವರ್ಷದ ಒಟ್ಟಾರೆ ಆದಾಯವನ್ನು ಗಣನೆಗೆ ತೆಗೆದುಕೊಂಡು ರಿಟರ್ನ್ಸ್ ಸಲ್ಲಿಸಬಹುದು.

ತೆರಿಗೆ ಕಡಿತ ತಗ್ಗಿಸುವ ಕ್ರಮಗಳು

ಬಡ್ಡಿ ಆದಾಯಕ್ಕೆ ಟಿಡಿಎಸ್ ನಿಯಮಗಳೇನು?
ಆರ್ಥಿಕ ವರ್ಷ 2019-20 ರಿಂದ ಅನ್ವಯವಾಗುವಂತೆ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ನೀವು ಯಾವುದೇ ಬ್ಯಾಂಕ್‌ನಿಂದ ನಿಶ್ಚಿತ ಠೇವಣಿ, ಚಾಲ್ತಿ ಠೇವಣಿ ಅಥವಾ ಯಾವುದೇ ಕಂಪನಿಯ ಠೇವಣಿ ಇತ್ಯಾದಿಗಳ ಮೇಲೆ ಪ್ರತ್ಯೇಕವಾಗಿ ಪಡೆಯುವ ಒಟ್ಟಾರೆ ವಾರ್ಷಿಕ ಬಡ್ಡಿ ₹ 40,000 ಗಳಿಗಿಂತ ಅಧಿಕ ಮೊತ್ತವಾಗಿದ್ದರೆ, ಅದಕ್ಕೆ ಆಯಾ ಬ್ಯಾಂಕ್ ಅಥವಾ ಸಂಸ್ಥೆಯವರು ತೆರಿಗೆ ಕಡಿತಗೊಳಿಸಬೇಕಾಗುತ್ತದೆ.

ಈ ಹಿಂದಿನ ವರ್ಷಗಳಲ್ಲಿದ್ದ ವಿನಾಯ್ತಿ ಮಿತಿಯನ್ನು ₹ 10,000 ದಿಂದ ₹ 40,000 ಕ್ಕೆ ಏರಿಸಲಾಗಿದೆ. ಇದರಿಂದ ಸಣ್ಣ ಹೂಡಿಕೆದಾರರಿಗೆ ಹಾಗೂ ಆರ್ಥಿಕವಾಗಿ ಅಷ್ಟೊಂದು ಸಬಲರಲ್ಲದ ಜನ ವರ್ಗಕ್ಕೆ ತೆರಿಗೆಯ ರೂಪದಲ್ಲಿ ಕಡಿತವಾಗುವ ದೊಡ್ದ ಹೊರೆಯನ್ನು ತಗ್ಗಿಸಿದಂತಾಗಿದೆ.

ಒಂದುವೇಳೆ ಈ ರೀತಿ ಕಡಿತಗೊಳಿಸಿದ ಮೊತ್ತ ವರ್ಷದ ಕೊನೆಗೆ ತೆರಿಗೆ ಲೆಕ್ಕ ಹಾಕುವಾಗ ಅಧಿಕವೆಂದು ಕಂಡುಬಂದರೆ ಪರಿಣತ ತೆರಿಗೆ ಸಲಹೆಗಾರರ ಸಹಾಯ ಪಡೆದು ತಮ್ಮ ಅಲ್ಪ ಆದಾಯವನ್ನೂ ತೆರಿಗೆ ಇಲಾಖೆಗೆ ರಿಟರ್ನ್ಸ್ ಮೂಲಕ ಸಲ್ಲಿಸಿ , ಕಡಿತಗೊಂಡ ಮೊತ್ತವನ್ನು ತೆರಿಗೆ ಇಲಾಖೆಯಿಂದಲೇ ಹಿಂದೆ ಪಡೆಯಬೇಕಾಗುತ್ತದೆ.

ಇದಕ್ಕಾಗಿ ಒಂದಿಷ್ಟು ಸಮಯ ಹಾಗೂ ಅನಗತ್ಯ ವೆಚ್ಚ ಮಾಡಬೇಕಾಗುತ್ತದೆ. ಇಂಥ ವೃಥಾ ಶ್ರಮವನ್ನು ತಗ್ಗಿಸುವ ಉದ್ದೇಶದಿಂದ, ಸರ್ಕಾರವು ಮಧ್ಯಮವರ್ಗದ ಜನರು ಹಣಕಾಸಿನ ಇಕ್ಕಟ್ಟಿನಲ್ಲಿ ಸಿಲುಕಬಾರದೆಂದು ಕಾನೂನಿನಲ್ಲಿ ಕೆಲವೊಂದು ಅನುಕೂಲಕರ ಅಂಶಗಳನ್ನು ಅಳವಡಿಸಿಕೊಂಡಿದೆ.

ಯಾರಿಗೆ ಫಾರಂ 15ಜಿ ಹಾಗೂ 15ಎಚ್‌
ತೆರಿಗೆದಾರ 60 ವರ್ಷದೊಳಗಿನ ವ್ಯಕ್ತಿಗಳಾಗಿದ್ದು, ಎಲ್ಲ ಮೂಲಗಳಿಂದ ಬರುವ ಒಟ್ಟು ಬಡ್ಡಿ ಆದಾಯವೂ ಸೇರಿ ತಮ್ಮ ಒಟ್ಟು ನಿವ್ವಳ ಆದಾಯ ₹ 2.50 ಲಕ್ಷಗಳಿಗಿಂತ ಕಡಿಮೆ ಇದ್ದು ನಿರೀಕ್ಷಿತ ತೆರಿಗೆ ಶೂನ್ಯವಾಗಿದ್ದರೆ, ಫಾರಂ 15ಜಿ ತುಂಬಿಬಿಟ್ಟು ಬ್ಯಾಂಕ್‌ಗಳಿಗೆ ಕೊಡಬೇಕಾಗುತ್ತದೆ. ಈ ಸ್ವಯಂ ಘೋಷಿತ ದಾಖಲೆಯ ಆಧಾರದ ಮೇಲೆ ಬ್ಯಾಂಕ್‍ಗಳು ತೆರಿಗೆ ಕಡಿತಗೊಳಿಸುವ ಅಗತ್ಯವಿರುವುದಿಲ್ಲ.

ಅದೇ ರೀತಿ ತೆರಿಗೆದಾರ 60 ವರ್ಷ ಮೀರಿದ ವ್ಯಕ್ತಿಯಾಗಿದ್ದರೆ, ಬಡ್ಡಿ ಆದಾಯವೂ ಸೇರಿ ಎಲ್ಲ ಮೂಲಗಳಿಂದ ಬರುವ ಒಟ್ಟು ಆದಾಯ ₹ 3 ಲಕ್ಷಕ್ಕಿಂತ ಕಡಿಮೆ ಇದ್ದಾಗ ಅಥವಾ 80 ವರ್ಷ ಮೇಲ್ಪಟ್ಟ ವ್ಯಕ್ತಿಯಾಗಿದ್ದರೆ ಬರುವ ಒಟ್ಟು ನಿವ್ವಳ ಆದಾಯ ₹ 5 ಲಕ್ಷಕ್ಕಿಂತ ಕಡಿಮೆಯಾಗಿದ್ದರೆ, ಫಾರಂ 15ಎಚ್‌ ಅನ್ನು ಭರ್ತಿಮಾಡಿ ಬ್ಯಾಂಕ್‌ಗಳಿಗೆ ಕೊಡಬೇಕಾಗುತ್ತದೆ.

ಒಂದು ವೇಳೆ ಈ ಮೇಲಿನ ಯಾವುದೇ ಸನ್ನಿವೇಶಗಳಲ್ಲಿ ಪ್ರತಿ ಬ್ಯಾಂಕ್‌ನಿಂದ ತೆರಿಗೆದಾರ ಪಡೆಯುವ ಮೊತ್ತ ₹ 40,000 ಕ್ಕಿಂತ ಅಧಿಕವಾಗಿದ್ದು ಸಂಬಂಧಿಸಿದ ಯಾವುದೇ ಫಾರಂ ಅನ್ನು ಬ್ಯಾಂಕಿಗೆ ಭರ್ತಿ ಮಾಡಿ ಕೊಡದಿದ್ದಲ್ಲಿ, ಸಿಗುವ ಬಡ್ಡಿಯ ಶೇಕಡಾ 10 ರಷ್ಟು ಮೊತ್ತವನ್ನು ಬ್ಯಾಂಕ್ ಕಡಿತಗೊಳಿಸಬೇಕಾಗುತ್ತದೆ.

ಈ ಉದ್ದೇಶದಿಂದ, ನಿಗದಿತ ಫಾರಂಗಳನ್ನು ಏಪ್ರಿಲ್ ತಿಂಗಳ ಕೊನೆಯೊಳಗೆ ಅಥವಾ ಠೇವಣಿ ಇಡುವ ಸಂದರ್ಭದಲ್ಲಿ ವಾರ್ಷಿಕ ಬಡ್ಡಿ ₹ 40,000 ಮೀರುವ ನಿರೀಕ್ಷೆ ಇದ್ದರೆ, ತಕ್ಷಣ ಬ್ಯಾಂಕ್‌ಗಳಿಗೆ ಸಲ್ಲಿಸುವುದು ಯಾವತ್ತೂ ತೆರಿಗೆದಾರನ ದೃಷ್ಟಿಯಿಂದ ಒಳಿತು. ಇಂದಿನ ಡಿಜಿಟಲ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಯುಗದಲ್ಲಿ ಆಯಾ ಬ್ಯಾಂಕಿನ ವೆಬ್‍ಸೈಟಿಗೆ ಭೇಟಿ ನೀಡಿ ಈ ಮೇಲೆ ಉಲ್ಲೇಖಿಸಿರುವ ಫಾರಂ‍ಗಳನ್ನು ಆನ್‍ಲೈನ್ ಮೂಲಕವೂ ಸಲ್ಲಿಸಬಹುದು. ಇದಕ್ಕೆ ನೀವು ಕಡ್ಡಾಯವಾಗಿ ಪ್ಯಾನ್ ಹೊಂದಿದವರಾಗಿರಬೇಕು.

ಬಹು ಶಾಖಾ ಠೇವಣಿಗಳು
ಸಾಮಾನ್ಯವಾಗಿ ಒಂದೇ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಠೇವಣಿ ಇರಿಸಿದ ಸಂದರ್ಭದಲ್ಲಿ ಎಲ್ಲ ಶಾಖೆಗಳ ಬಡ್ಡಿ ಮೊತ್ತವನ್ನು ಒಟ್ಟುಗೂಡಿಸಿ ತೆರಿಗೆ ಕಡಿತದ ಮಿತಿಯಾದ ₹ 40,000 ಲೆಕ್ಕ ಹಾಕಲಾಗುತ್ತದೆ. ಒಬ್ಬ ಖಾತೆದಾರನ ಹೆಸರಲ್ಲಿರುವ ಪ್ಯಾನ್ ಹಾಗೂ ಬ್ಯಾಂಕ್ ನೀಡುವ ಗ್ರಾಹಕ ಸಂಖ್ಯೆಯ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿ ಎಲ್ಲ ಶಾಖೆಗಳ ಬಡ್ಡಿಯನ್ನು ಇಲ್ಲಿ ಪರಿಗಣಿಸಲಾಗುತ್ತದೆ. ಆಯಾ ಫಾರಂ‍ಗಳನ್ನು ಭರ್ತಿ ಮಾಡುವಾಗ ಈ ಎಲ್ಲ ಠೇವಣಿಗಳ ವಿವರಗಳನ್ನು ನೀಡಬೇಕಾಗುತ್ತದೆ.

ಬಹು ವಾರ್ಷಿಕ ಠೇವಣಿಗಳು
ಹೂಡಿಕೆದಾರರ ಆರ್ಥಿಕ ಕ್ಷಮತೆಗೆ ತಕ್ಕಂತೆ ಠೇವಣಿಗಳು ದೀರ್ಘಾವಧಿ ಅಥವಾ ಅಲ್ಪಾವಧಿ ಕಾಲದ್ದಾಗಿರಬಹುದು. ಅಂತಹ ಸಂದರ್ಭದಲ್ಲಿ ಇನ್ನೂ ಒಂದು ಅಂಶವನ್ನು ಗಮನಿಸಬೇಕು. ಉದಾಹರಣೆಗೆ 3 ರಿಂದ 5 ವರ್ಷದ ಅವಧಿಯ ಠೇವಣಿಗಳನ್ನು ತೆರೆದ ಸಂದರ್ಭದಲ್ಲಿ ಬಡ್ಡಿ ಮೊತ್ತ ಠೇವಣಿಯ ಅವಧಿ ಪೂರ್ಣಗೊಂಡ ನಂತರ ಮೂಲ ಠೇವಣಿಯೊಂದಿಗೆ ಪಾವತಿಸಲಾಗುತ್ತದೆ.

ಆದರೂ ಪ್ರತಿ ವರ್ಷ ನಿಗದಿತ ಬಡ್ಡಿಯನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ, ಫಾರಂ 15ಜಿ ಹಾಗೂ 15ಎಚ್ ಅನ್ನು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಸಲ್ಲಿಸುವುದು ಅನಿವಾರ್ಯ. ಇದನ್ನು ಸಲ್ಲಿಸದಿದ್ದ ಸಂದರ್ಭದಲ್ಲಿ ಬಡ್ಡಿಯ ಶೇಕಡಾ 10ರಷ್ಟು ಮೊತ್ತವನ್ನು ತೆರಿಗೆಯ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ.

ಏನೇನು ಮಾಹಿತಿಯ ತುಂಬಬೇಕು
ಠೇವಣಿದಾರರು ತಮ್ಮ ವೈಯಕ್ತಿಕ ವಿವರಗಳನ್ನಲ್ಲದೆ ಒಟ್ಟು ಆದಾಯದ ವಿವರಗಳನ್ನೂ ಇಲ್ಲಿ ನೀಡಬೇಕಾಗುತ್ತದೆ.ನೀವು ಬೇರೆ ಬೇರೆ ಬ್ಯಾಂಕ್‍ಗಳಲ್ಲಿ ಹಂತ ಹಂತವಾಗಿ ಠೇವಣಿ ಇಡುತ್ತಾ ಹೋದಂತೆ ಪ್ರತಿಬ್ಯಾಂಕ್‍ಗಳಿಗೆ ಕೊಡುವ ವಿವರದಲ್ಲೂ ಕ್ರೋಡೀಕೃತ ಮೊತ್ತವನ್ನು ಹಾಗೂ ಆ ವರ್ಷದಲ್ಲಿ ಈ ಹಿಂದೆ ಸಲ್ಲಿಸಿದ ಎಲ್ಲಾ ಫಾರಂಗಳ ಮಾಹಿತಿಯನ್ನೂ ನೀಡಬೇಕಾಗುತ್ತದೆ.

ಈ ರೀತಿ ಭರ್ತಿ ಮಾಡಿ ಕೊಟ್ಟ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆಗೆ ಬ್ಯಾಂಕ್‍ಗಳು ಸಲ್ಲಿಸುತ್ತವೆ. ಹೀಗಾಗಿ ಆಯಾ ವಯೋಮಿತಿಗೆ ಸಂಬಂಧಿಸಿದಂತೆ ವಾರ್ಷಿಕ ನಿವ್ವಳ ಆದಾಯ ಗರಿಷ್ಟ ವಿನಾಯ್ತಿ ಮೊತ್ತಕ್ಕಿಂತ ಅಧಿಕ ಇರುವವರು ಈ ಫಾರಂಗಳನ್ನು ಸಲ್ಲಿಸಿದಲ್ಲಿ ಅವುಗಳನ್ನು ಬ್ಯಾಂಕ್‍ಗಳು ಪರಿಗಣಿಸುವಂತಿಲ್ಲ. ಅಂಥ ಫಾರಂಗಳು ಸಿಂಧುವಲ್ಲ. ಮೇಲೆ ಉಲ್ಲೇಖಿಸಿದ ಫಾರಂಗಳನ್ನು ಉದ್ದೇಶ ಪೂರ್ವಕವಾಗಿ ತೆರಿಗೆ ಕಡಿತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸಲ್ಲಿಸಿರುವುದು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದರೆ ಅಂತಹ ತೆರಿಗೆದಾರರ ಮೇಲೆ ಕ್ರಮ ಜರುಗಿಸುವ ಅವಕಾಶವನ್ನು ಕಾನೂನಿನಲ್ಲಿ ಕಲ್ಪಿಸಲಾಗಿದೆ.

ಇತರ ಹೂಡಿಕೆಗಳು
ಯಾವುದೇ ತೆರಿಗೆದಾರ ಉದ್ಯೋಗಿಯಾಗಿರಬಹುದು, ಅಥವಾ ಸ್ವಂತ ವೃತ್ತಿ- ವ್ಯಾಪಾರ ನಿರ್ವಹಿಸುತ್ತಿರಬಹುದು . ಅದೇನೇ ಇದ್ದರೂ ತನ್ನ ಆದಾಯಕ್ಕೆ ಸರಿಹೊಂದಿಕೊಂಡು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಹೂಡಿಕೆಗಳಲ್ಲಿ ತಮ್ಮ ಹಣ ತೊಡಗಿಸಿಕೊಳ್ಳುವುದು ಸೂಕ್ತ.

ಯಾವುದೇ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವವರು, ತಮ್ಮ ಸಂಸ್ಥೆಯ ನಿಯಮಗಳಿಗನುಸಾರ ಆಯಾ ಸಾಲಿನ ಅಂದಾಜು ಹೂಡಿಕೆ ವಿವರಗಳನ್ನು ಫಾರಂ 12 ಬಿಬಿಯಲ್ಲಿ ಸಲ್ಲಿಸಬೇಕಾಗುತ್ತದೆ. ಇದು ಉದ್ಯೋಗಿಗೂ ಸಂಸ್ಥೆಗೂ ಇರುವ ತೆರಿಗೆ ಕಡಿತದ ಬಗೆಗಿನ ಅಧಿಕೃತ ದಾಖಲೆಯಾಗಿರುತ್ತದೆ.

ಇದಾದ ನಂತರ ವರ್ಷದ ಕೊನೆಗೆ, ತಮ್ಮ ಹೂಡಿಕೆಯ ನಿಖರವಾದ ದಾಖಲೆಗಳನ್ನು ಸಂಸ್ಥೆಗೆ ಸಲ್ಲಿಸಬೇಕಾಗುತ್ತದೆ. ಇದು ತಮ್ಮ ಮನೆ ಬಾಡಿಗೆ ಪಾವತಿ ದಾಖಲೆಗಳಿರಬಹುದು ಅಥವಾ 80 ಸಿ ಅಡಿ ಸಿಗುವ ತೆರಿಗೆ ವಿನಾಯ್ತಿ ವಿವರಗಳಿರಬಹುದು. ನಿಮ್ಮ ಸಮಯೋಚಿತ ಹಾಗೂ ತೆರಿಗೆ ಕಡಿತದ ಬಗೆಗಿನ ಸರಿಯಾದ ಕಾಳಜಿ ವರ್ಷದ ಕೊನೆಗೆ ಕಂಡುಬರುವ ಅನೇಕ ತೊಂದರೆಗಳನ್ನು ಸರಿಯಾಗಿ ನಿಭಾಯಿಸುವಲ್ಲಿ ಸಹಕಾರಿಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT